

ನವದೆಹಲಿ: ಕರೊನಾ ವೈರಸ್ನ ಒಮಿಕ್ರಾನ್ ರೂಪಾಂತರಿಯ ಬಿಎ.1 ಉಪ-ತಳಿಯ ವಿರುದ್ಧ ಕೋವಿಶೀಲ್ಡ್ ಲಸಿಕೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಅದಕ್ಕೆ ಬೂಸ್ಟರ್ ಡೋಸ್ ನೀಡಿಕೆಯೇ ಪರಿಹಾರ ಎಂದು ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್), ರಾಷ್ಟ್ರೀಯ ವೈರಾಣುಶಾಸ್ತ್ರ ಸಂಸ್ಥೆ (ಎನ್ಐವಿ) ನಡೆಸಿದ ಅಧ್ಯಯನ ತಿಳಿಸಿದೆ. ಸ್ಪೈಕ್ ವಲಯದಲ್ಲಿ ಅಧಿಕ ರೂಪಾಂತರಿಗಳು ಇರುವುದರಿಂದ ಒಮಿಕ್ರಾನ್ನಲ್ಲಿ ರೋಗ ನಿರೋಧಕತೆಯಿಂದ ತಪ್ಪಿಸಿಕೊಳ್ಳುವ ಶಕ್ತಿ ಹೆಚ್ಚಿದೆ ಎಂದು ಅಧ್ಯಯನದಲ್ಲಿ ಪಾಲ್ಗೊಂಡಿದ್ದ ವಿಜ್ಞಾನಿಯೊಬ್ಬರು ಹೇಳಿದ್ದಾರೆ. ಸಂಶೋಧನೆಗಾಗಿ, ಸೋಂಕಿತರಲ್ಲದ 24 ಜನರಿಂದ ಕೋವಿಶೀಲ್ಡ್ ಲಸಿಕೆಯ ಎರಡನೇ ಡೋಸ್ ಪಡೆದ 180 ದಿನಗಳ ನಂತರ ಹಾಗೂ ಕೋವಿಡ್ನಿಂದ ಚೇತರಿಸಿಕೊಂಡ ಹಾಗೂ ಕೋವಿಶೀಲ್ಡ್ನ ಎರಡೂ ಡೋಸ್ ಪಡೆದ 17 ಜನರಿಂದ ಸೆರಂ ಸ್ಯಾಂಪಲ್ಗಳನ್ನು ಸಂಗ್ರಹಿಸಲಾಗಿತ್ತು. ಮೂರನೇ ಗುಂಪಿನಲ್ಲಿ, ಕೋವಿಶೀಲ್ಡ್ನ ಎರಡೂ ಡೋಸ್ ಪಡೆದ ನಂತರ ಕರೊನಾದ ಬ್ರೇಕ್ಥ್ರೂ ಸೋಂಕು ತಗಲಿದ 46 ಜನರಿಂದ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು.
ಬುಧವಾರ ಪ್ರಧಾನಿ ಸಭೆ: ದೇಶದಲ್ಲಿ ಕಳೆದೆರಡು ವಾರಗಳಿಂದ ಕರೊನಾ ಸಂಖ್ಯೆಯಲ್ಲಿ ಏರಿಕೆ ಯಾಗುತ್ತಿರುವುದರಿಂದ ಪರಿಸ್ಥಿತಿಯ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ಉನ್ನತ ಮಟ್ಟದ ಸಭೆಯೊಂದನ್ನು ನಡೆಸಲಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ, ಆರೋಗ್ಯ ಮಂತ್ರಿ ಮನಸುಖ್ ಮಾಂಡವೀಯ, ಸಂಬಂಧಪಟ್ಟ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ಪ್ರಧಾನ ಮಂತ್ರಿ ಕಚೇರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಶಾಂಘೈಯಲ್ಲಿ ಸೋಂಕಿತರ ಮನೆಗಳಿಗೆ ಬೇಲಿ: ಉಲ್ಬಣಗೊಂಡಿರುವ ಕರೊನಾ ಸೋಂಕನ್ನು ನಿಯಂತ್ರಿಸಲು ಹೆಣಗಾಡುತ್ತಿರುವ ಚೀನಾದ ಶಾಂಘೈ ಮಹಾನಗರದ ಅಧಿಕಾರಿಗಳು ಸೋಂಕಿತರ ಕೆಲವು ಮನೆಗಳ ಹೊರಗೆ ಮೆಶ್ ತಡೆಬೇಲಿ ಹಾಕುತ್ತಿರುವುದರಿಂದ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ. 2.5 ಕೋಟಿ ಜನಸಂಖ್ಯೆಯ ನಗರದಲ್ಲಿ ಲಾಕ್ಡೌನ್ ವಿಧಿಸಿರುವುದಕ್ಕೇ ಅಸಮಾಧಾನ ದಾಖಲಿಸುತ್ತಿದ್ದ ನಿವಾಸಿಗಳು ಇದೀಗ ಬೇಲಿ ಹಾಕುವ ಕ್ರಮದಿಂದ ಇನ್ನಷ್ಟು ಬೇಸತ್ತು ಹೊಸದಾಗಿ ವಿರೋಧ ಆರಂಭಿಸಿದ್ದಾರೆ. ಮನೆಗಳ ಪ್ರವೇಶದ್ವಾರಗಳಲ್ಲಿ ಮೆಶ್ ಹಾಕುತ್ತಿರುವ ಕಾರ್ವಿುಕರತ್ತ ನಿವಾಸಿಗಳು ಬಾಲ್ಕನಿಗಳಲ್ಲಿ ನಿಂತು ಕೂಗಾಡುತ್ತಿರುವ ದೃಶ್ಯದ ವಿಡಿಯೋ ಒಂದು ವೈರಲ್ ಆಗಿದೆ.
ಹರಡುವ ವಿಧಾನ ಪತ್ತೆ: ಒಮಿಕ್ರಾನ್ನ ಬಿಎ.1 ಮತ್ತು ಬಿ.ಎ.2 ಉಪ-ತಳಿಗಳು ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಹಾಗೂ ತ್ವರಿತವಾಗಿ ಹರಡುವ ವಿಧಾನವನ್ನು ಅಮೆರಿಕದ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದು ಹೊಸ ಚಿಕಿತ್ಸಾ ವಿಧಾನದ ಅಭಿವೃದ್ಧಿಗೆ ನೆರವಾಗುತ್ತದೆ ಎಂಬ ಆಶಾವಾದ ಹುಟ್ಟಿಸಿದೆ. ಒಮಿಕ್ರಾನ್ ಈ ಎರಡು ಪ್ರಮುಖ ಉಪ-ತಳಿಗಳಲ್ಲಿ ಸ್ಪೈಕ್ ಪ್ರೊಟೀನ್ ರೂಪಾಂತರಿಗಳಿವೆ. ಬಿಎ.1ರಲ್ಲಿ 33 ಹಾಗೂ ಬಿಎ.2ರಲ್ಲಿ 29 ಪ್ರಭೇದಗಳಿವೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಪ್ರಭೇದಗಳೇ ಅವುಗಳ ತ್ವರಿತ ಪ್ರಸರಣಕ್ಕೆ ಹಾಗೂ ರೋಗನಿರೋಧಕ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳಲು ನೆರವಾಗುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮುದ್ರಣಪೂರ್ವ ಜಾಲ ಬಯೋಆರ್ಎಕ್ಸ್ಐವಿಯಲ್ಲಿ ಸಂಶೋಧನೆಯ ಫಲಿತಾಂಶವನ್ನು ಪ್ರಕಟಿಸಲಾಗಿದೆ. ರೋಗನಿರೋಧಕ ವ್ಯವಸ್ಥೆಯಿಂದ ವೈರಸ್ ತಪ್ಪಿಸಿಕೊಳ್ಳುವ ವಿಧಾನದ ಬಗ್ಗೆ ಹಿಂದೆ ಗೊತ್ತಿರದ ಅಂಶ ಈ ಸಂಶೋಧನೆಯಿಂದ ತಿಳಿದು ಬಂದಿದೆ.