ಬಾಂಬ್ ಸ್ಪೋಟದ ಬೆದರಿಕೆ; ತಿರುಪತಿಯಲ್ಲಿ ಹೈ ಅಲರ್ಟ್

Tirupati
Published on

ಹೈದರಾಬಾದ್: ಬಾಂಬ್ ಸ್ಪೋಟದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಶುಕ್ರವಾರ ಪ್ರಖ್ಯಾತ ವೆಂಕಟೇಶ್ವರ ದೇವಸ್ಥಾನವಿರುವ ತಿರುಮಲ ಸಹಿತ ತಿರುಪತಿಯ ಅನೇಕ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲಾಗಿತ್ತು. ತಿರುಪತಿಯ ನಾಲ್ಕು ಸ್ಥಳಗಳಲ್ಲಿ ಆರ್​ಡಿಎಕ್ಸ್​ಗಳನ್ನು ಸ್ಪೋಟಿಸುವುದಾಗಿ ಬೆದರಿಸುವ ಇ-ಮೇಲ್ ಸಂದೇಶಗಳು ಜಿಲ್ಲಾ ಪೊಲೀಸ್ ಮುಖ್ಯಸ್ಥರ ಮತ್ತು ಮುಖ್ಯಮಂತ್ರಿ ಕಚೇರಿಗೆ ಬಂದಿದ್ದವು. ಐಎಸ್​ಐ ಮತ್ತು ತಮಿಳುನಾಡಿನಲ್ಲಿರುವ ಮಾಜಿ ಎಲ್​ಟಿಟಿಇ ಉಗ್ರಗಾಮಿಗಳು ಸ್ಫೋಟ ನಡೆಸಲು ಯೋಜಿಸುತ್ತಿದ್ದಾರೆಂದು ಇ-ಮೇಲ್​ನಲ್ಲಿ ಹೇಳಲಾಗಿತ್ತು. ಬಾಂಬ್ ಬೆದರಿಕೆಯಿಂದಾಗಿ ನಗರಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಲ್ಲಿ ಭಾರಿ ಆತಂಕ ಸೃಷ್ಟಿಯಾಗಿತ್ತು.

ಆರ್​ಟಿಸಿ ಬಸ್ ನಿಲ್ದಾಣ, ಶ್ರೀನಿವಾಸಂ, ವಿಷ್ಣು ನಿವಾಸಂ, ಕಪಿಲತೀರ್ಥಂ ಮತ್ತು ಗೋವಿಂದರಾಜುಲ ಸ್ವಾಮಿ ದೇವಾಲಯ ಸಹಿತ ಹಲವು ಪ್ರಮುಖ ಸ್ಥಳಗಳಲ್ಲಿ ಪೊಲೀಸರು ವ್ಯಾಪಕ ತಪಾಸಣೆ ನಡೆಸಿದರು. ನ್ಯಾಯಾಧೀಶರ ವಸತಿ ಸಂಕೀರ್ಣ ಮತ್ತು ಕೋರ್ಟ್ ಆವರಣಗಳಲ್ಲಿ ಕೂಡ ತಪಾಸಣೆ ನಡೆಸಲಾಗಿದ್ದು ಇದೊಂದು ಹುಸಿ ಬೆದರಿಕೆ ಎಂಬುದು ಗೊತ್ತಾಗಿದೆ. ಸಿಎಂ ಎನ್.ಚಂದ್ರಬಾಬು ನಾಯ್ಡು ಅ.6ರಂದು ತಿರುಪತಿಗೆ ಭೇಟಿ ನೀಡುವ ಕಾರ್ಯಕ್ರಮವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net