Bhoomi Pednekar - ಬೆಳವಡಿ ಮಲ್ಲಮ್ಮಳಾದ ಭೂಮಿ ಪೆಡ್ನೇಕರ್​

ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್​
ಬೆಳವಡಿ ಮಲ್ಲಮ್ಮ ಪಾತ್ರದಲ್ಲಿ ಭೂಮಿ ಪೆಡ್ನೇಕರ್​
Published on
Bhoomi Pednekar -
"ಕಾಂತಾರ' ಸರಣಿಯ ಯಶಸ್ಸಿನ ಬಳಿಕ ನಟ, ನಿರ್ದೇಶಕ ರಿಷಬ್​ ಶೆಟ್ಟಿ, ಸಂದೀಪ್​ ಸಿಂಗ್​ ಜತೆ "ದ ಪ್ರೈಡ್​​ ಆಫ್​​ ಭಾರತ್​ : ಛತ್ರಪತಿ ಶಿವಾಜಿ ಮಹಾರಾಜ್​' ಚಿತ್ರಕ್ಕಾಗಿ ಕೈಜೋಡಿಸಿರುವುದು ಗೊತ್ತಿದೆ. "ಅಲೀಘಡ್​', "ಸರಬ್ಜಿತ್​' "ಪಿಎಂ ನರೇಂದ್ರ ಮೋದಿ', "ಮೈ ಅಟಲ್​ ಹೂ', "ಸ್ವಾತಂತ್ರ್ಯ ವೀರ್​ ಸಾವರ್ಕರ್​' ಚಿತ್ರಗಳನ್ನು ನಿರ್ಮಿಸಿರುವ ಸಂದೀಪ್​ ಸಿಂಗ್​ ನೈಜ ಘಟನೆಯಾಧಾರಿತ, ಐತಿಹಾಸಿಕ ಸಿನಿಮಾಗಳ ಮೂಲಕವೇ ಜನಪ್ರಿಯತೆ ಗಳಿಸಿರುವುದು. ಹಾಗೇ ಕಳೆದ ವರ್ಷ ತೆರೆಗೆ ಬಂದ "ಸಫೇದ್​' ಮೂಲಕ ನಿರ್ದೇಶನಕ್ಕಿಳಿದಿರುವ ಅವರು, ಇದೀಗ "ಶಿವಾಜಿ ಮಹಾರಾಜ್​' ಬಯೋಪಿಕ್​ ಮೂಲಕ ಇನ್ನೊಂದು ಹೆಜ್ಜೆಯಿಟ್ಟಿದ್ದಾರೆ. ಇನ್ನು ರಿಷಬ್​ ಶೆಟ್ಟಿ ಲುಕ್​ ಕೂಡ ಕುತೂಹಲ ಮೂಡಿಸುವಂತಿದ್ದು, ಈ ಪ್ಯಾನ್​ ಇಂಡಿಯಾ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಈಗಾಗಲೇ ರಿಷಬ್​ ಜತೆ ಅರ್ಜುನ್​ ರಾಮ್​ಪಾಲ್​, ವಿವೇಕ್​ ಓಬೆರಾಯ್​ ಇನ್ನೂ ಹಲವು ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗಷ್ಟೆ ಬಾಲಿವುಡ್​ ನಟಿ ಭೂಮಿ ಸತೀಶ್​ ಪೆಡ್ನೇಕರ್​ ತಂಡ ಸೇರಿಕೊಂಡಿದ್ದಾರೆ. ಅವರಿಲ್ಲಿ "ಬೆಳವಡಿ ಮಲ್ಲಮ್ಮ' ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. 11 ವರ್ಷಗಳ ಸಿನಿಕರಿಯರ್​ನಲ್ಲಿ "ಟಾಯ್ಲೆಟ್​: ಏಕ್​ ಪ್ರೇಮ್​ಕಥಾ', "ಸೋನ್​ಚಿಡಿಯಾ', "ದುರ್ಗಮತಿ', "ಭೀಡ್​', "ಭಕ್ಷಕ್​' ಸೇರಿ 20ಕ್ಕೂ ಹೆಚ್ಚು ಸಿನಿಮಾಗಳು, "ದ ರಾಯಲ್ಸ್​', "ದಲ್​ದಲ್​' ವೆಬ್​ಸರಣಿಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಭೂಮಿ ಮಿಂಚಿದ್ದರು, "ಶಿವಾಜಿ' ಬಯೋಪಿಕ್​ ಅವರ ಮೊದಲ ಐತಿಹಾಸಿಕ ಸಿನಿಮಾ ಎಂಬುದು ವಿಶೇಷ. ಹೀಗಾಗಿಯೇ ಕತ್ತಿವರಸೆ, ಕುದುರೆ ಸವಾರಿ ಸೇರಿ ಭೂಮಿ ಸದ್ಯ "ಬೆಳವಡಿ ಮಲ್ಲಮ್ಮ' ಪಾತ್ರಕ್ಕಾಗಿ ಸಿದ್ಧತೆ ಆರಂಭಿಸಿದ್ದಾರೆ ಎನ್ನಲಾಗಿದೆ. "ದ ಪ್ರೈಡ್​ ಆಫ್​ ಭಾರತ್​ : ಛತ್ರಪತಿ ಶಿವಾಜಿ ಮಹಾರಾಜ್​' ಸಿನಿಮಾ ಎರಡು ಭಾಗಗಳಲ್ಲಿ ಮೂಡಿಬರಲಿದ್ದು, ಇದೇ ವರ್ಷದಂತ್ಯಕ್ಕೆ ಚಿತ್ರೀಕರಣ ಪ್ರಾರಂಭವಾಗಲಿದೆ.
ಕೋಟ್​:
ಛತ್ರಪತಿ ಶಿವಾಜಿ ಮಹಾರಾಜರಂತಹ ವೀರ ಸೇನಾನಿಯ ಕುರಿತ ಇಷ್ಟು ದೊಡ್ಡ ಮಟ್ಟದ ಸಿನಿಮಾದ ಭಾಗವಾಗಲು ತುಂಬ ಖುಷಿಯಾಗುತ್ತಿದೆ. ಹೆಮ್ಮೆಯೂ ಹೌದು. ಜತೆಗೆ ಕರ್ನಾಟಕದ ಧೀರ ರಾಣಿ ಬೆಳವಡಿ ಮಲ್ಲಮ್ಮ ಅವರ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟವೇ ಸರಿ. ನಾನು ಸಹ "ಕಾಂತಾರ' ಅಭಿಮಾನಿ. ರಿಷಬ್​ ಶೆಟ್ಟಿಯವರ ನಟನೆ ಕೂಡ ತುಂಬ ಇಷ್ಟವಾಗಿತ್ತು. ಇದುವರೆಗೂ ನಾನು ಇಂತಹ ಕಥೆಯಲ್ಲಿ ನಟಿಸಿಲ್ಲ. ಹೀಗಾಗಿ ಸಂದೀಪ್​ ಸಿಂಗ್​ ಕಥೆ ಹೇಳಿದ ತಕ್ಷಣ ಒಪ್ಪಿಕೊಂಡೆ.
- ಭೂಮಿ ಪೆಡ್ನೇಕರ್​, ನಟಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net