ಹಾವು ಕಚ್ಚಿದೆ ಅಂತ ಆಸ್ಪತ್ರೆಗೆ ಕರೆ ತಂದರೂ 'ಇಲ್ಲ ಕಚ್ಚಿಲ್ಲ' ಎಂದು ವಾಪಸ್ ಕಳಿಸಿದ ಡಾಕ್ಟರ್; ವೈದ್ಯರ ನಿರ್ಲಕ್ಷ್ಯದಿಂದ ಬಾಲಕ ಸಾವು

Boy Snake
Published on

ತುಮಕೂರು: ಹಾವು ಕಚ್ಚಿದೆ ಎಂದು ಬಾಲಕನನ್ನು ಆಸ್ಪತ್ರೆಗೆ ಕರೆ ತಂದರೂ, ಇಲ್ಲ ಕಚ್ಚಿಲ್ಲ ಎಂದು ಡಾಕ್ಟರ್ ಚಿಕಿತ್ಸೆ ನೀಡದೆ ವಾಪಸ್ ಕಳಿಸಿದ್ದರಿಂದ ಆತ ಸಾವಿಗೀಡಾದ ಪ್ರಕರಣವೊಂದು ನಡೆದಿದೆ. ತುಮಕೂರು ಜಿಲ್ಲೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.

ಪಾವಗಡ ತಾಲ್ಲೂಕಿನ ಕ್ಯಾತಗಾನಗೆರೆ ಗ್ರಾಮದ ನಾಗರಾಜ್ ಎಂಬವರ ಪುತ್ರ ಆಕಾಶ್ (6) ಸಾವಿಗೀಡಾದ ಬಾಲಕ. ಈತನಿಗೆ ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಾಗ ಹಾವು ಕಚ್ಚಿತ್ತು. ಕೂಡಲೇ ರಾತ್ರಿ 12 ಗಂಟೆ ಸುಮಾರಿಗೆ ಪಾಲಕರು ಪಾವಗಡ ತಾಲ್ಲೂಕು ಆಸ್ಪತ್ರೆಗೆ ಬಾಲಕನನ್ನು ಕರೆತಂದಿದ್ದರು.

ಬಾಲಕನಿಗೆ ಹಾವು ಕಚ್ಚಿದೆ ಎಂದು ಡಾ.ರಂಗನಾಥ್ ಅವರ ಬಳಿ ಹೇಳಿದಾಗ, ಅವರು ಹಾವು ಕಚ್ಚಿಲ್ಲ ಎಂದಿದ್ದಾರೆ. ಹಾವು ಕಚ್ಚಿದೆ ಎಂದು ಮನೆಯವರು ಮತ್ತೆ ಹೇಳಿದಾಗಲೂ ಇಲ್ಲ ಕಚ್ಚಿಲ್ಲ ಎಂದು ಒಂದು ಇಂಜೆಕ್ಷನ್ ಕೊಟ್ಟು ಸೂಕ್ತ ಚಿಕಿತ್ಸೆ ನೀಡದೆ ವಾಪಸ್ ಕಳಿಸಿದ್ದಾರೆ. ಮಾರ್ಗ ಮಧ್ಯೆ ಬಾಲಕನ ಬಾಯಿಯಿಂದ ನೊರೆ ಬರಲಾರಂಭಿಸಿದ್ದು, ಅಸ್ವಸ್ಥಗೊಂಡ ಆತನನ್ನು ಮತ್ತೆ ಅದೇ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಆಗ ಬಾಲಕನ ರಕ್ತ ಪರೀಕ್ಷೆ ಮಾಡಿಸಬೇಕು ಎಂದರು. ನಂತರ ಬರೋಬ್ಬರಿ 2 ಗಂಟೆಗಳ ಕಾಲ ಆಸ್ಪತ್ರೆಯಲ್ಲಿ ಕಾಯಿಸಿ, ಕೊನೇ ಗಳಿಗೆಯಲ್ಲಿ ಮಗುವಿನ ಸ್ಥಿತಿ ಗಂಭೀರವಾಗಿದೆ‌. ಕೂಡಲೇ ತುಮಕೂರು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವಂತೆ ಡಾ.ರಂಗನಾಥ್ ಸೂಚಿಸಿದ್ದರು. ಆದರೆ ಪಾವಗಡದಿಂದ ತುಮಕೂರಿಗೆ ಹೋಗುವ ಮಾರ್ಗಮಧ್ಯೆ ಬಾಲಕ ಮೃತಪಟ್ಟಿದ್ದಾನೆ ಎಂದು ಬಾಲಕನ ಮನೆಯವರು ತಿಳಿಸಿದ್ದಾರೆ.

ಮಗು ಸಾವಿಗೆ ಆಸ್ಪತ್ರೆ ವೈದ್ಯರೇ ಕಾರಣ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದು, ಇಂದು ಆಸ್ಪತ್ರೆ ಎದುರು ಶವ ಇರಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ. ಸ್ಥಳಕ್ಕೆ ಪಾವಗಡ ಪೊಲೀಸರು ಭೇಟಿ ನೀಡಿ, ಪ್ರತಿಭಟನೆ ನಡೆಸುತ್ತಿದ್ದವರನ್ನ ಮನವೊಲಿಸಲು ಯತ್ನಿಸಿದ್ದಾರೆ.

ಪಾವಗಡ ಠಾಣೆಯ ಪೊಲೀಸ್ ಇನ್​ಸ್ಪೆಕ್ಟರ್ ಕರೆ ಮಾಡಿದ್ದರೂ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುನಾಥ್ ಕರೆ ಸ್ವೀಕರಿಸಿರಲಿಲ್ಲ. ಡಿಎಚ್​ಒ ಆಸ್ಪತ್ರೆಗೆ ಭೇಟಿ ನೀಡದೇ ಇರುವುದೇ ವೈದ್ಯರ ನಿರ್ಲಕ್ಷ್ಯಕ್ಕೆ ಕಾರಣ ಎಂದು ಸ್ಥಳೀಯರ ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net