

ಪುಣೆಯ ಅರ್ನ್್ಸ್ಟ ಆಂಡ್ ಯಂಗ್ (ಇವೈ) ಕಂಪನಿಯಲ್ಲಿ ಚಾರ್ಟರ್ಡ್ ಅಕೌಂಟಂಟ್ ಆಗಿ ಕೆಲಸ ಮಾಡುತ್ತಿದ್ದ ಅನ್ನಾ ಸೆಬಾಸ್ಟಿಯನ್ ಪೆರಯಿಲ್ ಎಂಬ 26 ವರ್ಷದ ಯುವತಿಯ ಸಾವು ಇದೀಗ ದೇಶಾದ್ಯಂತ ಸಂಚಲನ ಮೂಡಿಸಿದೆ. ಈ ಬಗ್ಗೆ ತನಿಖೆ ನಡೆಸುವುದಾಗಿ ಈಗಾಗಲೇ ಕೇಂದ್ರ ಸರ್ಕಾರ ಹೇಳಿದೆ. ಇವೈ ಇಡೀ ಜಗತ್ತಿನಲ್ಲೇ ಅತಿ ದೊಡ್ಡ ವೃತ್ತಿಪರ ಸೇವಾಸಂಸ್ಥೆಗಳಲ್ಲೊಂದು. ಮೂಲತಃ ಕೊಚ್ಚಿಯವಳಾದ ಅನ್ನಾ ಜುಲೈನಲ್ಲೇ ಮೃತಪಟ್ಟಿದ್ದಾಳೆ. ಈ ಅಕಾಲಿಕ ಸಾವಿಗೆ ಕಂಪನಿಯಲ್ಲಿರುವ ಕೆಟ್ಟ ವಾತಾವರಣ ಕಾರಣವೆಂದು ಅದರ ಅಧ್ಯಕ್ಷರಿಗೆ ಅನ್ನಾಳ ತಾಯಿ ಅನಿತಾ ಆಗಸ್ಟಿನ್ ಪತ್ರ ಬರೆದಿದ್ದರು. ಆ ಪತ್ರ ವೈರಲ್ ಆದ ನಂತರವೇ ಅಸಲಿ ವಿಷಯ ಹೊರಜಗತ್ತಿಗೆ ಗೊತ್ತಾಗಿ, ಕಂಪನಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಭಾರತದಲ್ಲಿನ ‘ಕೆಲಸದ ಸಂಸ್ಕೃತಿ’ ಬಗ್ಗೆ ಸಾರ್ವಜನಿಕ ಚರ್ಚೆ ಆರಂಭವಾಗಿದೆ.
‘‘ಅನ್ನಾ 2024ರ ಮಾರ್ಚ್ನಲ್ಲಿ ಇವೈನ ಪುಣೆ ಕಚೇರಿಯ ಆಡಿಟ್ ಟೀಮ್ೆ ಸೇರ್ಪಡೆಯಾಗಿದ್ದಳು. ಪಿಜಿಯಲ್ಲಿ ರೂಮ್ ಮಾಡಿದ್ದಳು. ತನ್ನ ಜೀವನದ ಮೊದಲ ಕೆಲಸ ಇಷ್ಟು ದೊಡ್ಡ ಕಂಪನಿಯಲ್ಲಿ ಸಿಕ್ಕಿದ್ದಕ್ಕೆ ಖುಷಿಯಾಗಿದ್ದಳು. ಆದರೆ ಆಕೆಗೆ ವೀಕೆಂಡ್ನಲ್ಲೂ ರಜೆ ಸಿಗುತ್ತಿರಲಿಲ್ಲ. ಕಚೇರಿಯಿಂದ ರಾತ್ರಿ ಒಂದೂವರೆಗೆ ಪಿಜಿಗೆ ಹಿಂತಿರುಗಿದ್ದೂ ಇದೆ. ಬಟ್ಟೆ ಬದಲಿಸುವಷ್ಟೂ ತ್ರಾಣವಿಲ್ಲದೆ ಮಲಗಿದ ಉದಾಹರಣೆ ಇದೆ. ವಿಪರೀತ ಕೆಲಸದ ಒತ್ತಡದಿಂದ 4 ತಿಂಗಳ ಬಳಿಕ ಜು. 20ರಂದು ಆಕೆ ಮೃತಪಟ್ಟಿದ್ದಾಳೆ’ ಎಂದು ಅನ್ನಾಳ ತಾಯಿಯು ಕಂಪನಿ ಅಧ್ಯಕ್ಷ ರಾಜೀವ್ ಮೆಮಾನಿ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಅಂತ್ಯಕ್ರಿಯೆಗೂ ಯಾರೂ ಬರಲಿಲ್ಲ!: ‘‘ಬೆನ್ನು ಮುರಿಯುವಂತೆ ದುಡಿಸಿಕೊಳ್ಳುವುದೊಂದೇ ಅಲ್ಲ, ನಿಮ್ಮ ಉದ್ಯೋಗಿಗಳ ಆರೋಗ್ಯ-ಆರಾಮ-ವಿರಾಮದ ಬಗ್ಗೆಯೂ ಕಾಳಜಿ ವಹಿಸಿ’ ಎಂದು ಕಂಪನಿ ಅಧ್ಯಕ್ಷರಿಗೆ ಮನವಿ ಮಾಡಿರುವ ಅನ್ನಾ ತಾಯಿ, ಅಂತ್ಯಕ್ರಿಯೆಗೆ ಕಂಪನಿ ವತಿಯಿಂದ ಯಾರೊಬ್ಬರೂ ಬರದೇ ಇರುವುದನ್ನೂ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅಂತ್ಯಕ್ರಿಯೆ ನಂತರ ಅನ್ನಾಳ ಮ್ಯಾನೇಜರ್ಗಳನ್ನು ಸಂರ್ಪಸಿದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ದೂರಿದ್ದಾರೆ. ಈ ಬಗ್ಗೆ ಲಿಂಕ್ಡ್ ಇನ್ ನಲ್ಲಿ ಪ್ರತಿಕ್ರಿಯಿಸಿರುವ ಕಂಪನಿ ಅಧ್ಯಕ್ಷ ಮೆಮಾನಿ, ‘‘ಅನ್ನಾಳ ಅಂತ್ಯಕ್ರಿಯೆಗೆ ಕಂಪನಿಯಿಂದ ಯಾರೂ ಹೋಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಈ ರೀತಿ ಹಿಂದೆ ಯಾವತ್ತೂ ಆಗಿಲ್ಲ, ಮುಂದೆ ಆಗಲು ಬಿಡುವುದಿಲ್ಲ’ ಎಂದಿದ್ದಾರೆ.
ಅನ್ನಾ ಮೃತಪಟ್ಟಿದ್ದು ಹೇಗೆ?: ಜು. 20ರಂದು ನಿಜಕ್ಕೂ ನಡೆದಿದ್ದೇನು ಎಂಬುದನ್ನು ಅನ್ನಾಳ ತಂದೆ ವಿವರಿಸಿದ್ದಾರೆ. ‘‘ಪಿಜಿಯಲ್ಲಿದ್ದ ಅನ್ನಾ ಅಂದು ರಾತ್ರಿ (ಸಾವಿಗೆ ಎರಡು ಗಂಟೆ ಮುನ್ನ) ತನ್ನ ಸ್ನೇಹಿತೆ ಆನ್ ಮೇರಿಗೆ ಫೋನ್ ಮಾಡಿ ಮಾತನಾಡಿದ್ದಳು. ತಡರಾತ್ರಿಯೂ ಮೀಟಿಂಗ್ ಕರೆಯುತ್ತಾರೆ ಎಂದಿದ್ದಳು. ‘ಈ ಕಂಪನಿಯಲ್ಲಿ ಯಾರೂ 3 ತಿಂಗಳಿಗಿಂತ ಜಾಸ್ತಿ ಇರೋದಿಲ್ಲ. ನೀನೂ ಹಾಗಾಗಬೇಡ’ ಅಂತ ಟೀಮ್ ಲೀಡರ್ ಹೇಳುತ್ತಿದ್ದುದನ್ನು ತಿಳಿಸಿದ್ದಳು. ತನ್ನ ತಾಯಿಗೂ ರಾತ್ರಿ 10 ಗಂಟೆ ವೇಳೆಗೆ ವಿಡಿಯೋ ಕಾಲ್ ಮಾಡಿದ್ದಳು. ಅದೇ ವೇಳೆ ಊಟಕ್ಕೆ ಆನ್ಲೈನ್ನಲ್ಲಿ ಆರ್ಡರ್ ಮಾಡಿದ್ದಳು. ಅದನ್ನು ತೆಗೆದುಕೊಳ್ಳಲು ಮೆಟ್ಟಿಲಿಳಿದು ಕೆಳಗೆ ಹೋಗಿದ್ದಳು. ನಂತರ ಮೇಲೆ ಹತ್ತಿ ಹೋಗುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ’ ಎಂದು ಅನ್ನಾಳ ತಂದೆ ವಿವರ ನೀಡಿದ್ದಾರೆ.
ಕಂಪನಿ ಅಧ್ಯಕ್ಷ ಹೇಳೋದೇನು?: ಅನ್ನಾ ಸಾವಿನ ಹಿನ್ನೆಲೆಯಲ್ಲಿ ಇವೈ ಅಧ್ಯಕ್ಷ ರಾಜೀವ್ ಮೆಮಾನಿ, ಕಂಪನಿಯ ಉದ್ಯೋಗಿಗಳಿಗೆ ಬರೆದಿರುವ ಗೌಪ್ಯ ಇಮೇಲ್ ಸೋರಿಕೆಯಾಗಿದೆ. ‘‘ಅನ್ನಾಳ ತಾಯಿ ನನಗೆ ಪತ್ರ ಬರೆದಿರುವುದು ನಿಜ. ಅವರ ಕುಟುಂಬದ ಜತೆ ಸಂಪರ್ಕದಲ್ಲಿದ್ದೇನೆ. ಭರಿಸಲಾಗದ ನಷ್ಟಕ್ಕೆ ವಿಷಾದ ವ್ಯಕ್ತಪಡಿಸಿದ್ದೇನೆ. ಕಂಪನಿಯಿಂದ ಅಗತ್ಯ ಸಹಾಯವನ್ನೂ ಮಾಡಲಾಗಿದೆ. ನಿಮ್ಮಲ್ಲಿ ಕೂಡ ಯಾರಿಗಾದರೂ ಒತ್ತಡದ ಸನ್ನಿವೇಶ ಉಂಟಾಗಿದ್ದರೆ ನಿಮ್ಮ ಟೀಮ್ ಲೀಡರ್ಗಳಿಗೆ ಅಥವಾ ಕಂಪನಿಯಲ್ಲಿರುವ ನಿಮ್ಮ ಹಿತೈಷಿಗಳಿಗೆ ಮಾಹಿತಿ ನೀಡಿ. ನಿಮ್ಮ ಭಾವನೆಗಳಿಗೆ ಕಂಪನಿ ಸಹಾನುಭೂತಿಯಿಂದ ಸ್ಪಂದಿಸುತ್ತದೆ ಎಂಬ ಭರವಸೆ ನೀಡುತ್ತೇನೆ. ಆರೋಗ್ಯಕರ, ಸಮತೋಲಿತ ಕೆಲಸದ ವಾತಾವರಣ ಸೃಷ್ಟಿಸುವುದು ನಮ್ಮ ಗುರಿಯಾಗಿದೆ’ ಎಂದು ಇಮೇಲ್ನಲ್ಲಿ ಹೇಳಿದ್ದಾರೆ.
ಭಾರತದಲ್ಲಿ ಕೆಲಸದ ಅವಧಿ ಹೆಚ್ಚು: ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆ (ಐಎಲ್ಒ) ವರದಿಯ ಪ್ರಕಾರ, ಸಿಬ್ಬಂದಿಯಿಂದ ಅತಿ ಹೆಚ್ಚು ಕೆಲಸ ಮಾಡಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಭಾರತೀಯ ಉದ್ಯೋಗಿಯೊಬ್ಬರು ವಾರಕ್ಕೆ ಸರಾಸರಿ 46.7 ಗಂಟೆ ಕೆಲಸ ಮಾಡುತ್ತಾರೆ. ಇತರ ದೇಶಗಳಿಗೆ ಹೋಲಿಸಿದರೆ ಇದು ಹೆಚ್ಚು. ಅಷ್ಟೇ ಅಲ್ಲ, ಶೇ. 51ರಷ್ಟು ಉದ್ಯೋಗಿಗಳು ವಾರಕ್ಕೆ 49 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುತ್ತಾರೆ.
ಕಂಪನಿಗೆ ಕೇಂದ್ರದ ನೋಟಿಸ್: ಅನ್ನಾ ಸಾವಿನ ಹಿನ್ನೆಲೆಯಲ್ಲಿ ತಮ್ಮ ಸಮ್ಮುಖದಲ್ಲಿ ಹಾಜರಾಗಿ ವಿವರಣೆ ನೀಡುವಂತೆ ಕೇಂದ್ರ ಕಾರ್ವಿುಕ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಇವೈ ಕಂಪನಿಯ ಭಾರತ ಘಟಕದ ಆಡಳಿತ ಮಂಡಳಿಗೆ ನೋಟಿಸ್ ನೀಡಿದ್ದಾರೆ. ‘‘ಕಾರ್ವಿುಕ ಆಯುಕ್ತರು ಈಗಾಗಲೇ ನೋಟಿಸ್ ಕಳಿಸಿದ್ದಾರೆ. ಅಧಿಕಾರಿಗಳು ಬಂದು ವಿವರಣೆ ನೀಡಿದ ನಂತರವೇ ನಿಜವಾದ ಕಾರಣ ಗೊತ್ತಾಗಲಿದೆ. ಈ ಮಧ್ಯೆ, ಘಟನೆ ಪುಣೆಯಲ್ಲಿ ನಡೆದಿರುವುದರಿಂದ ತನಿಖೆ ನಡೆಸಿ ವರದಿ ನೀಡುವಂತೆ ಮಹಾರಾಷ್ಟ್ರದ ಕಾರ್ವಿುಕ ಇಲಾಖೆಗೂ ಸೂಚನೆ ಹೋಗಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕತ್ತೆಗಳಂತೆ ದುಡಿಸುತ್ತಾರೆ...: ನನ್ನ ಪತ್ನಿ ಕೆಲಸ ಮಾಡುತ್ತಿದ್ದ ಬಹುರಾಷ್ಟ್ರೀಯ ಕಂಪನಿಯಲ್ಲಿ ದಿನಕ್ಕೆ 18 ಗಂಟೆ ದುಡಿಸುತ್ತಿದ್ದರು. ಹಾಗಾಗಿ ಕೆಲಸವನ್ನೇ ಬಿಡಬೇಕಾಯಿತು. ಇದು ಬಹುತೇಕ ಕಂಪನಿಗಳಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಅಷ್ಟೇ ಅಲ್ಲ, ಹೆಚ್ಚು ಕೆಲಸ ಮಾಡುವುದನ್ನು ವೈಭವೀಕರಿಸಿ, ಪ್ರೋತ್ಸಾಹಿ ಸಲಾಗುತ್ತಿದೆ. ಬೇರೆಯವರೂ ಹಾಗೇ ಕೆಲಸ ಮಾಡಬೇಕೆಂದು ಒತ್ತಾಯಿಸಲಾಗುತ್ತಿದೆ. ಭಾರತದಲ್ಲಿ ಮಾತ್ರ ಹೀಗೆ ಕತ್ತೆಗಳ ರೀತಿ ಕೆಲಸ ಮಾಡಿಸುವ ಈ ಬಹುರಾಷ್ಟೀಯ ಕಂಪನಿಗಳು ಇತರ ರಾಷ್ಟ್ರಗಳಲ್ಲಿ ಹಾಗೆ ಮಾಡುವುದಿಲ್ಲ. ಇಷ್ಟಾಗಿಯೂ ಭಾರತೀಯ ಉದ್ಯೋಗಿಗಳಿಗೆ ಕೆಲಸದ ಭದ್ರತೆ ಇರುವುದಿಲ್ಲ. ಉತ್ತಮ ಮೂಲಸೌಕರ್ಯ ಇರುವುದಿಲ್ಲ. ಅನ್ನಾಳ ಸಾವೇ ಕೊನೆಯದಾಗಬೇಕು. ಸರ್ಕಾರ ಎಲ್ಲ ಕಂಪನಿಗಳಿಗೆ ಅನ್ವಯವಾಗುವಂತೆ ನಿಯಮಗಳನ್ನು ರೂಪಿಸಬೇಕು ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಆಕಾಶ್ ವೆಂಕಟಸುಬ್ರಮಣ್ಯನ್.
ಆರೋಗ್ಯದ ಮೇಲಾಗುವ ಪರಿಣಾಮವೇನು? ದಿನಕ್ಕೆ 10 ಗಂಟೆ ಅದಕ್ಕಿಂತ ಹೆಚ್ಚು ಕಾಲ ವಾರದ ರಜೆಯೂ ಇಲ್ಲದೆ ಕೆಲಸ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ವೈಯಕ್ತಿಕ ಜೀವನದಲ್ಲಿ, ಕೌಟುಂಬಿಕ ಸಂಬಂಧಗಳ ಮೇಲೂ ಪರಿಣಾಮಗಳಾಗುತ್ತವೆ. ದೈಹಿಕವಾಗಿ ಬೆನ್ನು ನೋವು, ಕುತ್ತಿಗೆ ನೋವು ಕಾಣಿಸಿಕೊಳ್ಳುತ್ತದೆ. ದೀರ್ಘಾವಧಿ ಆರೋಗ್ಯ ಅಪಾಯಗಳೂ ಇರುತ್ತವೆ. ಹೃದಯಾಘಾತ, ನಿದ್ರಾಹೀನತೆ, ದೇಹತೂಕ ಹೆಚ್ಚಳ ಮುಂತಾದ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ. | ಡಾ. ತ್ರಿದೀಪ್ ಚೌಧರಿ ಮನಶ್ಶಾಸ್ತ್ರಜ್ಞ