ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಹಿಂಬದಿಯಿಂದ ಕಾರು ಗುದ್ದಿಸಿದ ಚಾಲಕಿ
ತಡೆಯಲು ಬಂದ ಟ್ರಾಫಿಕ್ ಕಾನ್ಸ್ಟೇಬಲ್ಗೂ ಕಾರು ಢಿಕ್ಕಿಗೆ ಯತ್ನ
ಜಾಲತಾಣಗಳಲ್ಲಿ ಸಖತ್ ವೈರಲ್ ಆಯ್ತು ಮಹಿಳೆಯ ಹೈಡ್ರಾಮಾ
Mumbai BMW Accident: ಮುಂಬೈನ ಬ್ಯುಸಿ ರಸ್ತೆಯೊಂದರಲ್ಲಿ ಸಖತ್ ಹೈಡ್ರಾಮಾ ನಡೆದಿದೆ. ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ಕಾರಿಗೆ ಬಿಎಂಡಬ್ಲ್ಯೂನಲ್ಲಿ ಬಂದ ಚಾಲಕಿ ಹಿಂದೆಯಿಂದ ತಂದು ಗುದ್ದಿಸಿದ್ದಾಳೆ. ಅಷ್ಟೇ ಅಲ್ಲ, ಕಾರು ತಡೆಯೋಕೆ ಬಂದ ಟ್ರಾಫಿಕ್ ಕಾನ್‌ಸ್ಟೇಬಲ್ ಮೇಲೆಯೇ ಕಾರು ಹರಿಸೋಕೆ ಯತ್ನಿಸಿದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.
ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ಕಾರಿಗೆ ಚಾಲಕಿ ತಮ್ಮ ಬಿಎಂಡಬ್ಲ್ಯೂ ಕಾರಿನಿಂದ ಹಿಂಬದಿಯಿಂದ ಗುದ್ದಿಸಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಸ್ಥಳದಲ್ಲಿದ್ದ ಟ್ರಾಫಿಕ್ ಕಾನ್‌ಸ್ಟೇಬಲ್ ಪ್ರಶಾಂತ್ ಹಾಕೆ ಅವರು ಕಾರಿನ ಬಾನೆಟ್ ಮುಂದೆ ನಿಂತು, ಕಾರನ್ನು ತಕ್ಷಣವೇ ನಿಲ್ಲಿಸುವಂತೆ ಪದೇ ಪದೇ ಸೂಚಿಸಿದ್ದಾರೆ. ಆದರೆ ಚಾಲಕಿ ಕಾರು ನಿಲ್ಲಿಸದೆ ಕಾನ್‌ಸ್ಟೇಬಲ್‌ಗೇ ಢಿಕ್ಕಿ ಹೊಡೆಯುವ ರೀತಿಯಲ್ಲಿ ಮುನ್ನುಗ್ಗಿಸಲು ಯತ್ನಿಸಿದ್ದಾರೆ.
ಈ ಘಟನೆಯಿಂದಾಗಿ ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿತ್ತು. ಅಲ್ಲಿದ್ದ ಮಹಿಳೆಯೊಬ್ಬರು ಕಾರು ನಿಲ್ಲಿಸುವಂತೆ ಕೂಗಿಕೊಳ್ಳುವುದು ಮತ್ತು ಟ್ರಾಫಿಕ್ ಪೊಲೀಸರು ಹೆಚ್ವರಿವರನ್ನು ಕರೆಸಲು ಹೇಳುವುದು ವಿಡಿಯೋದಲ್ಲಿದೆ.
ಈ ವೇಳೆ ಹಾದಿಹೋಕರೊಬ್ಬರು ಬಿಎಂಡಬ್ಲ್ಯೂ ಕಾರಿನ ಹಿಂದಿನ ಬಾಗಿಲು ತೆರೆದಾಗ, ಚಾಲಕಿ ತಮ್ಮ ಮೊಬೈಲ್ ಹೊರತೆಗೆದು ಸುತ್ತುವರಿದಿದ್ದ ಜನರ ವಿಡಿಯೋ ಮಾಡಲು ಶುರುಮಾಡಿದ್ದಾರೆ. ಅಲ್ಲದೆ ತಮ್ಮ ಮೇಲೆ ‘ಕಿರುಕುಳ ನೀಡಲಾಗುತ್ತಿದೆ’ ಎಂದು ಆರೋಪಿಸಿ, ತಕ್ಷಣವೇ ಕಾರಿನೊಂದಿಗೆ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಅಪಘಾತಕ್ಕೊಳಗಾದ ಕಾರಿನ ಚಾಲಕ ಈ ಸಂಬಂಧ ಜುಹು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇನ್ನು ಅಪಘಾತ ಎಸಗಿ ಸ್ಥಳದಿಂದ ಪರಾರಿಯಾದ ಬಿಎಂಡಬ್ಲ್ಯೂ ಕಾರು ಚಾಲಕಿಯ ವಿರುದ್ಧ ಸಂತಾಕ್ರೂಜ್ ಟ್ರಾಫಿಕ್ ವಿಭಾಗವು ಇ-ಚಲನ್ (e-challan) ಜಾರಿ ಮಾಡಿದೆ. (ಏಜೆನ್ಸೀಸ್)