

ಬೆಂಗಳೂರು: ಬಹುಸಂಸ್ಕೃತಿ ನಗರ, ಬಹುಭಾಷಿಕರಿಗೆ ನೆಲೆ ನೀಡಿರುವ ಬೆಂಗಳೂರನ್ನು ಇಷ್ಟಪಡದವರೇ ಇಲ್ಲ. ಬೇರೆ ರಾಜ್ಯ ಹಾಗೂ ದೇಶಗಳಿಂದ ಹಲವರು ಈ ಮಹಾನಗರಕ್ಕೆ ಆಗಮಿಸಿ ಇಲ್ಲಿನ ವೈವಿಧ್ಯತೆಗೆ ಮಾರುಹೋಗುತ್ತಾರೆ. ಅಲ್ಲದೇ, ಸಿಲಿಕಾನ್ ಸಿಟಿಯ ಅನುಕೂಲ ವಾತಾವರಣ, ಆಹಾರ ಹಾಗೂ ಸಂಸ್ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ವಿಚಾರದಲ್ಲಿ ಸಿನಿಮಾ ತಾರೆಯರು, ಕ್ರಿಕೆಟಿಗರು ಕಡಿಮೆ ಏನಿಲ್ಲ. ಟ್ರಾಫಿಕ್ ಒಂದನ್ನು ಹೊರತುಪಡಿಸಿ, ಉಳಿದ ಎಲ್ಲ ವಿಚಾರಗಳಿಗೆ ಬಹುತೇಕರು ಬೆಂಗಳೂರನ್ನು ಇಷ್ಟಪಡುತ್ತಾರೆ. ಇದೀಗ ಈ ಸಾಲಿಗೆ ಬಾಲಿವುಡ್ ನಟಿ ಸನ್ನಿ ಲಿಯೋನ್ ಸೇರ್ಪಡೆಯಾಗಿದ್ದಾರೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ನಟಿ ಸಿಲಿಕಾನ್ ಸಿಟಿಯ ಬಗ್ಗೆ ಮೆಚ್ಚುಗೆವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ನಟಿ, ‘ನಾನು ಬೆಂಗಳೂರನ್ನು ತುಂಬಾ ಇಷ್ಟಪಡುತ್ತೇನೆ. ಹಾಗಾಗಿ ಇಲ್ಲಿಗೆ ಬಂದಿದ್ದೇನೆ. ಇಲ್ಲಿನ ಕಾರ್ಯಕ್ರಮದಲ್ಲಿ ಭಾಗವಹಿಸಲು ಖುಷಿಯಾಗುತ್ತಿದೆ’ ಎಂದಿದ್ದಾರೆ. ಈ ಕಾರ್ಯಕ್ರಮದಲ್ಲಿ ಸನ್ನಿ ಲಿಯೋನ್ ನೃತ್ಯದ ಮೂಲಕ ನೆರೆದಿದ್ದವರನ್ನು ರಂಜಿಸಿದ್ದಾರೆ.
ಅವಕಾಶ ಸಿಕ್ಕರೆ ಮತ್ತೊಮ್ಮೆ ಕನ್ನಡದಲ್ಲಿ: ಬಾಲಿವುಡ್ ನಟಿ ಸನ್ನಿ ಲಿಯೋನ್ ಕಳೆದ 15 ವರ್ಷಗಳಲ್ಲಿ ಕನ್ನಡ, ಹಿಂದಿ, ತೆಲುಗು, ಮಲಯಾಳಂ ಸೇರಿ 25ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರೇಮ್ ನಟನೆಯ ‘ಡಿಕೆ’ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೂ ಪರಿಚಯವಾಗಿದ್ದರು. ಈ ಚಿತ್ರದಲ್ಲಿ ಶೇಷಮ್ಮ ಎಂಬ ಹಾಡಿಗೆ ಹೆಜ್ಜೆ ಹಾಕಿ ಗಮನಸೆಳೆದಿದ್ದರು. ನಂತರ ಇಂದ್ರಜಿತ್ ಲಂಕೇಶ್ ನಿರ್ದೇಶನದ ವಿ.ರವಿಚಂದ್ರನ್ ಅಭಿನಯದ ‘ಲವ್ ಯೂ ಆಲಿಯಾ’ದಲ್ಲಿ ಕೂಡ ವಿಶೇಷ ಸಾಂಗ್‌ಗೆ ನೃತ್ಯ ಮಾಡಿದ್ದರು. ಆ ಬಳಿಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಸನ್ನಿ ಲಿಯೋನ್, ‘ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳಿಗೆ ಅವಕಾಶ ಸಿಕ್ಕರೆ ಖಂಡಿತವಾಗಿಯೂ ಮತ್ತೊಮ್ಮೆ ಅಭಿನಯಿಸುತ್ತೇನೆ’ ಎಂದು ಮನದ ಇಂಗಿತ ವ್ಯಕ್ತಪಡಿಸಿದ್ದಾರೆ. ಸದ್ಯ ಸನ್ನಿ ಲಿಯೋನ್ ‘ರಂಗೀಲಾ’, ‘ಶೇರೊ’, ‘ಹೆಲೆನ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ.