

ವಿಜಯವಾಣಿ ಸದ್ದಿಜಾಲ ಬೂದಿಕೋಟೆ
ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯದ ಜತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಯಾಗುತ್ತದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮುನಿರಾಜು ಹೇಳಿದರು. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ ಗುಂಡಾರ್ಲಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂ ದಹಮ್ಮಿಕೊಂಡಿದ್ದ ಪೋಷಣ್ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಅಪೌಷ್ಟಿಕ ಆಹಾರ ಸೇವನೆಯಿಂದ ಮಾನವ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರಲ್ಲಿ ಕಂಡು ಬರುವ ಅಪೌಷ್ಟಿಕತೆ ನಿವಾರಣೆಗೆ ಹಲವು ಕಾನೂನಾತ್ಮಕ ಪರಿಹಾರಗಳಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಜನರಲ್ಲಿ ಪೌಷ್ಟಿಕ ಆಹಾರ ಮಹತ್ವ ಹಾಗೂ ಉಪಯೋಗದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.
ಮಹಿಳೆಯರು, ಗರ್ಭಿಣಿಯರ ಹಾಗೂ ಮಕ್ಕಳ ಉತ್ತಮ ಆರೋಗ್ಯಕ್ಕೆ ನಿತ್ಯ ಹಣ್ಣು, ತರಕಾರಿ, ಸೊಪ್ಪು, ಮೊಳಕೆ ಕಾಳು, ಹಸಿ ಕ್ಯಾರೆಟ್, ಮೊಟ್ಟೆ, ಹಾಲಿನ ಸೇವನೆಯಿಂದ ಅಪೌಷ್ಟಿಕತೆ ನಿವಾರಣೆಯಾಗುತ್ತದೆ. ಆರೋಗ್ಯಕ್ಕಿಂತ ದೊಡ್ಡ ಭಾಗ್ಯ ಮತ್ತೊಂದಿಲ್ಲ. ಜನರು ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯವಂತರಾಗಬೇಕು ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆ ಸುಗುಣಮ್ಮ ಮಾತನಾಡಿ, ಜನರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ ಸೇವಿಸುವುದು ಅವಶ್ಯ. ಇಂದು ಬಾಯಿ ರುಚಿಗಾಗಿ ಸಿದ್ಧಪಡಿಸಿದ ಆಹಾರಗಳನ್ನು ಹೆಚ್ಚಾಗಿ ಬಳಸುತ್ತಿದ್ದು, ರೋಗ ನಿರೋಧಕ ಶಕ್ತಿ ಕುಂಠಿತಗೊಳ್ಳುವುದಲ್ಲದೆ ಬಹಳಷ್ಟು ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿವೆ. ಸಮತೋಲನ ಆಹಾರ ಪದ್ಧತಿ ಅಳವಡಿಸಿಕೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಗರ್ಭಿಣಿಯರು, ಬಾಣಂತಿಯರು ಹಸುಳೆಗಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ನೈಸರ್ಗಿಕವಾಗಿ ಲಭ್ಯವಿರುವ ಹಣ್ಣು, ತರಕಾರಿ, ಬೇಳೆ ಕಾಳುಗಳನ್ನು ಬಳಸುವುದರಿಂದ ಅಗತ್ಯ ಖನಿಜ, ಲವಣಾಂಶಗಳನ್ನು ಪಡೆದು ದೈಹಿಕ, ಮಾನಸಿಕ ಬೆಳವಣಿಗೆ ಹೊಂದಲು ಸಾಧ್ಯ ಎಂದರು.
ಅಂಗನವಾಡಿ ಕಾರ್ಯಕರ್ತೆಯರಾದ ವಿಜಯಕುಮಾರಿ, ಸುಧಾಕುಮಾರಿ, ಪಾರ್ವತಮ್ಮ, ಕುಸುಮ, ಸುಧಾ, ಚಂದ್ರಕಲಾ, ಪಾರ್ವತಿ, ಜ್ಯೋತಿ, ಜಯಮ್ಮ, ಸುಜಾತ, ನಾಗಮಣಿ, ಪ್ರೇಮಾ, ತುಳಸಿ, ಶಾರದಾ, ಭಾರ್ಗವಿ, ಭಾರತಿ, ರುಕ್ಮಿಣಿ, ಚಂದ್ರಕಲಾ, ಅಂಬೂ ಬಾಯಿ, ರುಕ್ಮಿಣಿಬಾಯಿ, ನಾಗಮಣಿ ಇತರರು ಇದ್ದರು.