ಬೂತ್‌ಮಟ್ಟದಲ್ಲಿ ಬಿಜೆಪಿ ಸಂಘಟನೆಯಾಗಲಿ: ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಮುದಾ ವೇಣು ಕರೆ

24-klr-12
Published on

ಕೋಲಾರ : ಜಿಲ್ಲೆಯಲ್ಲಿ ಬಿಜೆಪಿಯನ್ನು ಬೂತ್‌ಮಟ್ಟದಿಂದ ಸಂಘಟಿಸಲು ಪಕ್ಷದ ಮಹಿಳಾ ಮೋರ್ಚಾ ಪ್ರಮುಖ ಪಾತ್ರವಹಿಸಬೇಕು ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅಮುದಾ ವೇಣು ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆದ ಬಿಜೆಪಿ ನಗರ ಮಹಿಳಾ ಮೋರ್ಚಾ ಘಟಕದ ಕಾರ್ಯಕಾರಿಣಿ ಸಮಿತಿ ಸಭೆ ಹಾಗೂ ರಕ್ಷಾಬಂಧನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬೂತ್‌ಮಟ್ಟದಲ್ಲಿ ಮಂಡಲ್ ಸಮಿತಿ ರಚಿಸಿ ಪಕ್ಷ ಸಂಘಟನೆಗೆ ಇರುವ ಎಲ್ಲ ಅವಕಾಶ ಬಳಸಿಕೊಳ್ಳಬೇಕು. ರಾಜ್ಯ ಘಟಕದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದೆ. ಜನಪರ ಕಾರ್ಯಕ್ರಮ ಜಾರಿಗೆ ತಂದಿದ್ದರು, ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ಮೂಲಕ ಪಕ್ಷದ ಮೇಲಿನ ವಿಶ್ವಾಸ ಹೆಚ್ಚಿಸಬೇಕು ಎಂದರು.

ಬಿಜೆಪಿ ನಗರ ಘಟಕ ಅಧ್ಯಕ್ಷ ತಿಮ್ಮರಾಯಪ್ಪ ಮಾತನಾಡಿ, ನಗರದಲ್ಲಿ ಬಿಜೆಪಿ ಸಂಘಟನೆಗೆ ಕೊರತೆಯಿಲ್ಲ. ಕರೊನಾ ಸಮಯದಲ್ಲಿ ಸೇವೆಯೇ ಸಂಘಟನೆ ಕಾರ್ಯಕ್ರಮದಡಿ ನಡೆಸಿದ ಅನೇಕ ಸೇವಾ ಚಟುವಟಿಕೆಗಳು ಪ್ರತಿ ವ್ಯಕ್ತಿಯ ಮನಸ್ಸು ಮುಟ್ಟಿದೆ.

ಸಂಕಷ್ಟದ ಸಮಯದಲ್ಲಿ ಒಂದು ರಾಜಕೀಯ ಪಕ್ಷ ಯಾವ ರೀತಿ ಜನರಿಗೆ ಸಹಾಯ ಮಾಡಬಲ್ಲದು ಎಂಬುದನ್ನು ಬಿಜೆಪಿ ಸಮಾಜಕ್ಕೆ ತೋರಿಸಿಕೊಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪರ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯ ಆಗಬೇಕು ಎಂದರು.

ಬಿಜೆಪಿ ಕೋರ್ ಕಮಿಟಿ ಸದಸ್ಯ ವಿಜಯ್‌ಕುಮಾರ್, ಜಿಲ್ಲಾ ಉಪಾಧ್ಯಕ್ಷೆ ಅರುಣಮ್ಮ, ನಗರ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ವೇತಾ, ನಗರಾಧ್ಯಕ್ಷೆ ಸೆಲ್ವಿ ರಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶೋಭಾ, ತಾಲೂಕು ಪ್ರಧಾನ ಕಾರ್ಯದರ್ಶಿ ಸುಶೀಲಮ್ಮ, ಕಾರ್ಯದರ್ಶಿ ರಾಜೇಶ್‌ಸಿಂಗ್, ನಗರಸಭೆ ನಾಮ ನಿರ್ದೇಶಿತ ಸದಸ್ಯ ಶ್ರೀಗಂಧ ರಾಜೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net