

ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೊ ಯಾತ್ರೆ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಬೆನ್ನಲ್ಲೇ, ಬಿಜೆಪಿ ಕೂಡ ಜನ ಸಂಕಲ್ಪ ಸಮಾವೇಶ ಆಯೋಜನೆ ಮಾಡುವ ಮೂಲಕ ಜನರನ್ನು ತಲುಪಲು ಮುಂದಾಗಿದೆ. ಹೊಸಪೇಟೆೆ, ದೊಡ್ಡಬಳ್ಳಾಪುರದಲ್ಲಿ ಈಗಾಗಲೇ ದೊಡ್ಡ ಪ್ರಮಾಣದಲ್ಲಿ ಸಮಾವೇಶ ನಡೆಸಿರುವ ಕಮಲ ಪಡೆ
ಮಂಗಳವಾರ ರಾಯಚೂರಿನ ಗಿಲ್ಲೆಸುಗೂರು ಗ್ರಾಮದಲ್ಲಿ ‘ಜನ ಸಂಕಲ್ಪ’ ಸಮಾವೇಶ ನಡೆಸಲಿದೆ. ‘ಮಿಷನ್ 150’ ಗುರಿ ಸಾಧಿಸುವ ನಿಟ್ಟಿನಲ್ಲಿ ‘ನಮ್ಮ ನಡೆ ವಿಜಯದ ಕಡೆ’ ಎಂಬ ವಿಶ್ವಾಸದೊಂದಿಗೆ ರಾಜ್ಯ ನಾಯಕರ ಎರಡು ತಂಡಗಳು ಪ್ರವಾಸಕ್ಕೆ ಸಜ್ಜಾಗಿವೆ. ಜನಪರ ಆಡಳಿತ ಅಲೆ ಹುಟ್ಟುಹಾಕುವುದು ಈ ಯಾತ್ರೆ ಮುಖ್ಯ ಉದ್ದೇಶ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ, ಪಕ್ಷದ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಈ ಯಾತ್ರೆ ಪ್ರಾರಂಭವಾಗಲಿದೆ. ಕಲ್ಯಾಣ ಕರ್ನಾಟಕ ಪ್ರದೇಶದ ಪಕ್ಷ ದುರ್ಬಲವೆಂದು ಗುರುತಿಸಿದ, ಸ್ವಯಂಕೃತ ತಪು್ಪಗಳಿಂದ ಕಳೆದುಕೊಂಡ ಕ್ಷೇತ್ರಗಳನ್ನು ಕೇಂದ್ರೀಕರಿಸಿ, ಸಿಎಂ-ಮಾಜಿ ಸಿಎಂ ಅವರನ್ನು ಪ್ರಚಾರದ ಕಣಕ್ಕೆ ಪಕ್ಷ ಇಳಿಸಿದೆ.
ಸಾಧನೆ ಸಾರುವ ಬೊಮ್ಮಾಯಿ: ಕಳೆದ ಮೂರು ವರ್ಷಗಳ ಬಿಜೆಪಿ ಸರ್ಕಾರದ ಸಾಧನೆಯನ್ನು ಬೊಮ್ಮಾಯಿ ಮಂಡಿಸಲಿದ್ದಾರೆ. 2009ರ ನೆರೆ ಹಾವಳಿ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಈ ಭಾಗದಲ್ಲಿ ಕೈಗೊಂಡ ಪರಿಹಾರ, ಪುನರ್ವಸತಿ ಕೆಲಸಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದದ್ದು ಈ ಸ್ಥಳ ಆಯ್ಕೆಗೆ ಪ್ರಮುಖ ಕಾರಣ. ನಾಯಕದ್ವಯರ ಯಾತ್ರೆಯು ರಾಮನಗರ ಜಿಲ್ಲೆ ಮಾಗಡಿಯಲ್ಲಿ ಮುಕ್ತಾಯವಾಗಲಿದೆ. ಪಕ್ಷಕ್ಕೆ ಭದ್ರ ನೆಲೆಯೇ ಇಲ್ಲವೆಂಬ ಕ್ಷೇತ್ರವನ್ನು ಆಯ್ದುಕೊಳ್ಳಲಾಗಿದೆ. ಈ ಕ್ಷೇತ್ರದ ಪ್ರಭಾವಿ ನಾಯಕರೊಬ್ಬರನ್ನು ಸೇರ್ಪಡೆ ಮಾಡಿಕೊಂಡು ಎದುರಾಳಿಗಳಿಗೆ ಸ್ಪಷ್ಟ ಸಂದೇಶ ರವಾನಿಸುವ ಸಾಧ್ಯತೆಗಳಿವೆ. ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದ ಮತ್ತೊಂದು ತಂಡವು ಮಂಗಳವಾರವೇ ಸಿಎಂ ತವರು ಜಿಲ್ಲೆ ಹಾವೇರಿಯಿಂದ ಪ್ರವಾಸ ಪ್ರಾರಂಭಿಸಲಿದೆ. ಎರಡೂ ತಂಡಗಳಿಗೆ ಕೇಂದ್ರ, ರಾಜ್ಯದ ಸಚಿವರು ಸೇರಿ ಪ್ರಮುಖರು ಸಾಥ್ ನೀಡಲಿದ್ದಾರೆ.
ಅ.11 ಬೆಳಗ್ಗೆ ಹಾವೇರಿ, ಮಧ್ಯಾಹ್ನ ರಾಣೆಬೆನ್ನೂರು, ಹಾವೇರಿ ಜಿಲ್ಲೆ. ಅ.12 ಬೆಳಗ್ಗೆ ಗಜೇಂದ್ರಗಡ, ಗದಗ, ಮಧ್ಯಾಹ್ನ ನವಲಗುಂದ, ಧಾರವಾಡ ಗ್ರಾಮಾಂತರ, 13ರ ಬೆಳಗ್ಗೆ ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಮಧ್ಯಾಹ್ನ ಕಲಘಟಗಿ, ಧಾರವಾಡ ಜಿಲ್ಲೆ.
ಅ.11ರ ಬೆಳಗ್ಗೆ 11ಕ್ಕೆ ರಾಯಚೂರು ಗ್ರಾಮಾಂ ತರ, ರಾಯ ಚೂರು ಜಿಲ್ಲೆ, ಅ.12ರ ಬೆಳಗ್ಗೆ 11ಕ್ಕೆ ಹೊಸಪೇಟೆ, ವಿಜಯನಗರ ಜಿಲ್ಲೆ, ಮಧ್ಯಾಹ್ನ 3ಕ್ಕೆ ಕುಷ್ಟಗಿ, ಕೊಪ್ಪಳ ಜಿಲ್ಲೆ, ಅ.13ರ ಬೆಳಗ್ಗೆ 11ಕ್ಕೆ ಹೂವಿನಹಡಗಲಿ, ವಿಜಯನಗರ ಜಿಲ್ಲೆ, ಮಧ್ಯಾಹ್ನ 3ಕ್ಕೆ ಸಿರಗುಪ್ಪ, ಬಳ್ಳಾರಿ ಜಿಲ್ಲೆ. ಅ.18ರ ಬೆಳಗ್ಗೆ 11ಕ್ಕೆ ಔರಾದ್, ಮಧ್ಯಾಹ್ನ 3ಕ್ಕೆ ಹುಮ್ನಾಬಾದ್, ಬೀದರ್ ಜಿಲ್ಲೆ. ಅ.19 ಬೆಳಗ್ಗೆ 11ಕ್ಕೆ ಶಹಾಪುರ, ಮಧ್ಯಾಹ್ನ 3ಕ್ಕೆ ಕಲಬುರಗಿ ಗ್ರಾಮಾಂತರ, ಯಾದಗಿರಿ ಜಿಲ್ಲೆ. ಅ.23 ಬೆಳಗ್ಗೆ 11ಕ್ಕೆ ಚಿತ್ತಾಪುರ, ಮಧ್ಯಾಹ್ನ 3ಕ್ಕೆ ಆಳಂದ, ಕಲಬುರಗಿ ಗ್ರಾಮಾಂತರ ಜಿಲ್ಲೆ. ಸಂಯೋಜಕ: ವಿಧಾನ್ ಪರಿಷತ್ ಸದಸ್ಯ ಹಾಗೂ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್.
ರಾಜ್ಯ ನಾಯಕರ ಎರಡು ತಂಡಗಳ ಜನಸಂಕಲ್ಪ ಪ್ರವಾಸ ಹಾಗೂ ಸಮಾವೇಶಗಳಲ್ಲಿ ಕೇಂದ್ರ, ರಾಜ್ಯದ ಸಚಿವರು, ಹಾಲಿ/ ಮಾಜಿ ಸಂಸದ-ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.
| ನಿರ್ಮಲ್ ಕುಮಾರ್ ಸುರಾನಾ ಬಿಜೆಪಿ ರಾಜ್ಯ ಉಪಾಧ್ಯಕ್ಷ
ರಾಜಕೀಯ ಯಾತ್ರೆ ಹಾಗೂ ಜನಸಂಕಲ್ಪ ಸಮಾವೇಶಗಳಿಗೆ ಸಿಎಂ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಒಟ್ಟು 26 ದಿನಗಳನ್ನು ಮೀಸಲಿಟ್ಟಿದ್ದು, 51 ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲಿದ್ದಾರೆ. ಅ.11 ರಂದು ರಾಯಚೂರು ಜಿಲ್ಲೆಯಿಂದ ಶುರುವಾಗಿ ಡಿ. 25ಕ್ಕೆ ರಾಮನಗರ ಜಿಲ್ಲೆ ಮಾಗಡಿಗೆ ಮುಕ್ತಾಯವಾಗಲಿದೆ. ಉಭಯ ನಾಯಕರಿಬ್ಬರ ನೇತೃತ್ವದ ತಂಡ ಅಕ್ಟೋಬರ್ನಲ್ಲಿ 6, ನವೆಂಬರ್ನಲ್ಲಿ 11 ಹಾಗೂ ಡಿಸೆಂಬರ್ನಲ್ಲಿ ಒಂಭತ್ತು ದಿನಗಳ ಯಾತ್ರೆ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.