ಸಮಗ್ರ ಅಭಿವೃದ್ಧಿಗೆ ಸುಸ್ಥಿರ ಬಜೆಟ್: ಚೊಚ್ಚಲ ಆಯವ್ಯಯಕ್ಕೆ ಬೊಮ್ಮಾಯಿ ಸಮರ್ಥನೆ

Page 7
Published on

ಬೆಂಗಳೂರು: ಚೊಚ್ಚಲ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪ್ರದಾಯದಂತೆ ಸುದ್ದಿಗಾರರ ಮುಂದೆ ವಿರಾಜಮಾನರಾಗಿ, ಬಜೆಟ್​ನಲ್ಲಿನ ತಮ್ಮ ನೀತಿ-ನಿಲುವುಗಳಿಗೆ ಸಮರ್ಥನೆ ನೀಡುತ್ತಾ ಹೋದರು.

ಪ್ರಸ್ತುತ ತೆರಿಗೆ ಸಂಗ್ರಹ, ವಿವಿಧ ಯೋಜನೆಗಳ ಹಿಂದಿನ ಉದ್ದೇಶ, ಕೈಗೊಳ್ಳದ ತೀರ್ವನದ ಹಿಂದಿನ ಕಾರಣ ಹೀಗೆ ಬಜೆಟ್​ನ ವಿವಿಧ ಆಯಾಮಗಳನ್ನು ವಿಶ್ಲೇಷಿಸುತ್ತಾ ಹೋದ ಸಿಎಂ, ಪತ್ರಕರ್ತರ ಪ್ರಶ್ನೆಗೆ ಸಾವಧಾನದಿಂದ ಉತ್ತರ ನೀಡಿದರು.

ಇದೇ ವೇಳೆ ಹಣಕಾಸು ಇಲಾಖೆ ಅಪರ ಮುಖ್ಯಕಾರ್ಯದರ್ಶಿ ಐಎಸ್​ಎನ್ ಪ್ರಸಾದ್, ಇಲಾಖೆ ಕಾರ್ಯದರ್ಶಿ ಏಕ್​ರೂಪ್ ಕೌರ್, ಪಿ.ಸಿ.ಜಾಫರ್ ಹಾಗೂ ಇತರ ಅಧಿಕಾರಿಗಳನ್ನು ಜತೆ ಕೂರಿಸಿಕೊಂಡಿದ್ದರು. ಸಚಿವರಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಸಂಸದ ಶಿವಕುಮಾರ ಉದಾಸಿ ಅವರೂ ಇದ್ದರು.

  1. ಆರ್ಥಿಕ ಸ್ಥಿತಿ ಸುಧಾರಿಸಿದೆ: ಕೋವಿಡ್ ಕಡಿಮೆಯಾಗುತ್ತಿದ್ದಂತೆ ಸರ್ಕಾರದ ಕ್ರಮಗಳಿಂದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. ರಾಜಸ್ವ ಸಂಗ್ರಹ, ಸ್ವೀಕೃತಿಗಳು ಮಾರ್ಚ್ ಅಂತ್ಯದೊಳಗೆ ನಿಗದಿತ ಗುರಿ ಮುಟ್ಟಲಿದೆ. ಮೋಟಾರ್ ವೆಹಿಕಲ್ ತೆರಿಗೆ ಗುರಿ ಮುಟ್ಟುವುದು ಮಾತ್ರ ಕಷ್ಟ. ಉಳಿದ ಎಲ್ಲ ವರ್ಗದಲ್ಲಿ ತೆರಿಗೆ ನಿಗದಿತ ಗುರಿ ಮುಟ್ಟುತ್ತೇವೆ.
  2. ಆರ್ಥಿಕ ಶಿಸ್ತಿಗೆ ಒತ್ತು: ಪ್ರಸ್ತುತ ಬಜೆಟ್​ನಲ್ಲಿ 67,100 ಕೋಟಿ ರೂ. ಸಾಲ ಪಡೆದುಕೊಳ್ಳಲು ಅವಕಾಶ ಇದ್ದರೂ 63,100 ಕೋಟಿ ರೂ. ಸಾಲ ಮಾತ್ರ ಪಡೆದುಕೊಳ್ಳುತ್ತಿದ್ದು, ಈ ಮೂಲಕ ನಾವು ಇತಿಮಿತಿಯಲ್ಲಿ ಖರ್ಚು ಮಾಡು ತ್ತಿದ್ದೇವೆ. ಆರ್ಥಿಕ ಶಿಸ್ತು ಕಾಪಾಡಿದ್ದೇವೆ. ಕಳೆದ ವರ್ಷ ಸಂಯಮ ಕಾಯ್ದುಕೊಂಡಿದ್ದೇವೆ. ಮುಂದೆ ತೆರಿಗೆಯೇತರ ಆದಾಯ ಹೆಚ್ಚಾದರೆ ಹಣಕಾಸು ಶಿಸ್ತು ಸರಿಮಾಡಿಕೊಳ್ಳಲು ಅವಕಾಶ ಸಿಗಲಿದೆ. ಕಳೆದ ವರ್ಷಗಳಲ್ಲಿ ಹೆಚ್ಚಿನ ಸಾಲ ಪಡೆದಿದ್ದು, ಬರುವ ವರ್ಷಗಳಲ್ಲಿ ಶೇ.25ಕ್ಕೆ ಇಳಿಸಬೇಕಿದೆ.
  3. ಐಐಟಿ ಮಟ್ಟಕ್ಕೆ ಕೆಐಟಿ: ಐಐಟಿ, ಎನ್​ಐಟಿಗೆ ನಮ್ಮ ಮಕ್ಕಳಿಗೆ ಅವಕಾಶ ಸಿಗಲ್ಲ ಎಂದು ಪಾಲಕರ ಅಳಲಿದೆ. ಹೀಗಾಗಿ ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವ ಗುರಿ ಹಾಗೂ ಛಲ ಹೊಂದಿದ್ದೇವೆ. ವಿವಿಧ ಒಡಂಬಡಿಕೆ ಮಾಡುವ ಮೂಲಕ ಕೆಐಟಿ ಅಭಿವೃದ್ಧಿಪಡಿಸುತ್ತೇವೆ. ಹಾಗೆಯೇ, ಆಕಾಂಕ್ಷಿತ ತಾಲೂಕುಗಳ ಬಗ್ಗೆ ವಿಶೇಷ ಗಮನ ಕೊಡುತ್ತೇವೆ. ಕೇಂದ್ರ ಅಭಿವೃದ್ಧಿ ಆಕಾಂಕ್ಷಿತ ಜಿಲ್ಲೆ ಮಾಡಿದಂತೆ 93 ತಾಲೂಕು ಗುರುತು ಮಾಡಲಾಗಿದ್ದು, 100 ಆರೋಗ್ಯ ತಾಲೂಕು, 102 ಅಪೌಷ್ಟಿಕ ತಾಲೂಕು ಗುರುತಿಸಿ, 3 ಸಾವಿರ ಕೋಟಿ ರೂ. ಖರ್ಚು ಮಾಡುತ್ತೇವೆ.
  4. ಕೇಂದ್ರದ ನೆರವು: ಕಳೆದ ವರ್ಷ 24,073 ಕೋಟಿ ರೂ. ಕೇಂದ್ರದ ತೆರಿಗೆ ಪಾಲು ಹಂಚಿಕೆಯಾಗಿದೆ. ಈ ಬಾರಿ 29,783 ಕೋಟಿ ರೂ.ಗೆ ಹೆಚ್ಚಾಗಲಿದೆ. ಸಹಾಯಧನ ಕೂಡ 1,500 ಕೋಟಿ ರೂ. ಹೆಚ್ಚಾಗಿದೆ. ಈ ಬಾರಿ ಜಿಎಸ್ಟಿ ಪರಿಹಾರ ಜೂನ್​ವರೆಗೆ 4-5 ಸಾವಿರ ಕೋಟಿ ರೂ. ಬರಬಹುದು, ಮುಂದುವರಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಅವರಿಗೂ ಜೂನ್​ವರೆಗೆ ನಿರ್ಧಾರ ಮಾಡಲು ಸಮಯ ಇದೆ. ಇದು ಬಂದರೆ ರೆವೆನ್ಯೂ ಡಿಫಿಸಿಟ್ ಕಡಿಮೆಯಾಗಲಿದೆ.
  5. ಸೆನ್ಸಿಟಿವ್ ಬಜೆಟ್: ನಮ್ಮದು ಸೆನ್ಸಿಟಿವ್ ಬಜೆಟ್. ಗಿಡ ಮರಗಳ, ಪರಿಸರವನ್ನೂ ಗಮನಿಸಿ ಪರಿಸರ ಬಜೆಟ್ ಕೊಟ್ಟಿದೆ. ಇದು ಸರ್ಕಾರದ ಸೂಕ್ಷ್ಮತೆ ತೋರಿಸುತ್ತಿದೆ. ಆಸಿಡ್ ದಾಳಿಯಲ್ಲಿ ಸಿಲುಕಿದವರಿಗೆ ಮಾಸಾಶನ ಏಳು ಸಾವಿರ ರೂ. ಏರಿಕೆ ಮಾಡಲಾಗಿದೆ. ಕಿಮೋ ಥೆರಪಿಗಾಗಿ 10 ಸೆಂಟರ್, ಡಯಲಿಸಿಸ್ ಸೇವೆ ನೀಡುವ ಸಂಖ್ಯೆ ಎರಡುಪಟ್ಟು ಹೆಚ್ಚಿಸಲಾಗುತ್ತಿದೆ. ಹಿರಿಯ ನಾಗರಿಕರಿಗೆ ಕಣ್ಣಿನ ಪರೀಕ್ಷೆ, ಕನ್ನಡಕ ನೀಡಲು ಯೋಜನೆ ತರಲಾಗುತ್ತಿದೆ. ಪೈಲ್ವಾನರಿಗೆ ನೆರವು ಹೆಚ್ಚಳ, ಚಾಲಕರ ಮಕ್ಕಳಿಗೆ ನೆರವು, ಇದೆಲ್ಲ ಸೂಕ್ಷ್ಮತೆಗಳಲ್ಲವೇ?
  6. ಎಲ್ಲ ಮಠಗಳಿಗೂ ನೆರವು: ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮುದಾಯಗಳ ಮಠಗಳ ಅಭಿವೃದ್ಧಿಗೆ ವಿಶೇಷ ನೆರವು ನೀಡುವುದಾಗಿ ಒಂದು ಸಾಲು ಬಜೆಟ್​ನಲ್ಲಿ ಇದೆ. ಹಾಗೆಂದು ಯಾರನ್ನೂ ನಿರ್ಲಕ್ಷ್ಯ ಮಾಡಲ್ಲ. ಎಲ್ಲ ವರ್ಗದ ಮಠಗಳಿಗೆ ನೆರವು ಕೊಡುತ್ತೇವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net