50 ಲಕ್ಷ ರೂ. ವಂಚನೆ ಆರೋಪ; ಖ್ಯಾತ ಕುಸ್ತಿಪಟುಗಳ ವಿರುದ್ಧ ದೂರು ದಾಖಲಿಸಿದ ತಿಹಾರ್​ ಜೈಲಿನ ಸಹಾಯಕ ಎಸ್‌ಪಿ!

Untitled design - 2023-08-29T204554.737
Published on

ನವದೆಹಲಿ: ಹೆಸರಾಂತ ಕುಸ್ತಿಪಟುಗಳು ತನಗೆ 50 ಲಕ್ಷ ರೂ. ವಂಚಿಸಿದ್ದಾರೆ ಎಂದು ದೆಹಲಿಯ ತಿಹಾರ್​ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಆದ ದೀಪಕ್ ಶರ್ಮಾ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಿಹಾರ್ ಜೈಲಿನ ಸಹಾಯಕ ಸೂಪರಿಂಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ದೀಪಕ್ ಶರ್ಮಾ, ಹೆಸರಾಂತ ವೃತ್ತಿಪರ ಕುಸ್ತಿಪಟುಗಳಾದ ರೌನಕ್ ಗುಲಿಯಾ ಮತ್ತು ಅವರ ಪತಿ ಅಂಕಿತ್ ಗುಲಿಯಾ ತನಗೆ ಹೂಡಿಕೆಯ ಹೆಸರಿನಲ್ಲಿ 50 ಲಕ್ಷ ರೂ. ವಂಚನೆ ಮಾಡಿದ್ದಾರೆ ಎಂದು ನೇರವಾಗಿ ಆರೋಪಿಸಿದ್ದಾರೆ.

"ರಾಜ್ಯ ಕುಸ್ತಿ ಚಾಂಪಿಯನ್ ಆಗಿರುವ ರೌನಕ್ ಗುಲಿಯಾ ನನಗೆ ಡಿಸ್ಕವರಿ ಚಾನೆಲ್‌ನ 'ಇಂಡಿಯಾಸ್ ಅಲ್ಟಿಮೇಟ್ ವಾರಿಯರ್' ಎಂಬ ರಿಯಾಲಿಟಿ ಶೋನಲ್ಲಿ ಪರಿಚಯವಾದರು. ಆಕೆ ಮತ್ತು ಆಕೆಯ ಪತಿ ಇಬ್ಬರು ನಮ್ಮದೇ ಆರೋಗ್ಯ ಉತ್ಪನ್ನವಿದೆ. ಅದಕ್ಕೆ ಹೂಡಿಕೆದಾರರ ಅಗತ್ಯವಿದೆ. ನೀವು ಇನ್ವೆಸ್ಟ್​ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದು ಭರವಸೆ ಮಾತುಗಳ್ಳನಾಡಿದರು" ಎಂದು ಶರ್ಮಾ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.

"ಆರೋಗ್ಯ ಉತ್ಪನ್ನ ವ್ಯವಹಾರದಲ್ಲಿ ಹೂಡಿಕೆ ಮಾಡುವುದಾಗಿ 50 ಲಕ್ಷ ರೂ. ಪಡೆದುಕೊಂಡರು. ನಂತರದಲ್ಲಿ ಅದನ್ನು ನನಗೆ ಹಿಂದಿರುಗಿಸದೆ, ವಂಚಿಸಿದ್ದಾರೆ" ಎಂದು ಶರ್ಮಾ ದೂರಿನಲ್ಲಿ ಆರೋಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೂರ್ವ ದೆಹಲಿಯ ಮಧು ವಿಹಾರ್ ಪೊಲೀಸ್ ಅಧಿಕಾರಿಗಳು, ಹೆಚ್ಚಿನ ತನಿಖೆ ನಡೆಸುತ್ತಿದ್ದು, ದಂಪತಿ ಪತ್ತೆಗೆ ಬಲೆ ಬೀಸಿದ್ದಾರೆ ಎನ್ನಲಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net