KSRTC ಬಸ್​ನ ಗಾಜಿನ ಮೇಲೆ ಬಾಟೆಲ್​ ಎಸೆದ ಕಾರಿನಲ್ಲಿದ್ದ ಪುಂಡರು: ಪ್ರಶ್ನಿಸಿದ್ದಕ್ಕೆ ಚಾಲಕನ ಮೇಲೆ ಹಲ್ಲೆ!

Bus Driver
Published on

ಚಿಕ್ಕಮಗಳೂರು: ಕೆಎಸ್​ಆರ್​ಟಿಸಿ ಬಸ್ಸಿನ ಗಾಜಿನ ಮೇಲೆ ಖಾಲಿ ಗಾಜಿನ ಬಾಟೆಲ್​ ಎಸೆದು ಯುವಕರು ಪುಂಡಾಟ ಮೆರೆದಿರುವ ಘಟನೆ ಕಡೂರು ತಾಲೂಕಿನ ಬೀರೂರು ಸಮೀಪದ ‌ಹೋರಿತಿಮ್ಮನಹಳ್ಳಿ ಗೇಟ್ ಬಳಿ ನಿನ್ನೆ (ಜು.07) ನಡೆದಿದೆ.

ಬಸ್ಸಿನ ಮುಂಭಾಗದ ಗಾಜಿಗೆ ಬಾಟಲಿ ಎಸೆದಿದ್ದರಿಂದ ಗಾಜು ಪುಡಿ ಪುಡಿಯಾಗಿದೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ಚಾಲಕನ ಮೇಲೆಯೇ ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಬಾಟಲಿ ಎಸೆದವರು ಬಸ್ಸಿನ ಮುಂಭಾಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿದ್ದರು. ಕಾರಿನಿಂದಲೇ ಬಾಟಲಿ ಎಸೆದಿದ್ದಾರೆ.

ನಾಲ್ವರ ವಿರುದ್ಧ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಕಿರಣ್, ಸತೀಶ್, ಸಚಿನ್ ಮತ್ತು ಸುಪ್ರೀತ್ ಎಂದು ಗುರುತಿಸಲಾಗಿದೆ. ನಾಲ್ವರನ್ನು ಬಂಧಿಸಲಾಗಿದೆ. ಹಲ್ಲೆಗೊಳಗಾದ ಕಡೂರು ವಿಭಾಗದ ಚಾಲಕ ಸತೀಶ್, ಬೀರೂರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕೆಎಸ್​ಆರ್​ಟಿಸಿ ಬಸ್​, ಕಡೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿತ್ತು.

ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಹಲ್ಲೆ ಮಾಡುತ್ತಿರುವ ವಿಡಿಯೋ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net