ತುಂಬಾದ್-2ನಲ್ಲಿ ಆಲಿಯಾ: ಆ್ಯಕ್ಷನ್ ಬಳಿಕ ಹೆದರಿಸಲು ಮುಂದಾದ ಬಾಲಿವುಡ್ ನಟಿ

ಆಲಿಯಾ ಭಟ್​
ಆಲಿಯಾ ಭಟ್​
Published on

ಪ್ರಮುಖ ಮುಖ್ಯಾಂಶಗಳು

  • ಭಿನ್ನ-ವಿಭಿನ್ನ ಜಾನರ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ
  • ಅನಿಲ್ ರಾವೆ ಬಾರ್ವೆ ನಿರ್ದೇಶನದ ತುಂಬಾದ ಚಿತ್ರದ ಸೀಕ್ವೆಲ್
  • ತುಂಬಾದ್ 3ಗೆ ಆಲಿಯಾನೇ ನಾಯಕಿ
ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ನಟಿ ಆಲಿಯಾ ಭಟ್ ಬಾಲಿವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂತಹ ಆಲಿಯಾ ಭಟ್ ಚಿತ್ರರಂಗ ಪ್ರವೇಶಿಸಿದ ಆರಂಭದಲ್ಲಿ ಹಲವು ಟೀಕೆಗಳನ್ನು ಎದುರಿಸಿದ್ದರು. ನೆಪೋ ಕಿಡ್, ನಟನೆ ಬರುವುದಿಲ್ಲ ಹಾಗೂ ಸಾಮಾನ್ಯ ಜ್ಞಾನದ ಕೊರತೆ.. ಹೀಗೆ ಹಲವು ವಿಚಾರಗಳಿಗೆ ಟ್ರೋಲ್ ಆಗುತ್ತಿದ್ದರು. ಹಿಂದಿಯ ‘ಸ್ಟೂಡೆಂಟ್ ಆಫ್​ ದ ಇಯರ್’ (2012) ಬಾಲಿವುಡ್ ಪ್ರವೇಶಿಸಿದ ಆಲಿಯಾ ಆರಂಭದಲ್ಲಿ ಅಂತಹ ಸದ್ದು ಮಾಡಲಿಲ್ಲ. ಆದರೆ, 2016ರಲ್ಲಿ ತೆರೆಕಂಡಿದ್ದ ನೈಜ ಘಟನೆಯಾಧಾರಿತ ‘ಉಡ್ತಾ ಪಂಜಾಬ್’ ಚಿತ್ರದ ಪಾತ್ರ ನಟಿಗೆ ದೊಡ್ಡ ಹೆಸರು ತಂದುಕೊಟ್ಟಿತು. ಆನಂತರ ಆಲಿಯಾ ತಿರುಗಿ ನೋಡಲಿಲ್ಲ. ‘ರಾಜೀ’, ‘ಗಲ್ಲಿಬಾಯ್’, ‘ಗಂಗೂಬಾಯಿ ಕಾಥಿಯಾವಾಡಿ’, ‘ಆರ್‌ಆರ್‌ಆರ್’, ‘ಬ್ರಹ್ಮಾಸ್ತ್ರ: ಭಾಗ 1’, ‘ಜಿಗ್ರಾ’ ಸೇರಿ ಕೆಲ ದಿನಗಳ ಹಿಂದೆಯಷ್ಟೇ ರಿಲೀಸ್ ಆದ ‘ಆಲ್ಫಾ’ದಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಗಮನ ಸೆಳೆದಿದ್ದಾರೆ. ಆ್ಯಕ್ಷನ್, ಬಯೋಪಿಕ್, ಸಸ್ಪೆನ್ಸ್ ಥ್ರಿಲ್ಲರ್ ಹೀಗೆ ಭಿನ್ನ ಜಾನರ್‌ಗಳಲ್ಲಿ ನಟಿಸಿರುವ ಆಲಿಯಾ ಇದೇ ಮೊದಲ ಬಾರಿಗೆ ‘ತುಂಬಾದ್ 2’ ಮೂಲಕ ಹೆದರಿಸಲು ಮುಂದಾಗುತ್ತಿದ್ದಾರೆ. ಕೆಲ ದಿನಗಳಿಂದ ‘ತುಂಬಾದ್ 2’ನಲ್ಲಿ ಆಲಿಯಾ ನಟಿಸುತ್ತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಆ ಬಗ್ಗೆ ಅವರು ಎಲ್ಲಿಯೂ ಬಾಯಿಬಿಟ್ಟಿರಲಿಲ್ಲ. ಇದೀಗ ಹಿಟ್ ಸೀಕ್ವೆಲ್‌ನಲ್ಲಿ ಆಲಿಯಾ ಇರುವುದು ಖಚಿತವಾಗಿದ್ದು, ನಟ ಸೋಹುಮ್ ಷಾ ನಟಿಯನ್ನು ಸ್ವಾಗತಿಸಿದ್ದಾರೆ. ರಾಹಿ ಅನಿಲ್ ಬಾರ್ವೆ ನಿರ್ದೇಶನದ 2018ರಲ್ಲಿ ತೆರೆಕಂಡಿದ್ದ ‘ತುಂಬಾದ್’ ಚಿತ್ರದ ಮುಂದುವರಿದ ಕಥೆಯಿದು. ಇಲ್ಲಿ ಆಲಿಯಾ ಅವರದು ಅತಿಥಿ ಪಾತ್ರ ಎನ್ನಲಾಗುತ್ತಿದ್ದು, ಸೋಹುಮ್ ಷಾ ಮತ್ತು ನವಾಜುದ್ದೀನ್ ಸಿದ್ದಿಕಿ ಜತೆ ತೆರೆಹಂಚಿಕೊಳ್ಳಲಿದ್ದಾರೆ. ಇದರ ಮುಂದುವರಿದ ‘ತುಂಬಾದ್ 3’ಗೆ ಆಲಿಯಾನೇ ನಾಯಕಿಯಾಗಲಿದ್ದಾರೆ ಎಂದು ತಿಳಿದುಬಂದಿದೆ. -ಏಜೆನ್ಸೀಸ್

‘ತುಂಬಾದ್’ ನನ್ನಲ್ಲಿಯೇ ಉಳಿದಿದೆ

‘ತುಂಬಾದ್ 2’ ಬಳಗ ಸೇರಿದ್ದಕ್ಕೆ ನಟಿ ಆಲಿಯಾ ಭಟ್ ಹರ್ಷ ವ್ಯಕ್ತಪಡಿಸಿದ್ದು, ‘ಚಿತ್ರವನ್ನು ಮೊದಲ ಬಾರಿಗೆ ನೋಡಿದಾಗಿನಿಂದಲೂ ಅದು ನನ್ನೊಂದಿಗೆ ಉಳಿದಿದೆ. ಅಂತಹ ವಿಶಿಷ್ಟ ಜಗತ್ತನ್ನು ಸೃಷ್ಟಿಸುವ ಸಿನಿಮಾಗಳು ವಿರಳ. ಈಗ ನಾನು ಆ ಪ್ರಪಂಚದ ಭಾಗವಾಗಿರುವುದಕ್ಕೆ ಖುಷಿಯಾಗುತ್ತಿದೆ. ಈ ಅವಕಾಶ ರೋಮಾಂಚನಕಾರಿಯಾದುದು. ನನ್ನ ನೆಚ್ಚಿನ ನಟರಾದ ಸೋಹುಮ್ ಮತ್ತು ನವಾಜ್ ಜತೆ ಕೆಲಸ ಮಾಡಲು ಉತ್ಸುಕಳಾಗಿದ್ದೇನೆ. ಪ್ರೇಕ್ಷಕರಿಗೆ ಹೊಸ ಪ್ರಪಂಚವನ್ನು ತೋರಿಸಲು ಕಾತುರಳಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಸದ್ಯ ಆಲಿಯಾ ಭಟ್ ‘ಲವ್ ಆ್ಯಂಡ್ ವಾರ್ ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net