ಬಿಜೆಪಿ ಸೇರಿದ ಬಾಲಿವುಡ್ ಹೀರೋ ಮಿಥುನ್ ಚಕ್ರವರ್ತಿ: ಬಂಗಾಳ ಬಿಜೆಪಿಗೆ ಆನೆಬಲ

mithun
Mithun Chakraborty
Published on

ಕಲ್ಕತ್ತ: ನಿರೀಕ್ಷೆಯಂತೆ ಬಾಲಿವುಡ್ ಹಿರಿಯ ನಟ ಹಾಗೂ ಟಿಎಂಸಿ ಯ ಮಾಜಿ ರಾಜ್ಯ ಸಭಾ ಸದಸ್ಯ ಮಿಥುನ್ ಚಕ್ರವರ್ತಿ ಅವರು ಇಂದು ಬಿಜೆಪಿ ಸೇರಿದ್ದಾರೆ.

ಕಲ್ಕತ್ತದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ಬಿಜೆಪಿ ಬೃಹತ್ ಚುನಾವಣೆ ಸಮಾವೇಶವನ್ನು ಭಾನುವಾರ ಆಯೋಜಿಸಿದ್ದು, ಈ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿ ಮಾತನಾಡಲಿದ್ದಾರೆ. ಇದಕ್ಕೂ ಪೂರ್ವದಲ್ಲೇ ಮಿಥುನ್ ಚಕ್ರವರ್ತಿ ಅವರು ಬಿಜೆಪಿ ಸೇರಿದ್ದಾರೆ. ಅವರನ್ನು ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಮೊನ್ನೆಯಷ್ಟೇ ಬಿಜೆಪಿ ಸಂಸದರೊಬ್ಬರು, ಮಿಥುನ್ ಚಕ್ರವರ್ತಿ ಅವರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದಾರೆ ಎಂದು ಹೇಳಿದ್ದರು. ಮಿಥುನ್ ಅವರ ಆಗಮನದಿಂದ ಬಂಗಾಳ ಬಿಜೆಪಿಗೆ ಹಾಗೂ ಬಂಗಾಳಕ್ಕೆ ಶಕ್ತಿ ಬರಲಿದೆ ಎಂದು ಹೇಳಿದ್ದರು.

ಇದೇ 27 ರಂದು ಪಶ್ಚಿಮ ಬಂಗಾಳದಲ್ಲಿ ಚುನಾವಣೆಗಳು ಪ್ರಾರಂಭವಾಗಲಿದ್ದು ಒಟ್ಟು ಎಂಟು ಹಂತದಲ್ಲಿ ಚುನಾವಣೆ ನಡೆಯಲಿದೆ. ಆಡಳಿತಾರೂಢ ಟಿಎಂಸಿ ಹಾಗೂ ಬಿಜೆಪಿ ನಡುವೆ ಭಾರೀ ಪೈಪೋಟಿ ಏರ್ಪಟ್ಟಿದೆ. ಇತ್ತೀಚೆಗಷ್ಟೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್​ಎಸ್​ಎಸ್​) ಮುಖ್ಯಸ್ಥ ಮೋಹನ್ ಭಾಗವತ್ ಅವರು ಬಾಲಿವುಡ್ ನಟ ಮಿಥುನ್ ಚಕ್ರವರ್ತಿ ಅವರನ್ನು ಮುಂಬೈ ನಿವಾಸದಲ್ಲಿ ಭೇಟಿ ಮಾಡಿದ್ದರು. ಈ ವೇಳೆ ಉಬಯ ಕುಶಲೋಪರಿ ನಡೆಸಿದ ಮೋಹನ್ ಭಾಗವತ್ ಅವರು ಮಿಥುನ್ ಚಕ್ರವರ್ತಿ ಮನೆಯಲ್ಲಿ ಉಪಹಾರ ಸವಿದಿದ್ದರು.

ಪಶ್ಚಿಮ ಬಂಗಾಳದಲ್ಲಿ ಮಿಥುನ್ ಅವರು ಅಪಾರ ಅಭಿಮಾನಿಗಳನ್ನು, ಬೆಂಬಲಿಗರನ್ನು ಹೊಂದಿದ್ದಾರೆ. ಅಲ್ಲದೇ ಅವರು ಈ ಹಿಂದೆ ತೃಣಮೂಲ ಕಾಂಗ್ರೆಸ್​ನಿಂದ ರಾಜ್ಯಸಭೆ ಸದಸ್ಯರೂ ಆಗಿದ್ದರು. ದಿದಿ ತವರಿನಲ್ಲಿ ಶತಾಯ ಗತಾಯ ಗದ್ದುಗೆ ಹಿಡಿಯಬೇಕು ಎಂದು ಬಿಜೆಪಿ ಹವಣಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net