

ವಾಸ್ತವವಾಗಿ ಈ ಎರಡೂ ಅಂದರೆ ಅತಿ ಸುಖ ಮತ್ತು ಅತಿದುಃಖ - ಈ ಎರಡೂ ನಿಜವಾಗಿಯೂ ಅಶಾಂತಿಯೇ. ದುಃಖದಿಂದ ಬರುವ ಶಾಂತಿ ನಮಗೆ ಅಪ್ರೀತಿಕರವಾಗಿರುತ್ತದೆ. ಸುಖದಿಂದ ಸಿಗುವ ಶಾಂತಿ ನಮಗೆ ಪ್ರೀತಿಕರವಾಗಿರುತ್ತದೆ. ಆದರೆ ಇವೆರಡೂ ಮನಸ್ಸಿನ ಉದ್ವೇಗದಿಂದಲೇ ಪ್ರಾಪ್ತಿಯಾಗುವಂಥವು. ಈ ಎರಡೂ ನಮ್ಮ ಚಿತ್ತವನ್ನು ಉದ್ವಿಗ್ನಗೊಳಿಸುವ ಹಾಗೂ ಉತ್ತೇಜಿಸುವ ಅವಸ್ಥೆಗಳಾಗಿವೆ.
ಒಂದು ವೇಳೆ ಸುಖ ಹೆಚ್ಚಾದರೆ ಅದೇ ಉತ್ತೇಜನ. ನಮ್ಮನ್ನು ಅದು ಮೃತ್ಯುವಿನ ಬಳಿಗೂ ಕರೆದೊಯ್ಯಲು ಸಾಧ್ಯ. ಒಂದು ವೇಳೆ ಆಕಸ್ಮಿಕವಾಗಿ ಸುಖ ಸಂಭವಿಸಿದರೂ ಮೃತ್ಯು ಸಂಭವವಾಗುತ್ತದೆ. ಆದ್ದರಿಂದ ಸುಖವೂ ನಮ್ಮನ್ನು ಉತ್ತೇಜಿಸುತ್ತದೆ, ದುಃಖವೂ ಉತ್ತೇಜಿಸುತ್ತದೆ. ಉತ್ತೇಜನರಹಿತವಾದಂಥ ಸ್ಥಿತಿಯ ಹೆಸರೇ ಆನಂದ.
ಅಲ್ಲಿ ಯಾವುದೇ ರೀತಿಯ ಉತ್ತೇಜನಗಳು ಇರುವುದಿಲ್ಲ. ಉತ್ತೇಜನದ ಅರ್ಥ ಹೊರಗಡೆಯ ವಸ್ತುಗಳ ಜೊತೆಗೆ ಸಂಬಂಧವನ್ನು ಬೆಳೆಸುವುದಾಗಿದೆ. ಪ್ರಶಾಂತವಾದ ಕೊಳದಲ್ಲಿ ಅಲೆಗಳು ಉದ್ಭವವಾಗುವವು. ನೀರಿನ ತರಂಗಗಳು ಅದರಿಂದ ಕಲಕಿದವು. ಈ ಅಲೆಗಳು ಗಾಳಿಯಿಂದ ಉಂಟಾಗುತ್ತವೆ. ಗಾಳಿಯ ಪ್ರಭಾವದಿಂದ ಕಂಪನ ಆಗುತ್ತದೆ.
ಒಂದು ವೇಳೆ ಶಾಂತವಾದ ಆ ಕೆರೆಯ ಹೊರಗಡೆಯ ಗಾಳಿಯಿಂದ ಪ್ರಭಾವಿತವಾಗದೆ ಇದ್ದರೆ, ಅದು ಪರಿಪೂರ್ಣ ಶಾಂತವಾಗಿರುತ್ತದೆ. ಆದರೆ ಹಾಗಾಗುವುದಿಲ್ಲ. ಸುಖ ಮತ್ತು ದುಃಖದ ಎರಡೂ ಅನುಭವಗಳು ಹೊರಗಡೆಯ ವಸ್ತು ವಿಷಯಗಳಿಂದ ಉಂಟಾಗುತ್ತವೆ. ಹಾಗೆ ನೋಡಿದರೆ ಆನಂದದ ಅನುಭವ ಹೊರಗಡೆಯ ವಸ್ತುಗಳಿಂದ ಉಂಟಾಗುವುದಿಲ್ಲ. ಆದ್ದರಿಂದ ಸುಖ ಮತ್ತು ದುಃಖವನ್ನು ತೆಗೆದುಹಾಕಲು ಸಾಧ್ಯ, ಕಾರಣ ಅದು ಹೊರಗಡೆಯಿಂದ ಬರುವಂಥದ್ದಾಗಿದೆ.