

ಹಾವೇರಿ: 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಂದರ್ಭದಲ್ಲಿ ನಮ್ಮ ಜಿಲ್ಲೆಯನ್ನು ಸಮಗ್ರವಾಗಿ ಪರಿಚಯಿಸುವ ಪುಸ್ತಕಗಳು ಬಿಡುಗಡೆ ಆಗಿರುವುದು ಸಾಹಿತ್ಯಿಕ ಸೊಬಗನ್ನು ಹೆಚ್ಚಿಸಿದೆ ಎಂದು ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ಶನಿವಾರ ದಾನೇಶ್ವರ ನಗರದ ಪದವಿ ಪೂರ್ವ ಕಾಲೇಜುಗಳ ನೌಕರರ ಭವನದಲ್ಲಿ ಜರುಗಿದ ಲೇಖಕರಿಗೆ ಪುಸ್ತಕ ಮತ್ತು ಅಭಿನಂದನಾ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾರ್ಶನಿಕರು ಮತ್ತು ಹೋರಾಟಗಾರರನ್ನು ಮತ್ತೊಮ್ಮೆ ಪರಿಚಯಿಸುವ, ತಾಲೂಕು ದರ್ಶನ ಮೂಲಕ ಅಮೂಲ್ಯ ಮಾಹಿತಿ ಕಟ್ಟಿಕೊಟ್ಟ ಜಿಲ್ಲೆಯ ಲೇಖಕರು ಸ್ಮರಣೀಯ ಕಾರ್ಯ ಮಾಡಿರುವುದು ಅಭಿನಂದನೀಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ಜರುಗಿದ ಪರಿಣಾಮ ನಾಡಿನ ಕನ್ನಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಈ ವೇಳೆ ಜಿಲ್ಲೆಯ 106 ಮಹನೀಯರನ್ನು ಪರಿಚಯಿಸುವ 36 ಪುಸ್ತಕಗಳ ಪ್ರಕಟಣೆ ನಮಗೆ ಹೆಮ್ಮೆಯ ಸಂಗತಿ. ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಸ್ಪಂದಿಸಿದ ಪ್ರತಿಯೊಬ್ಬರನ್ನು ಮರೆಯಲಾರೆ. ತಾಂತ್ರಿಕ ಕಾರಣಗಳಿಂದ ಮುದ್ರಣವಾಗದ ಕೆಲವು ಪುಸ್ತಕಗಳ ಪ್ರಕಟಣೆಗೆ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೆ ಚರ್ಚಿಸುವೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಕೋಶಾಧ್ಯಕ್ಷ ಎಸ್.ಎನ್. ದೊಡಗೌಡ್ರ, ಈರಣ್ಣ ಬೆಳವಡಿ, ತಾಲೂಕು ಅಧ್ಯಕ್ಷ ವೈ.ಬಿ. ಆಲದಕಟ್ಟಿ, ಬಿ.ಎಂ. ಜಗಾಪುರ, ಎನ್. ಸುರೇಶಕುಮಾರ, ಎಸ್.ಎನ್. ಮುಗಳಿ. ಸಿ.ಎನ್. ಪಾಟೀಲ, ಎ.ಜಿ. ರಾಘವೇಂದ್ರ, ವೀರೇಶ ಜಂಬಗಿ, ಷಣ್ಮುಖಪ್ಪ ಮುಚ್ಚಂಡಿ ಹಾಗೂ ಲೇಖಕರಾದ ಮಾರುತಿ ಶಿಡ್ಲಾಪುರ, ಜೀವರಾಜ ಛತ್ರದ ಹನುಮಂತಗೌಡ ಗೊಲ್ಲರ, ಆಶಾ ಗುಡಿ, ಭಾಗ್ಯಾ ಎಂ.ಕೆ ಉಪಸ್ಥಿತರಿದ್ದರು.