

ಬೆಂಗಳೂರು: ಸೈಕಲ್ ತುಳಿಯುತ್ತಿದ್ದ ಬಾಲಕನ ಮೇಲೆ ಲಾರಿ ಚಕ್ರಗಳು ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಸುಮ್ಮನಹಳ್ಳಿ ಸಣ್ಣಕ್ಕಿಬಯಲುನಲ್ಲಿ ಸೋಮವಾರ ಸಂಜೆ ಈ ಘಟನೆ ನಡೆದಿದೆ.
ರಾಜೇಶ್ ಮತ್ತು ಜ್ಯೋತಿ ದಂಪತಿಯ ಪುತ್ರ ಶಶಾಂಕ್(೧೨) ಮೃತ ಬಾಲಕ.
ಶಶಾಂಕ್ ತಮ್ಮ ಮನೆ ಸಮೀಪದ ಬಿಬಿಎಂಪಿ ಶಾಲೆಯಲ್ಲಿ ೮ ನೇ ತರಗತಿಯಲ್ಲಿ ಓದುತ್ತಿದ್ದ. ಎಂದಿನಂತೆ ಸೋಮವಾರ ಸಂಜೆ ೪ ಗಂಟೆಯ ವೇಳೆಯ ಮನೆಯ ಆವರಣದಲ್ಲಿ ಸೈಕಲ್ ತುಳಿಯುತ್ತಿದ್ದ. ಮನೆಯ ಮುಂಭಾಗವಿರುವ ಪಾದಚಾರಿ ಮಾರ್ಗ ತುಂಬಾ ಇಳಿಜಾರಿನಿಂದ ಕೂಡಿದ್ದು, ಸೈಕಲ್ ತುಳಿಯುತ್ತಿದ್ದವನು ನಿಯಂತ್ರಣ ತಪ್ಪಿ ಇಳಿಜಾರಿನಿಂದ ಹೊರಗೆ ಬಂದು ಬಲ ಭಾಗಕ್ಕೆ ಬಿದ್ದಿದ್ದು, ಇದೇ ಸಮಯಕ್ಕೆ ಮರಳು ತುಂಬಿದ್ದ ಲಾರಿಯೊಂದು ಬಂದಿದ್ದು ಅದರ ಚಕ್ರ ಆತನ ಮೇಲೆ ಅದು ಹರಿದ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಚಾಲಕ ಲಾರಿ ಬಿಟ್ಟು ಪರಾರಿಯಾಗಿದ್ದು, ಆತನಿಗಾಗಿ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.