

ಮಧ್ಯಪ್ರದೇಶ: ಗುನಾ ಜಿಲ್ಲೆಯಲ್ಲಿ ಬೋರ್‌ವೆಲ್‌ಗೆ ಬಿದ್ದ 10 ವರ್ಷದ ಬಾಲಕನನ್ನು ಜೀವಂತವಾಗಿ ಹೊರತರಲು ಸತತ 16 ಗಂಟೆಗಳ ನಿರಂತರ ಕಾರ್ಯಾಚರಣೆ ಇದೀಗ ವಿಫಲವಾಗಿದ್ದು, ಬಾಲಕ ಸಾವನ್ನಪ್ಪಿರುವುದಾಗಿ ಉನ್ನತ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ.
ಶನಿವಾರ (ಡಿ.28) ಮಧ್ಯಾಹ್ನದ ವೇಳೆಗೆ ರಾಘೋಘರ್‌ನ ಜಾಂಜಲಿ ಪ್ರದೇಶದಲ್ಲಿ ನಡೆದ ಈ ದುರಂತದಲ್ಲಿ ಬಾಲಕ ಕಡೆಗೂ ಸಾವಿನಲ್ಲಿ ಅಂತ್ಯ ಕಂಡಿರುವುದು ಸದ್ಯ ಗ್ರಾಮಸ್ಥರನ್ನು ಆಘಾತಕ್ಕೆ ದೂಡಿದೆ. ಇಂದು ಬೆಳಗ್ಗೆ 9.30ರ ಸುಮಾರಿಗೆ ಬೋರ್‌ವೆಲ್‌ನಿಂದ ಬಾಲಕನನ್ನು ಹೊರತೆಗೆದ ರಕ್ಷಣಾ ಪಡೆ, ಸುಮಾರು 39 ಅಡಿ ಆಳದಲ್ಲಿ ಸಿಲುಕಿದ್ದ ಬಾಲಕನನ್ನು ಜೀವಂತವಾಗಿ ಹೊರತರುವಲ್ಲಿ ವಿಫಲವಾಯಿತು. ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಮತ್ತು ಸ್ಥಳೀಯ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲಾಗಿತ್ತು.
ದುರಂತದ ಬಗ್ಗೆ ಗುಣಾ ಎಎಸ್ಪಿ ಮಾನ್ ಸಿಂಗ್ ಠಾಕೂರ್ ಮಾತನಾಡಿ, "ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಸುಮಿತ್ ಎಂಬ 10 ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದರು. ಅವರನ್ನು ಹೊರತೆಗೆಯುವ ರಕ್ಷಣಾ ಕಾರ್ಯಾಚರಣೆ ಸಂಜೆ 6 ಗಂಟೆಯಿಂದ ಪ್ರಾರಂಭವಾಯಿತು. ಇಂದು ಬೆಳಗ್ಗೆ 9.30ರ ಸುಮಾರಿಗೆ ಸುಮಿತ್‌ನನ್ನು ಬೋರ್‌ವೆಲ್‌ನಿಂದ ಹೊರತೆಗೆಯಲಾಯಿತು. ಆದರೆ, ದುರಾದೃಷ್ಟವಶಾತ್ ಅವರು ಮೃತಪಟ್ಟಿದ್ದಾರೆ" ಎಂದು ತಿಳಿಸಿದರು.
ರಾಜಸ್ಥಾನದ ಕೋಟ್‌ಪುಟ್ಲಿಯಲ್ಲಿ 700 ಅಡಿ ಆಳದ ಬೋರ್‌ವೆಲ್‌ಗೆ 3 ವರ್ಷದ ಬಾಲಕಿ ಬಿದ್ದು ಒಂದು ವಾರದ ಬೆನ್ನಲ್ಲೇ ಈ ಘಟನೆ ಸಂಭವಿಸಿರುವುದು ದುರಂತ. ಎರಡು ವಾರಗಳ ಹಿಂದೆ, ದೌಸಾ ಜಿಲ್ಲೆಯಲ್ಲಿ ಐದು ವರ್ಷದ ಬಾಲಕ ಬೋರ್‌ವೆಲ್‌ಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ 55 ಗಂಟೆಗಳ ಕಾಲ ನಡೆದಿತ್ತು. ಅಂತಿಮವಾಗಿ ಆತನನ್ನು ಜೀವಂತವಾಗಿ ಹೊರ ತರುವಲ್ಲಿ ರಕ್ಷಣಾ ಪಡೆ ವಿಫಲವಾಯಿತು. ಸದ್ಯ ಈ ಘಟನೆ ಕೂಡ ಅದೇ ಸಾಲಿಗೆ ಸೇರಿದ್ದು, ಮಗನನ್ನು ಕಳೆದುಕೊಂಡ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ,(ಏಜೆನ್ಸೀಸ್).