ಕನ್ನಡಕ್ಕೆ ಬಾಲಿವುಡ್ ನಿರ್ಮಾಣ ಸಂಸ್ಥೆಗಳು; ದಕ್ಷಿಣಭಾರತದತ್ತ ದೊಡ್ಡ ನಿರ್ಮಾಪಕರ ಚಿತ್ತ

Kantara
Published on

ಬೆಂಗಳೂರು: ಕಳೆದ ವರ್ಷ ಕನ್ನಡ ಚಿತ್ರರಂಗದ ಪಾಲಿಗೆ ಅದೃಷ್ಟದ ವರ್ಷವಾಗಿತ್ತು. ‘ಕೆಜಿಎಫ್ ಚಾಪ್ಟರ್ 2’, ‘ಕಾಂತಾರ’, ‘777 ಚಾರ್ಲಿ’, ‘ವಿಕ್ರಾಂತ್ ರೋಣ’, ‘ಜೇಮ್್ಸ’... ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳು 100 ಕೋಟಿ ರೂ.ನಿಂದ 1250 ಕೋಟಿ ರೂ.ವರೆಗೂ ಬಿಜಿನೆಸ್ ಮಾಡಿದ್ದವು. ಜತೆಗೆ ತೆಲುಗು, ತಮಿಳಿನಲ್ಲೂ ‘ಆರ್​ಆರ್​ಆರ್’, ‘ಪುಷ್ಪ’, ‘ವಿಕ್ರಮ್, ‘ಪೊನ್ನಿಯಿನ್ ಸೆಲ್ವನ್ 1’ ಸೇರಿದಂತೆ ಕೆಲವು ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದವು. ದಕ್ಷಿಣ ಭಾರತದ ಮುಂದೆ ಬಾಲಿವುಡ್ ಕೂಡ ಮಂಕಾಗಿತ್ತು. ಈ ಎಲ್ಲ ಬೆಳವಣಿಗೆಗಳನ್ನು ಮನಗಂಡು ಇದೀಗ ದೊಡ್ಡ ನಿರ್ಮಾಣ ಸಂಸ್ಥೆಗಳೂ, ದಕ್ಷಿಣದತ್ತ ಮುಖ ಮಾಡಿವೆ.

ಕಳೆದ ವರ್ಷದಿಂದ ಕನ್ನಡದ ಹೊಂಬಾಳೆ ಫಿಲಂಸ್ ತೆಲುಗು, ಮಲಯಾಳಂ ಚಿತ್ರಗಳನ್ನು ನಿರ್ವಿುಸುತ್ತಿದೆ. ಹೀಗೆ ಕನ್ನಡದ ನಿರ್ಮಾಣ ಸಂಸ್ಥೆ ಪರಭಾಷೆಗಳಿಗೆ ಎಂಟ್ರಿ ಕೊಡುತ್ತಿರುವಂತೆಯೇ, ಪರಭಾಷೆಯ ದೊಡ್ಡ ನಿರ್ಮಾಣ ಸಂಸ್ಥೆಗಳು ಕನ್ನಡದತ್ತ ಗಮನ ಹರಿಸಿವೆ. ಕಳೆದ ವರ್ಷ ತೆರೆಕಂಡ ಕೊನೆಯ ಹಿಟ್ ಸಿನಿಮಾ ‘ವೇದ’ ಬಿಡುಗಡೆ ಮಾಡಿದ್ದ ಜೀ ಸ್ಟುಡಿಯೋಸ್ ಸಂಸ್ಥೆ ಸ್ಯಾಂಡಲ್​ವುಡ್​ನಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಿದ್ಧತೆ ನಡೆಸಿದೆ. ಕಳೆದ ವರ್ಷ ಕನ್ನಡದಲ್ಲಿ ‘ದೃಶ್ಯ 2’, ‘ಹೆಡ್ ಬುಷ್’, ‘ವೇದ’ ಚಿತ್ರಗಳನ್ನು ಜೀ ಸ್ಟುಡಿಯೋಸ್ ಬಿಡುಗಡೆ ಮಾಡಿತ್ತು. ಅದೇ ರೀತಿ ತಮಿಳಿನಲ್ಲಿ ‘ವಲಿಮೈ’, ತೆಲುಗಿನಲ್ಲಿ ‘ರಿಪಬ್ಲಿಕ್’, ‘ಬಂಗಾರ್ ರಾಜು’ ಸೇರಿದಂತೆ ಕೆಲವು ಸಿನಿಮಾಗಳನ್ನು ರಿಲೀಸ್ ಮಾಡಿತ್ತು. ಆ ಮೂಲಕ ದಕ್ಷಿಣ ಭಾರತದಲ್ಲೇ 400 ಕೋಟಿ ರೂ.ನಷ್ಟು ಬಿಜಿನೆಸ್ ಆಗಿತ್ತು. ಹೀಗಾಗಿ ಈ ವರ್ಷ ಕನ್ನಡ ಸೇರಿದಂತೆ ತೆಲುಗು ಹಾಗೂ ತಮಿಳು ಚಿತ್ರಗಳತ್ತ ಸಂಸ್ಥೆ ಹೆಚ್ಚು ಗಮನ ಹರಿಸಿದೆ.

ಈ ವರ್ಷದ ಪ್ರಾರಂಭದಲ್ಲಿಯೇ ಜಗ್ಗೇಶ್ ಅಭಿನಯದ ‘ರಂಗನಾಯಕ’ ಚಿತ್ರದ ಬಿಡುಗಡೆ ಜವಾಬ್ದಾರಿಯನ್ನು ಜೀ ಸ್ಟುಡಿಯೋಸ್ ವಹಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಸಿನಿಮಾಗಳ ನಿರ್ಮಾಣ ಮತ್ತು ವಿತರಣೆಯಲ್ಲಿ ಹೆಚ್ಚು ತೊಡಗಲು ಯೋಜನೆ ಹಾಕಿಕೊಂಡಿದೆ. ಈ ಬಗ್ಗೆ ‘ಕಳೆದ 3 ವರ್ಷಗಳಿಂದ ಬಾಲಿವುಡ್​ನಲ್ಲಿ ಹೆಚ್ಚು ತೊಡಗಿದ್ದೆವು. ಕಳೆದ ವರ್ಷದಿಂದ ಕನ್ನಡ ಚಿತ್ರರಂಗದತ್ತ ಹೆಚ್ಚು ಗಮನ ಹರಿಸಿದ್ದೇವೆ. ಈ ವರ್ಷ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಸಿನಿಮಾಗಳ ನಿರ್ವಣ, ವಿತರಣೆಯಲ್ಲಿ ತೊಡಗಲಿದ್ದೇವೆ. ಜತೆಗೆ ತಮಿಳು, ತೆಲುಗು ಚಿತ್ರರಂಗಗಳಲ್ಲೂ ಸಮಾನವಾಗಿ ಕೆಲಸ ಮಾಡಲಿದ್ದೇವೆ’ ಎಂದು ಜೀ ಸ್ಟುಡಿಯೋಸ್ ಕನ್ನಡ ಚಿತ್ರಗಳ ಮ್ಯಾನೇಜರ್ ರೂಪಲಕ್ಷ್ಮೀ ಮಾಹಿತಿ ನೀಡುತ್ತಾರೆ. ಹೀಗೆ ದೊಡ್ಡ ನಿರ್ಮಾಣ ಸಂಸ್ಥೆಗಳು ಕನ್ನಡದತ್ತ ಮುಖ ಮಾಡಿರುವುದು, ಸ್ಯಾಂಡಲ್​ವುಡ್ ಪಾಲಿಗೆ ಖುಷಿಯ ವಿಚಾರವೇ ಸರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net