ಚೀನಾದೊಂದಿಗಿನ ಗಡಿ ಸಮಸ್ಯೆಯೇ ನಮಗೆ ದೊಡ್ಡ ಸವಾಲು; ಸಿಡಿಎಸ್ ಅನಿಲ್ ಚೌಹಾಣ್| Anil Chauhan

Anil chauhan
Published on

Anil Chauhan: ಚೀನಾದೊಂದಿಗಿನ ಗಡಿ ಸಮಸ್ಯೆಯೇ ಭಾರತದ ಅತಿದೊಡ್ಡ ಸವಾಲು, ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದನೆಯೂ ಎರಡನೇ ಸವಾಲು ಎಂದು ಶುಕ್ರವಾರ (ಸೆ. 05) ಭಾರತೀಯ ಮೂರು ಸೇನಾಪಡೆಗಳ ಮುಖ್ಯಸ್ಥ ಅನಿಲ್ ಚೌಹಾಣ್ ಹೇಳಿದ್ದಾರೆ.

ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಸಿಡಿಎಸ್, ಒಂದು ದೇಶ ಎದುರಿಸುತ್ತಿರುವ ಸವಾಲುಗಳು ಕ್ಷಣಿಕವಲ್ಲ, ಬದಲಾಗಿ ವಿಭಿನ್ನ ರೂಪಗಳಲ್ಲಿ ಬರುತ್ತವೆ. ಚೀನಾದೊಂದಿಗಿನ ಗಡಿ ವಿವಾದ ಭಾರತಕ್ಕೆ ದೊಡ್ಡ ಸವಾಲು ಎಂದು ನಾನು ಭಾವಿಸುತ್ತೇನೆ. ಅದು ಹಾಗೆಯೇ ಮುಂದುವರಿಯುತ್ತದೆ. ಎರಡನೇ ಪ್ರಮುಖ ಸವಾಲು ಪಾಕಿಸ್ತಾನ ಭಾರತದ ವಿರುದ್ಧ ನಡೆಸುತ್ತಿರುವ ಪ್ರಾಕ್ಸಿ ಯುದ್ಧ ಎಂದು ಹೇಳಿದರು.

ಪ್ರಾದೇಶಿಕ ಅಸ್ಥಿರತೆಯೂ ಒಂದು ಕಳವಳಕಾರಿ ವಿಷಯವಾಗಿದೆ. ಭಾರತದ ನೆರೆಹೊರೆಯ ದೇಶಗಳು ಸಾಮಾಜಿಕ, ರಾಜಕೀಯ ಅಥವಾ ಆರ್ಥಿಕ ಅಶಾಂತಿಯನ್ನು ಎದುರಿಸುತ್ತಿವೆ. ಯುದ್ಧ ಕ್ಷೇತ್ರಗಳಲ್ಲಿನ ಬದಲಾವಣೆಗಳು ಮತ್ತೊಂದು ಕಳವಳಕಾರಿ ವಿಷಯ, ಇದರಲ್ಲಿ ಈಗ ಸೈಬರ್ ಮತ್ತು ಬಾಹ್ಯಾಕಾಶವೂ ಸೇರಿದೆ ಎಂದು ಬಣ್ಣಿಸಿದ್ದಾರೆ.

ನಮ್ಮ ಎರಡೂ ಎದುರಾಳಿಗಳು ರಾಷ್ಟ್ರಗಳು ಪರಮಾಣು ಶಕ್ತಿಗಳು. ಅವರ ವಿರುದ್ಧ ನಾವು ಯಾವ ರೀತಿಯ ಕಾರ್ಯಾಚರಣೆಗಳನ್ನು ನಡೆಸಬೇಕೆಂದು ನಿರ್ಧರಿಸುವುದು ಯಾವಾಗಲೂ ಒಂದು ಸವಾಲಾಗಿದೆ. ಆಪರೇಷನ್ ಸಿಂದೂರ್‌ನಲ್ಲಿ ಗುರಿಗಳನ್ನು ಯೋಜಿಸುವುದು ಮತ್ತು ಆಯ್ಕೆ ಮಾಡುವಲ್ಲಿ ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಲಾಗಿತ್ತು. ಅದತ ಉದ್ದೇಶ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವುದಲ್ಲ, ಬದಲಾಗಿ ದೇಶದ ಸಹಿಷ್ಣುತೆಗೆ ಕೆಂಪು ರೇಖೆಯನ್ನು ಎಳೆಯುವುದಾಗಿತ್ತು. ಆಪರೇಷನ್ ಸಿಂದೂರ್ ಸೈಬರ್ ಯುದ್ಧ ಸೇರಿದಂತೆ ಬಹು-ಡೊಮೇನ್ ಕಾರ್ಯಾಚರಣೆಯಾಗಿದ್ದು, ಮಿಲಿಟರಿ ಶಾಖೆಗಳ ನಡುವಿನ ಸಮನ್ವಯ ಮತ್ತು ಜಂಟಿ ಸಜ್ಜುಗೊಳಿಸುವಿಕೆ ಅದರಲ್ಲಿ ಪ್ರಮುಖ ಅಂಶಗಳಾಗಿವೆ ಎಂದಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net