ಕಾಂಗ್ರೆಸ್ ಅಸ್ತ್ರಕ್ಕೆ ಬೊಮ್ಮಾಯಿ ಪ್ರತ್ಯಸ್ತ್ರ: ಕಾಂಗ್ರೆಸ್​ನಿಂದ ಕಾಮಗಾರಿ ನಡಸದೆ ಲೂಟಿ; ಆಡಳಿತ-ಪ್ರತಿಪಕ್ಷಗಳ ಟೀಕೆ, ಟಿಪ್ಪಣಿ

CM
Published on

ಬೆಂಗಳೂರು: ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಟೀಕೆ-ಟಿಪ್ಪಣಿಯ ಅಸ್ತ್ರ-ಪ್ರತ್ಯಸ್ತ್ರ ಸೋಮವಾರವೂ ಮುಂದುವರಿಯಿತು. ವಿಧಾನಸಭೆಯಲ್ಲಿ ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಒಂದೊಂದು ಟೀಕೆಗೂ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎಳೆಎಳೆಯಾಗಿ ತಿರುಗೇಟು ನೀಡಿದರು.

ಕಾಂಗ್ರೆಸ್ ಎಂದರೆ ಕರಪ್ಶನ್. ಕಮೀಷನ್​ಗೂ ಕಾಂಗ್ರೆಸ್​ಗೂ ಬಿಡಿಸಲಾರದ ನಂಟಿದೆ. ನಮ್ಮ ಪಕ್ಷದ ವಿರುದ್ಧ ಪೋಸ್ಟರ್ ಅಂಟಿಸುವ ಮೊದಲು ನೀವು ನಿಮ್ಮ ಕಳಂಕವನ್ನು ತೊಳೆದುಕೊಂಡು ಬನ್ನಿ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಸುಳ್ಳು ಹೇಳಿಕೊಂಡೇ ಬಂದಿದೆ. ಸುಳ್ಳನ್ನು 100 ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಜನರು ನಿಮ್ಮ ಮಾತುಗಳನ್ನು ನಂಬಲು ಮೂರ್ಖರಲ್ಲ. ಕಾಲಕಾಲಕ್ಕೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹರಿಹಾಯ್ದರು.

ನಮ್ಮ ಸರ್ಕಾರವನ್ನು 40 ಪಸೆಂಟ್ ಕಮಿಷನ್ ಸರ್ಕಾರ ಎನ್ನಲು ನಿಮಗೆ ಯಾವ ನೈತಿಕತೆ ಇದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಅನೇಕ ಟೆಂಡರ್ ಕಾಮಗಾರಿ ನಡೆಸದೆ ಲೂಟಿ ಹೊಡೆದಿದ್ದಾರೆ. ಇಂಥವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದೇ ಹಾಸ್ಯಾಸ್ಪದ. ಯಾವ ನೈತಿಕತೆ ಇಟ್ಟುಕೊಂಡು ನೀವು ಮಾತನಾಡುತ್ತೀರಿ? ನೀವು ನೈತಿಕತೆ ಉಳಿಸಿಕೊಂಡಿಲ್ಲ ಎಂದು ಕಿಡಿಕಾರಿದರು.

ಗುತ್ತಿಗೆದಾರರನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡಲು ಹೊರಟಿದ್ದೀರಿ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳಿದ್ದರೆ ಕೊಡಿ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಲೋಕಾಯುಕ್ತಕ್ಕೆ ಅಥವಾ ನ್ಯಾಯಾಲಯಕ್ಕೆ ದಾಖಲೆ ಸಲ್ಲಿಸಲಿಲ್ಲ. ಕೇವಲ ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸ ಮಾಡಿದ್ದಾರೆ. ಇದಕ್ಕೆ ಕಾಂಗ್ರೆಸ್​ನವರ ಕುಮ್ಮಕ್ಕಿದೆ ಎಂದು ದೂರಿದರು. ಚುನಾವಣಾ ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೇವೆ ಎಂದು ಜನರ ಮುಂದೆ ಸುಳ್ಳು ಹೇಳುತ್ತಿದ್ದಾರೆ. ನಿಮ್ಮ ಅಧಿಕಾರಾವಧಿಯಲ್ಲಿ ಈಡೇರಿಸಿದ್ದು ಶೇ.38 ಮಾತ್ರ. ಎಲ್ಲ ಭರವಸೆ ಈಡೇರಿಸಿದ್ದರೆ ಜನ ನಿಮ್ಮನ್ನು ಏಕೆ ಸೋಲಿಸುತ್ತಿದ್ದರು? ಎಂದು ವಾಗ್ದಾಳಿ ನಡೆಸಿದರು.

ಸುಳ್ಳಿಗೆ ಇನ್ನೊಂದು ಹೆಸರೇ ಕಾಂಗ್ರೆಸ್: ಸುಳ್ಳಿಗೆ ಇನ್ನೊಂದು ಹೆಸರೇ ಕಾಂಗ್ರೆಸ್. ನೀವು ಪ್ರಣಾಳಿಕೆಯಲ್ಲಿ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೇವೆ ಎನ್ನುತ್ತೀರಿ ನಾನು ಕೇಳುವ ಪ್ರಶ್ನೆಗಳಿಗೆ ಉತ್ತರಿಸಿ ಎಂದು ಸವಾಲು ಹಾಕಿದರು. 2013-18ರ ಅವಧಿಯಲ್ಲಿ 3,800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅತಿಹೆಚ್ಚು ಗೋಲಿಬಾರ್ ಮತ್ತು ಲಾಠಿಚಾರ್ಜ್ ಮಾಡಿದ್ದು, ನಿಮ್ಮ ಸರ್ಕಾರ. ನಿಪ್ಪಾಣಿಯಿಂದ ಹಿಡಿದು ಕೊಳ್ಳೆಗಾಲದವರೆಗೂ ರೈತರ ಮೇಲೆ ದಬ್ಬಾಳಿಕೆ ನಡೆಸಿದ್ದೀರಿ. ನಿಮ್ಮಂಥವರು ರೈತರ ಬಗ್ಗೆ ಮಾತನಾಡುವುದೇ ದುರಂತ ಎಂದು ಚಾಟಿ ಬೀಸಿದರು.

25 ಲಕ್ಷ ಮನೆಗಳಿಗೆ ನೀರು: ಜಲ ಜೀವನ ಮಿಷನ್ ಯೋಜನೆಯಡಿ ಮುಂದಿನ ವರ್ಷ ರಾಜ್ಯದ 25 ಲಕ್ಷ ಮನೆಗಳಿಗೆ ನಲ್ಲಿ ಮೂಲಕ ನೀರು ಒದಗಿಸಲು ಅನುಮೋದಿಸಲಾಗಿದ್ದು, ಬಜೆಟ್​ನಲ್ಲಿ ಅನುದಾನ ಒದಗಿಸಲಾಗಿದೆ. ಹಿಂದುಳಿದ ವರ್ಗದ ಎರಡೂವರೆ ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯ ಪಡೆದಿದ್ದಾರೆ. ಹೆಚ್ಚುವರಿ 30 ಸಾವಿರ ವಿದ್ಯಾರ್ಥಿಗಳಿಗೆ ಸೌಲಭ್ಯ ಕಲ್ಪಿಸಲು 250 ಕೋಟಿ ರೂ. ಒದಗಿಸಲಾಗಿದೆ. ಕಳೆದ ವರ್ಷಕ್ಕಿಂತ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಹಾಗೂ ವಿದ್ಯಾಸಿರಿ ಸೌಲಭ್ಯ ಕೊಟ್ಟಿದ್ದೇವೆ ಎಂದು ಹೇಳಿದರು.

5 ಮೆಗಾ ಹಾಸ್ಟೆಲ್ ನಿರ್ಮಾಣ: ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ರಾಜ್ಯದ 5 ಕಡೆ ಮೆಗಾ ಹಾಸ್ಟೆಲ್ ನಿರ್ವಣಕ್ಕೆ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಕೋವಿಡ್, ಅತಿವೃಷ್ಟಿ, ಪ್ರವಾಹದಂತಹ ಸವಾಲುಗಳ ನಡುವೆಯೂ ಸರ್ಕಾರ ಕಳೆದ ಆರ್ಥಿಕ ವರ್ಷದಲ್ಲಿ ವಿವಿಧ ಮೂಲಗಳಿಂದ ನಿಗದಿಗಿಂತ 13 ಸಾವಿರ ಕೋಟಿ ರೂ.ಗೂ ಹೆಚ್ಚು ತೆರಿಗೆ ಸಂಗ್ರಹಿಸಿದೆ ಎಂದರು.

ಜಿಎಸ್​ಟಿ ಪರಿಹಾರ ಧನವಾಗಿ 18 ಸಾವಿರ ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ನೀಡಿದೆ. ರೈತ ಶಕ್ತಿ ಯೋಜನೆಯಿಂದ 53 ಲಕ್ಷ ರೈತರಿಗೆ 330 ಕೋಟಿ ರೂ. ವಿವಿಧ ರೂಪದ ಪರಿಹಾರ ಒದಗಿಸಲಾಗಿದೆ. ಯಶಸ್ವಿನಿಗೆ 300 ಕೋಟಿ ರೂ. ಮೀಸಲಿಟ್ಟು, ರೈತರಿಗಾಗಿ ಈ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ ಎಂದು ಹೇಳಿದರು.

ಸಿಎಂ ಉತ್ತರದ ಮುಖ್ಯಾಂಶಗಳು

  • ಗ್ರಾಮೀಣ ಭಾಗಗಳಲ್ಲಿರುವ ಸರ್ಕಾರಿ ವಾಣಿಜ್ಯ ಹಾಗೂ ಕಲಾ ಕಾಲೇಜುಗಳಲ್ಲಿ ಹೊಸದಾಗಿ ವಿಜ್ಞಾನ ಕೋರ್ಸ್ ಪ್ರಾರಂಭಿಸಲು 200 ಕೋಟಿ ರೂ. ಅನುದಾನ ಈ ವರ್ಷವೇ ನೀಡಲಾಗುವುದು.
  • ಜೂನ್ ಒಳಗೆ ರಾಜ್ಯಾದ್ಯಂತ 8 ಸಾವಿರ ಶಾಲಾ ಕೊಠಡಿಗಳು ನಿರ್ಮಾಣ ಪೂರ್ಣಗೊಳ್ಳಲಿವೆ.
  • 8 ಸಾವಿರ ಶಾಲಾ ಕೊಠಡಿಗಳ ಜತೆಗೆ ಸಂಘ-ಸಂಸ್ಥೆಗಳು, ದಾನಿಗಳು 1556 ಕೊಠಡಿ ನಿರ್ವಿುಸಿಕೊಡಲಿದ್ದಾರೆ.
  • 5 ಸಾವಿರ ಶಿಕ್ಷಕರನ್ನು ನೇಮಕಾತಿ ಮಾಡಿಕೊಂಡಿದ್ದು ಶೀಘ್ರದಲ್ಲೇ ನೇಮಕಾತಿ ಆದೇಶ ನೀಡಲಾಗುವುದು.

ಸವಾಲುಗಳ ಮಧ್ಯ ನಾನು ಸಿಎಂ!: ಕರೋನಾ, ಅತಿವೃಷ್ಟಿ, ಪ್ರವಾಹಗಳಂತಹ ಸವಾಲುಗಳ ಮಧ್ಯೆ ನಾನು ಸಿಎಂ ಆದೆ. ನಾನು ಸಿಎಂ ಆದಾಗ ಯಾವುದೂ ನಾರ್ಮಲ್ ಆಗಿರಲಿಲ್ಲ. ಅತಿವೃಷ್ಟಿ ಮತ್ತು ಕರೊನಾದಿಂದ ದೊಡ್ಡ ಹಾನಿಯಾಗಿತ್ತು. ನಮ್ಮ ಜನ ಆಶಾವಾದಿಗಳು. ಸರ್ಕಾರ ಜನರ ಸಂಕಷ್ಟಕ್ಕೆ ಸ್ಪಂದಿಸಿತು. ಜನರೂ ತಮ್ಮ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಿದರು. ಎರಡೂ ಕಡೆ ಸ್ಪಂದನೆ ದೊರೆಯಿತು. ಅಧಿಕಾರಿಗಳೂ ಸರ್ಕಾರದ ಜತೆ ಕೈಜೋಡಿಸಿ ಕೆಲಸ ಮಾಡಿದರು ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

ಬಯಲು ಬಹಿರ್ದೆಸೆ ಮುಕ್ತ ಸವಾಲು: ಬಯಲು ಬಹಿರ್ದೆಸೆ ಮುಕ್ತ ಎಂಬುದು ಸತ್ಯಕ್ಕೆ ದೂರವಾಗಿದೆ. ಸಾರ್ವಜನಿಕ ಶೌಚಗೃಹಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಶಾಲಾ ಶೌಚಗೃಹ ನಿರ್ವಹಣೆಯನ್ನು ಎಸ್​ಡಿಎಂಸಿ ಬದಲು ಗ್ರಾಪಂಗೆ ಕೊಡಬೇಕೆಂಬ ಸ್ಪೀಕರ್ ಸಲಹೆಗೆ ಪ್ರತಿಕ್ರಿಯಿಸಿದ ಸಿಎಂ, ಎಸ್​ಡಿಎಂಸಿ ನಡೆಸುವುದು ಸೂಕ್ತ ಎಂದರು. ಮಧ್ಯ ಪ್ರವೇಶಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಾರ್ವಜನಿಕ ಶೌಚಗೃಹವನ್ನು ಶೇ.90 ಪ್ರಯೋಜನವಾಗುತ್ತಿಲ್ಲ. ಹಾಗಾಗಿ ಮನೆ ಮನೆಗೆ ಶೌಚಗೃಹ ಕೊಡಿ ಎಂದು ಸರ್ಕಾರಕ್ಕೆ ಕಿವಿಮಾತು ಹೇಳಿದರು.

ಸದನಕ್ಕೆ ಬರದಿರುವುದು ತಪ್ಪು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿನ ಸೋಲು- ಗೆಲುವಿನ ವಿಚಾರದ ಆಲೋಚನೆಯಲ್ಲಿ ಸದನಕ್ಕೆ ಬಾರದೇ ಇರುವುದು ತಪ್ಪು ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ವಿಧಾನಸಭೆ ಕಲಾಪದಲ್ಲಿ ಖಾಲಿ ಕುರ್ಚಿ ಕಂಡು ಅಸಮಾಧಾನ ವ್ಯಕ್ತಪಡಿಸಿದ ಅವರು, ಚುನಾವಣೆಯ ದೃಷ್ಟಿಯಿಂದ ಸಂಸದೀಯ ವ್ಯವಸ್ಥೆಯನ್ನು ಕಡೆಗಣಿಸಬಾರದು. ಎಲ್ಲರಿಗೂ ಚುನಾವಣೆಯಲ್ಲಿ ಒಳ್ಳೆಯದಾಗಲಿ. ಈ ವ್ಯವಸ್ಥೆಯ ಬಗ್ಗೆ ಜನರಿಗೆ ಹೆಚ್ಚು ವಿಶ್ವಾಸ ಮೂಡುವಂತೆ, ವ್ಯವಸ್ಥೆಗೆ ಹೆಚ್ಚು ಶಕ್ತಿ ತುಂಬುವ ರೀತಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಸದನಕ್ಕೆ ಆಗಮಿಸಿ ಕಲಾಪದಲ್ಲಿ ಭಾಗಿಯಾಗಬೇಕು. ಇದಕ್ಕಿಂತ ಹೆಚ್ಚು ಹೇಳುವುದಿಲ್ಲ ಎಂದು ಹೇಳಿದರು.

ಕಾಂಗ್ರೆಸ್​ಗೆ ಸಿಎಂ ಕೇಳಿದ ಪ್ರಶ್ನೆಗಳು

  • ಕೃಷ್ಣ ಮೇಲ್ದಂಡೆ ಯೋಜನೆಗೆ ಪ್ರತಿ ವರ್ಷ 10 ಸಾವಿರ ಕೋಟಿ ರೂ. ಅನುದಾನ ತೆಗೆದಿಡುವುದಾಗಿ ಹೇಳಿದ್ದೀರಿ. 5 ವರ್ಷದ ಅವಧಿಯಲ್ಲಿ ನೀವು ಕೊಟ್ಟಿದ್ದು 7,582 ಕೋಟಿ ರೂ. ಮಾತ್ರ ಅಲ್ಲವೆ?
  • ಶಾಲಾ ಮಕ್ಕಳ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂಬ ವಾಗ್ದಾನ ಏನಾಗಿದೆ?
  • ಪ್ರತಿ ಗ್ರಾಮ ಪಂಚಾಯಿತಿಗೆ ಒಂದು ಪಶು ಆಸ್ಪತ್ರೆ ತೆರೆಯಲಾಗಿದೆಯೆ?
  • ಕಲ್ಯಾಣ ಕರ್ನಾಟಕದಲ್ಲಿ ಕಲ್ಯಾಣಪಥ, 50 ಲಕ್ಷ ಉದ್ಯೋಗ ಸೃಷ್ಟಿ ವಾಗ್ದಾನ ಎಲ್ಲಿದೆ?
  • ಕ್ರೀಡಾ ವಿಶ್ವವಿದ್ಯಾಲಯ ಸ್ಥಾಪಿಸಿದ್ದೀರಾ?
  • ಜಿಲ್ಲಾ ಕೇಂದ್ರಗಳ ನಡುವೆ ಸಂಪರ್ಕ ಕಲ್ಪಿಸುವ ರಸ್ತೆಗಳು ಎಲ್ಲಿವೆ?
  • ಹೆದ್ದಾರಿಗಳಲ್ಲಿ 100ಕಿ.ಮೀ.ಗೆ 1 ಟ್ರಾಮಾ ಕೇರ್ ಸೆಂಟರ್ ತೆರೆಯಲಾಗಿದೆಯೆ?
  • ರೈತರ ಮಕ್ಕಳಿಗೆ ಏನಾದರೂ ಕೊಟ್ಟಿದ್ದೀರಾ?
  • ಕೊಳೆಗೇರಿ ಮುಕ್ತ ಕರ್ನಾಟಕ ಎಲ್ಲಿದೆ?
  • ಪ್ರತಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಆಗಿವೆಯೆ? * ಲಂಬಾಣಿ ತಾಂಡಾಗಳು ಕಂದಾಯ ಗ್ರಾಮ ಮಾಡಿದ್ದೀರಾ?
  • ಪ್ರತಿ ತಾಲೂಕಿನಲ್ಲಿ ಸ್ತ್ರೀ ಶಕ್ತಿ ಭವನ ನಿರ್ವಿುಸಲಾಗಿದೆಯೆ?
  • ಪ್ರಕೃತಿ ವಿಕೋಪ ಪರಿಹಾರ ನಿಧಿ ಎಲ್ಲಿದೆ?
  • ಕುಡಿಯುವ ನೀರು ಒದಗಿಸಲಾಗಿದೆಯೆ?
  • ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ರೈತರ ಆತ್ಮಹತ್ಯೆ ಆಗಿಲ್ಲವೆ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net