

ಚಿತ್ರದುರ್ಗ: ಬೆಳೆಗೆ ನಿಗದಿತ ಬೆಲೆ ಇಲ್ಲವಾಗಿದೆ. ನಾನು ಅಧಿಕಾರದಲ್ಲಿದ್ದಾಗ ಔಟ್‌ಲುಕ್ ರಿಪೋರ್ಟ್ ಕಾಯ್ದೆ ಜಾರಿಗೆ ಪ್ರಯತ್ನಿಸಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸಿರಿಗೆರೆಯಲ್ಲಿ ಭಾನುವಾರ ಹಮ್ಮಿಕೊಡಿದ್ದ ಶ್ರೀ ಶಿವಕುಮಾರ ಶಿವಾಚಾರ‌್ಯ ಸ್ವಾಮೀಜಿ ಅವರ 31ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ‘ಕೋರ್ಟ್‌ನ ಕಟಕಟೆಯಲ್ಲಿ ಜಂಗಮ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
10 ವರ್ಷಗಳಲ್ಲಿ ಮಳೆ, ಬೆಳೆ, ಮಾರುಕಟ್ಟೆ, ಬೆಲೆ ಸಮೀಕ್ಷೆ ನಡೆಸಿ, ಆಯಾ ವರ್ಷ ಬೆಳೆಗೆ ಬೆಲೆ ನಿಗದಿ ಪಡಿಸಬೇಕು. ಬೆಲೆ ಕುಸಿದರೆ ನಿರ್ದಿಷ್ಟ ನಷ್ಟವನ್ನು ರೈತರಿಗೆ ಸರ್ಕಾರ ತುಂಬಿಕೊಡ ಬೇಕಾಗುತ್ತದೆ ಎಂದ ಪ್ರಸ್ತಾಪಿತ ಕಾಯ್ದೆ ಕುರಿತು ವಿವರಿಸಿದರು.
ರೂರಲ್ ಕ್ರೆಡಿಟ್ ಸಿಸ್ಟಮ್‌ನಂತೆ ಬೆಳೆಗಳಿಗೆ ಸೂಕ್ತ ಸಾಲ ಸಿಗುತ್ತಿಲ್ಲ. ಯಾವ ಬೆಳೆ ಎಲ್ಲಿ ಎಂಬುದನ್ನು ಲೆಕ್ಕ ಹಾಕಿ ಸಾಲ ಕೊಟ್ಟರೆ ಮೀಟರ್ ಬಡ್ಡಿಗೆ ಕಡಿವಾಣ ಹಾಕಬಹುದು. ನಮ್ಮ ಸರ್ಕಾರದ ಶೂನ್ಯ ಬಡ್ಡಿ ದರದ 5 ಲಕ್ಷ ರೂ. ವರೆಗೆ ಬೆಳೆ ಸಾಲ ಕೊಡುವುದನ್ನು ಈಗಿನ ಸರ್ಕಾರ ಮುಂದುವರಿಸಿರುವುದು ಒಳ್ಳೆಯ ಕೆಲಸ. ದೇಶದಲ್ಲಿ ಆಹಾರದ ಸುರಕ್ಷತೆ ಇದೆ. ಕೃಷಿ ಕ್ಷೇತ್ರ ಬೆಳೆದಿದ್ದರೂ ರೈತರು ಹಾಗೆಯೇ ಇದ್ದಾರೆ ಎಂದರು.