ಬೋನಫೈಡ್ ದಂಧೆಯಲ್ಲಿ ಕೋಟಿಕೋಟಿ ವಹಿವಾಟು! ದೊಡ್ಡಮೊತ್ತದ ವರ್ಗಾವಣೆ ಕಂಡು ಲೋಕಾ ಅಧಿಕಾರಿಗಳೇ ಬೆಚ್ಚು ನಾಡಕಚೇರಿ-ಆರ್‌ಟಿಒ ಏಜೆಂಟ್‌ಗಳ ಬ್ಯಾಂಕ್ ವಿವರ ಪರಿಶೀಲನೆ

bonafied-new 1
bonafied-new 1
Published on

ಬೆಂಗಳೂರು: ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್ ವಿತರಣೆ ದಂಧೆಯ ಇನ್ನಷ್ಟು ಭಯಂಕರ ರಹಸ್ಯಗಳು ಲೋಕಾಯುಕ್ತ ತನಿಖೆಯಲ್ಲಿ ಬಯಲಾಗಿವೆ. ನಾಡಕಚೇರಿ ಗುತ್ತಿಗೆ ನೌಕರರು, ಖಾಸಗಿ ವ್ಯಕ್ತಿಗಳು ಹಾಗೂ ಆರ್‌ಟಿಒ ಕಚೇರಿ ಏಜೆಂಟ್‌ಗಳ ನಡುವೆ ಕೋಟ್ಯಂತರ ರೂಪಾಯಿ ಹಣಕಾಸಿನ ವಹಿವಾಟು ನಡೆದಿರುವುದು ಅವರ ಬ್ಯಾಂಕ್ ಖಾತೆಗಳ ಪರಿಶೀಲನೆಯಲ್ಲಿ ಗೊತ್ತಾಗಿದ್ದು, ಇಷ್ಟೊಂದು ದೊಡ್ಡಮೊತ್ತದ ವಹಿವಾಟು ಕಂಡು ತನಿಖಾಧಿಕಾರಿಗಳೇ ಹೌಹಾರಿದ್ದಾರೆ.

ಬೆಂಗಳೂರಿನ ಆರ್‌ಟಿಒ ಕಚೇರಿಗಳು, ಚಿಕ್ಕಬಳ್ಳಾಪುರ, ಚಿಂತಾಮಣಿ, ಕೆಜಿಎಫ್, ಕೋಲಾರ ಹಾಗೂ ಚಿಕ್ಕಬಳ್ಳಾಪುರ ಆರ್‌ಟಿಒ ಕಚೇರಿಗಳಲ್ಲಿ ನೋಂದಣಿಯಾಗಿರುವ ಟ್ರ್ಯಾಕ್ಟರ್ ಹಾಗೂ ಟ್ರಾಲಿಗಳಿಗೆ ಸಂಬಂಧಿಸಿದಂತೆ ಬೋನಫೈಡ್ ಸರ್ಟಿಫಿಕೇಟ್‌ಗಳನ್ನು ತರಿಸಿಕೊಂಡು ಲೋಕಾಯುಕ್ತ ತನಿಖಾಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಯಾರದ್ದೋ ಜಮೀನಿಗೆ ಇನ್ಯಾರಿಗೋ ಬೋನಫೈಡ್ ಕೊಟ್ಟಿರುವುದು ದೃಢಪಟ್ಟಿದೆ. ಅಧಿಕಾರಿಗಳು, ಏಜೆಂಟ್‌ಗಳು, ಖಾಸಗಿ ವ್ಯಕ್ತಿಗಳ ವಿಚಾರಣೆ ನಡೆಸಿದಾಗ ಮತ್ತಷ್ಟು ವಿಚಾರಗಳು ಬೆಳಕಿಗೆ ಬಂದಿವೆ.


ನರಸಾಪುರ ನಾಡಕಚೇರಿ ಗುತ್ತಿಗೆ ಸಿಬ್ಬಂದಿ ಬ್ಯಾಂಕ್ ಖಾತೆಯಲ್ಲಿಯೇ 5 ಕೋಟಿ ರೂ.ಗೂ ಹೆಚ್ಚಿನ ವಹಿವಾಟು ನಡೆದಿರುವುದು ಗೊತ್ತಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಹಣಕಾಸು ವಹಿವಾಟು ನಡೆದಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಖಚಿತಪಡಿಸಿದ್ದಾರಾದರೂ ಸದ್ಯಕ್ಕೆ ಇಂತಿಷ್ಟೇ ಹಣ ವರ್ಗಾವಣೆಯಾಗಿದೆ ಎಂದು ಹೇಳಲಾಗಲ್ಲ. ತನಿಖೆ ಪ್ರಗತಿಯಲ್ಲಿರುವುದರಿಂದ ಯಾರಿಂದ, ಯಾರಿಗೆಲ್ಲ ಹಣ ಹೋಗಿದೆ ಎಂಬುದರ ಪರಿಶೀಲನೆ ನಡೆಯುತ್ತಿದೆ. ದಂಧೆಯಲ್ಲಿ ದೊಡ್ಡಮೊತ್ತದ ವಹಿವಾಟು ನಡೆದಿರುವುದಂತೂ ನಿಜ ಎಂದು ಮಾಹಿತಿ ನೀಡಿದ್ದಾರೆ.

ವಿಚಾರಣೆಯಲ್ಲಿ ಗೊತ್ತಾಗಿದ್ದೇನು?

ಡೀಲ್ ತರುತ್ತಿದ್ದ ಕೋಲಾರ ಆರ್‌ಟಿಒ ಏಜೆಂಟ್, ಕೇಸ್ ವರ್ಕರ್‌ಗೆ ಕಡತಗಳನ್ನು ನೀಡುತ್ತಿದ್ದ. ಟ್ರ್ಯಾಕ್ಟರ್ ಮಾಲೀಕನಿಂದ 30 ಸಾವಿರ ರೂ. ಪಡೆದು, ಇದರಲ್ಲಿ ಆರ್‌ಟಿಒ ಕೇಸ್ ವರ್ಕರ್‌ಗೆ 2 ಸಾವಿರ ರೂ. ಕೊಡುತ್ತಿದ್ದ. ನಾಡಕಚೇರಿ ಏಜೆಂಟ್‌ಗೆ 8 ಸಾವಿರ ರೂ. ತಲುಪಿಸುತ್ತಿದ್ದ. 1 ಸಾವಿರ ತಾನಿಟ್ಟುಕೊಳ್ಳುತ್ತಿದ್ದ ನಾಡಕಚೇರಿ ಏಜೆಂಟ್, ಗುತ್ತಿಗೆ ನೌಕರಳ ಖಾತೆಗೆ 7 ಸಾವಿರ ರೂ. ವರ್ಗಾಯಿಸುತ್ತಿದ್ದ. ಮಂಜು ಎಂಬಾತನ ಖಾತೆಯಿಂದ ನಾಡಕಚೇರಿ ಗುತ್ತಿಗೆ ನೌಕರಳ ಖಾತೆಗೆ ಫೋನ್ ಪೇ ಮೂಲಕ ಹಣ ವರ್ಗಾವಣೆಯಾಗಿರುವುದು ಪರಿಶೀಲನೆಯಲ್ಲಿ ದೃಢಪಟ್ಟಿದೆ. ಆರ್‌ಟಿಒ ಏಜೆಂಟ್ ಅಶ್ವತ್ಥ ನಾರಾಯಣ, ನಾಡಕಚೇರಿ ಜತೆ ಸಂಪರ್ಕ ಹೊಂದಿರುವ ಖಾಸಗಿ ವ್ಯಕ್ತಿ ಮಂಜು ಎಂಬಾತ ಸೇರಿ ಈವರೆಗೆ 7ಕ್ಕೂ ಹೆಚ್ಚು ಏಜೆಂಟ್‌ಗಳು, ಕೋಲಾರ ಆರ್‌ಟಿಒ ಅಧಿಕಾರಿ, ಸೂಪರಿಂಟೆಂಡೆಂಟ್‌ಗಳು, ಕೇಸ್ ವರ್ಕರ್‌ಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಯಾರಿಗೆ ಹಣ ಹಂಚಿಕೆಯಾಗುತ್ತಿತ್ತು ಎಂಬುದರ ಬಗ್ಗೆ ಏಜೆಂಟ್‌ಗಳು ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಹಣ ಸಂಗ್ರಹಕ್ಕೆ ಖಾಸಗಿ ವ್ಯಕ್ತಿಗಳ ನೇಮಕ


ಆರ್‌ಟಿಒ ಕೇಸ್ ವರ್ಕರ್ ನೇರವಾಗಿ ಪ್ರತಿ ಕಡತಕ್ಕೆ 2 ಸಾವಿರ ರೂ. ಲಂಚ ಪಡೆಯುತ್ತಿದ್ದ. ಅವರಿಲ್ಲದ ಸಂದರ್ಭದಲ್ಲಿ ನೋಟ್‌ಶೀಟ್ ಹಾಕಲು ನೇಮಿಸಿಕೊಂಡಿರುವ ಖಾಸಗಿ ವ್ಯಕ್ತಿಗಳು ಹಣ ಪಡೆದು, ನಂತರ ಕೇಸ್ ವರ್ಕರ್‌ಗೆ ತಲುಪಿಸುತ್ತಿದ್ದರು. ಇವರಿಗೆ ದಿನಕ್ಕೆ 300 ರೂ. ಪಾವತಿಸಲಾಗುತ್ತಿತ್ತು ಎನ್ನಲಾಗಿದೆ. ಫೋನ್ ಪೇ ಮೂಲಕ ವರ್ಗಾವಣೆಯಾಗಿರುವ ಹಣದ ಮೊತ್ತವೇ ಕೋಟ್ಯಂತರ ರೂ. ಇದೆ. ಇನ್ನು ನಗದು ರೂಪದಲ್ಲಿ ಇನ್ನೆಷ್ಟು ಹಣ ವಹಿವಾಟು ನಡೆದಿರಬಹುದು ಎಂಬುದರ ಬಗ್ಗೆ ತನಿಖೆ ಮುಂದುವರಿದಿದೆ.

ವಂಶವೃಕ್ಷದಲ್ಲೇ ರಿಜಿಸ್ಟ್ರೇಷನ್!

ಚಿಂತಾಮಣಿ ಆರ್‌ಟಿಒ ಕಚೇರಿಯಲ್ಲಿ ಬೋನಫೈಡ್ ಸರ್ಟಿಫಿಕೇಟ್ ಬದಲು ವಂಶವೃಕ್ಷ ದಾಖಲಾತಿಯಲ್ಲೇ ಕೇಸ್ ವರ್ಕರ್ ಮತ್ತು ಸೂಪರಿಂಟೆಂಡೆಂಟ್ ಟ್ರ್ಯಾಕ್ಟರ್ ನೋಂದಣಿ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪಾಣಿ ಪಡೆಯದೆ ಬೋನಫೈಡ್ ಸರ್ಟಿಫಿಕೇಟ್ ಮೇಲೆ ರಿಜಿಸ್ಟ್ರೇಷನ್ ಮಾಡುವುದೇ ತಪ್ಪು. ಅಂತಹುದರಲ್ಲಿ ವಂಶವೃಕ್ಷ ದಾಖಲೆ ಪಡೆದು ನೋಂದಣಿ ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿ ಲೋಕಾಯುಕ್ತ ತನಿಖಾಧಿಕಾರಿಗಳು ಹಿಗ್ಗಾಮುಗ್ಗಾ ಬೆವರಿಳಿಸಿದ್ದಾರೆ ಎಂದು ಗೊತ್ತಾಗಿದೆ.

ಗಂಭೀರ ಪ್ರಕರಣವಾಗಿರುವ ಕಾರಣಕ್ಕೆ ಆಳವಾಗಿ ವಿಚಾರಣೆ ಮಾಡಲಾಗುತ್ತಿದೆ. ಈಗಾಗಲೇ ಬಹುತೇಕ ಮಾಹಿತಿ ಸಂಗ್ರಹಿಸಲಾಗಿದೆ. ಆ.16ಕ್ಕೆ ಮಧ್ಯಂತರ ವರದಿ ಸಲ್ಲಿಸಲು ಸಿದ್ಧತೆ ನಡೆದಿದೆ. ದಂಧೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಗೂ ಕರ್ತವ್ಯಲೋಪ ಆರೋಪದಡಿ ಅನುಮತಿ ಪಡೆದು ಪ್ರಕರಣ ದಾಖಲಿಸಲಾಗುತ್ತದೆ.
ಬಿ.ಕೆ.ಉಮೇಶ್‌_ಎಸ್ಪಿ, ಲೋಕಾಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net