

ಹಾವೇರಿ: ಇಂದು ಹಾವೇರಿ ಬಿಜೆಪಿ ಕಚೇರಿಗೆ ಮಾಜಿ ಸಿಎಂ, ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಆಗಮಿಸುತ್ತಿದಂತೆ ಕಾರ್ಯಕರ್ತರ ನಡುವೆ ಗದ್ದಲ, ಗಲಾಟೆ ಭುಗಿಲೆದ್ದಿದ್ದು, ಕಾರ್ಯಕರ್ತರು ಹೈಡ್ರಾಮಾ ಸೃಷ್ಟಿಸಿದ್ದಾರೆ. ಇದರಿಂದ ತೀವ್ರ ಬೇಸರಗೊಂಡ ಬೊಮ್ಮಾಯಿ ಕಾರ್ಯಕ್ರಮ ಮೊಟಕುಗೊಳಿಸಿ, ಅಲ್ಲಿಂದ ಹೊರಟು ಹೋಗಿದ್ದಾರೆ.
ಹಾವೇರಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರರನ್ನು ಎಳದಾಡಿ ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ಶಹರ ಹಾಗೂ ಗ್ರಾಮೀಣ ಭಾಗದ ಅಧ್ಯಕ್ಷರನ್ನು ಬದಲಿಸುವ ವಿಚಾರವಾಗಿ ಗಲಾಟೆ ಆರಂಭಗೊಂಡಿತು. ನಗರ ಕಾರ್ಯಕರ್ತರನ್ನು ಗ್ರಾಮೀಣ ಭಾಗದ ಅಧ್ಯಕ್ಷರಾಗಿ ಮಾಡಿದ್ದಕ್ಕೆ ಕಾರ್ಯಕರ್ತರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.
ಕೂಡಲೆ ಗ್ರಾಮೀಣ ಮತ್ತು ನಗರದ ಅಧ್ಯಕ್ಷರನ್ನು ಬದಲಾಯಿಸಿ, ಹೊಸಬರನ್ನು ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ. ಈ ಕುರಿತಂತೆ ಮಾಜಿ ಸಿಎಂ ಬೊಮ್ಮಾಯಿಗೆ ಕಾರ್ಯಕರ್ತರು ಮನವಿ ಮಾಡಿದರು. ಜಟಾಪಟಿಯ ಬೆನ್ನಲ್ಲೇ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಬೊಮ್ಮಾಯಿ, ಇದನ್ನು ಸರಿ ಮಾಡುತ್ತೇನೆ, ನೀವೆಲ್ಲಾ ಒಗಟ್ಟು ಪ್ರದರ್ಶಿಸಿ. ಚುನಾವಣೆ ಹತ್ತಿರ ಇದೆ ಗಲಾಟೆ ಸರಿಯಲ್ಲ. ರಾಜ್ಯಾಧ್ಯಕ್ಷರಿಗೆ ಹೇಳಿ ಸರಿಪಡಿಸುವೆ ಎಂದು ಮನವಿ ಮಾಡಿದರು.
ಕಾರ್ಯಕರ್ತರಿಗೆ ಮನವಿ ಮಾಡಿದ ಕೂಡಲೇ ಕಾರ್ಯಕ್ರಮ ಮೊಟಕುಗೊಳಿಸಿದ ಬೊಮ್ಮಾಯಿ, ಹಾವೇರಿ ಬಿಜೆಪಿ ಕಚೇರಿಯಿಂದ ತೆರಳಿದರು.