

ಬೆಂಗಳೂರು: ‘ಕಾಂತಾರ’ ಸಿನಿಮಾದ ಯಶಸ್ಸಿನ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ದೇಶಾದ್ಯಂತ ಪ್ರಸಿದ್ಧಿಯಾಗಿದ್ದರು. ಇತ್ತೀಚೆಗೆ ಪ್ರಕಟಗೊಂಡ 70ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲೂ ‘ಅತ್ಯುತ್ತಮ ನಟ’ ಹಾಗೂ ‘ಅತ್ಯುತ್ತಮ ಮನರಂಜನಾ ಚಿತ್ರ’ ಎರಡು ಪ್ರಶಸ್ತಿಗಳನ್ನು ‘ಕಾಂತಾರ’ ತಮ್ಮದಾಗಿಸಿಕೊಂಡಿತ್ತು. ಈ ಮೂಲಕ ರಿಷಬ್ ಶೆಟ್ಟಿ ಮತ್ತೊಮ್ಮೆ ಪ್ರಸಿದ್ಧಿಯಾಗಿದ್ದರು. ಈ ನಡುವೆಯೇ ಸಂದರ್ಶನವೊಂದರಲ್ಲಿ ರಿಷಬ್, ಬಾಲಿವುಡ್ ಸಿನಿಮಾಗಳಲ್ಲಿ ಭಾರತವನ್ನು ನೆಗಟಿವ್ ಆಗಿ ತೋರಿಸಲಾಗುತ್ತದೆ’ ಎಂದು ನೀಡಿರುವ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ರಿಷಬ್, ‘ಭಾರತೀಯ ಸಿನಿಮಾ ರಂಗದಲ್ಲಿ ಮುಖ್ಯವಾಗಿ ಬಾಲಿವುಡ್ ಚಿತ್ರಗಳಲ್ಲಿ ದೇಶವನ್ನು ಕೆಟ್ಟದಾಗಿ, ಕೇವಲವಾಗಿ ತೋರಿಸಿ ಅಂತಾರಾಷ್ಟ್ರೀಯ ಮಟ್ಟದ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರಶಸ್ತಿಗಳನ್ನು ತೆಗೆದುಕೊಂಡು ಬಂದಿರುವುದನ್ನು ನಾನು ಗಮನಿಸಿದ್ದೇನೆ. ಆದರೆ, ನನ್ನ ಪ್ರಕಾರ, ದೇಶ, ರಾಜ್ಯ ಹಾಗೂ ಭಾಷೆ ಹೆಮ್ಮೆಯ ಸಂಗತಿಗಳು. ಹಾಗಾಗಿ ಇವುಗಳನ್ನು ಜಗತ್ತಿನ ಎದುರು ಧನಾತ್ಮಕವಾಗಿ ತೋರಿಸಬೇಕು. ನನ್ನ ಸಿನಿಮಾಗಳಲ್ಲಿ ದೇಶ, ಭಾಷೆ, ರಾಜ್ಯದ ವಿಷಯಗಳನ್ನು ಧನಾತ್ಮಕವಾಗಿ ತೋರಿಸುತ್ತೇನೆ’ ಎಂದಿದ್ದಾರೆ. ಬಾಲಿವುಡ್ ಸಿನಿಮಾಗಳ ಬಗೆಗಿನ ರಿಷಬ್ ಕಮೆಂಟ್ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಯಾವುದೇ ಬಾಲಿವುಡ್ ಸ್ಟಾರ್ ಪ್ರತಿಕ್ರಿಯಿಸಿಲ್ಲ. ‘ಕಾಂತಾರ’ ಯಶಸ್ಸಿನ ಬಳಿಕ ರಿಷಬ್ ‘ಕಾಂತಾರ-1’ರಲ್ಲಿ ಬಿಜಿಯಾಗಿದ್ದಾರೆ