

ಮುಂಬೈ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಆರೋಪಿಯಾಗಿರುವ ಗೌತಮ್ ನವಲಖ ಅವರಿಗೆ ಜಾಮೀನು ನಿರಾಕರಿಸಿದ್ದ ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ(ಎನ್ಐಎ)ಯ ಸ್ಪೆಷಲ್ ಕೋರ್ಟ್ನ ಆದೇಶದ ವಿರುದ್ಧದ ಮೇಲ್ಮನವಿಯನ್ನು ಬಾಂಬೆ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.
2017ರ ಡಿಸೆಂಬರ್ 31 ರಂದು ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷದ್ ಎಂಬ ಸಮ್ಮೇಳನವು ಮಾರನೆಯ ದಿನ ನಡೆದ ಹಿಂಸಾಚಾರಕ್ಕೆ ಕುಮ್ಮಕ್ಕು ನೀಡಿತ್ತು ಎಂದು ಪುಣೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಸಮ್ಮೇಳನವನ್ನು ಆಯೋಜಿಸಿದ ಹಲವು ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದರು. ಈ ರೀತಿಯಾಗಿ ನಕ್ಸಲರೊಂದಿಗೆ ಲಿಂಕ್ ಹೊಂದಿರುವ ಆರೋಪದ ಮೇಲೆ ದೆಹಲಿಯ ನಾಗರೀಕ ಹಕ್ಕು ಚಳುವಳಿಕಾರ ಗೌತಮ್ ನವಲಖ ಅವರನ್ನು 2018 ರ ಜೂನ್ ತಿಂಗಳಲ್ಲಿ ಪೊಲೀಸರು ಬಂಧಿಸಿದ್ದರು.
ನವಲಖ ಅವರು ಅಪರಾಧಿಕ ಪ್ರಕ್ರಿಯೆ ಸಂಹಿತೆಯ 167 ನೇ ಸೆಕ್ಷನ್ ಅಡಿಯಲ್ಲಿ ನೀಡಬಹುದಾದ ಡಿಫಾಲ್ಟ್ ಬೇಲ್ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಎನ್ಐಎ ಕೋರ್ಟ್ 2020ರ ಜುಲೈ 12 ಕ್ಕೆ ತಿರಸ್ಕರಿಸಿದ್ದು, ಈ ಆದೇಶದ ವಿರುದ್ಧ ಬಾಂಬೆ ಹೈಕೋರ್ಟ್ನಲ್ಲಿ ನವಲಖ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಬಂಧನದ 90 ದಿನಗಳೊಳಗೆ ಚಾರ್ಜ್ಶೀಟ್ ಸಲ್ಲಿಸದೆ ಇರುವುದರಿಂದ ಡೀಫಾಲ್ಟ್ ಜಾಮೀನು ನೀಡಬೇಕೆಂದು ನವಲಖ ವಕೀಲರು ವಾದಿಸಿದ್ದರು. ಸರ್ಕಾರಿ ವಕೀಲರು ಆರೋಪಿಯು 2018 ರಲ್ಲಿ ಹೌಸ್ ಅರೆಸ್ಟ್ನಲ್ಲಿದ್ದ ಅವಧಿಯನ್ನು ಬಂಧನದ ಅವಧಿಯಾಗಿ ಎಣಿಸಲು ಸಾಧ್ಯವಿಲ್ಲ; ಆದ್ದರಿಂದ 90 ದಿನಗಳ ಅವಧಿ ಮೀರಿಲ್ಲ ಎಂದು ವಾದಿಸಿದ್ದರು.
ವಿಚಾರಣೆಯ ನಂತರ 2020ರ ಡಿಸೆಂಬರ್ 16 ರಂದು ಈ ಮೇಲ್ಮನವಿಯ ಮೇಲೆ ವಾದಗಳನ್ನು ಆಲಿಸಿದ್ದ ನ್ಯಾಯಾಲಯ ತೀರ್ಪನ್ನು ಕಾಯ್ದಿರಿಸಿತ್ತು. ಮೇಲ್ಮನವಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಸ್.ಎಸ್.ಶಿಂದೆ ಮತ್ತು ನ್ಯಾಯಮೂರ್ತಿ ಎಂ.ಎಸ್.ಕರಣಿಕ್ ಅವರ ವಿಭಾಗೀಯ ಪೀಠವು, ಎನ್ಐಎ ಕೋರ್ಟ್ನ ಆದೇಶದಲ್ಲಿ ಬದಲಾವಣೆ ಮಾಡಲು ಯಾವುದೇ ಕಾರಣ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ.(ಏಜೆನ್ಸೀಸ್)