

ಬೆಂಗಳೂರು: ಕನ್ನಿಂಗ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದಲ್ಲಿ (ಎನ್‌ಎಸ್‌ಇ) ಬಾಂಬ್ ಇಟ್ಟಿರುವ ಸಂಬಂಧ ಕರೆ ಬಂದಿದ್ದು, ಈ ಸಂಬಂಧ ವಿಧಾನಸೌಧ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕಚೇರಿಗೆ ಕರೆ ಮಾಡಿರುವ ದುಷ್ಕಮಿಗಳು ಬೆಂಗಳೂರಿನ ಎನ್‌ಎಸ್‌ಇ ಕಚೇರಿಯಲ್ಲಿ ಬಾಂಬ್ ಇಡಲಾಗಿದೆ ಎಂದು ಹೇಳಿದ್ದಾರೆ. ಕೂಡಲೇ ಮುಂಬೈನ ಎನ್‌ಎಸ್‌ಇ ಕಚೇರಿ ಅಧಿಕಾರಿಗಳು ಜ.೩ ರಂದು ೧ ಗಂಟೆಗೆ ಕರೆ ಮಾಡಿ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಸ್ಪೋಟಕ ವಸ್ತು ಪತ್ತೆಯಾಗಿಲ್ಲ. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ, ನೆರೆ ರಾಜ್ಯದಿಂದ ಬೆದರಿಕೆ ಕರೆ ಬಂದಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.