

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷರ ನೇಮಕವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅದಲು ಬದಲು ಮಾಡಿ ಮರು ಆದೇಶ ಹೊರಡಿಸಿದ್ದಾರೆ.
ಇತ್ತೀಚೆಗೆ ನಡೆದ ನಿಗಮ-ಮಂಡಳಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಾಗ ನಿಕೇತ್ ರಾಜ್ ಅವರನ್ನು ಬಿಎಂಟಿಸಿ ಅಧ್ಯಕ್ಷರಾಗಿ ಸರ್ಕಾರ ನೇಮಿಸಿತ್ತು. ಇದೇ ವೇಳೆ ವಿ.ಎಸ್. ಆರಾಧ್ಯಗೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಆದೇಶ ಹೊರಬಂದ ದಿನವೇ ನಿಕೇತ್ ರಾಜ್ ಅಧಿಕಾರವನ್ನು ಸಹ ಸ್ವೀಕಾರ ಮಾಡಿದ್ದರು, ಆದರೆ, ಕಾಂಗ್ರೆಸ್ ವಲಯದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.
ವಿ.ಎಸ್. ಆರಾಧ್ಯ ಅವರು ಕೆಪಿಸಿಸಿ ಮತ್ತು ಎಐಸಿಸಿಯಲ್ಲಿ 40 ವರ್ಷಗಳ ಕಾಲ ಕೆಲಸ ಮಾಡಿದ್ದು, ಹಿರಿಯ ನಾಯಕರು. ಈ ಹಿಂದೆಯೇ ಬಿಎಂಟಿಸಿಗೆ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಮತ್ತೆ ಉಪಾಧ್ಯಕ್ಷ ಸ್ಥಾನ ಕೊಡುವುದು ಸರಿಯಲ್ಲ. ಜತೆಗೆ ಮೂರು ವರ್ಷಗಳ ಹಿಂದೆ ಪಕ್ಷಕ್ಕೆ ಬಂದ ನಿಕೇತ್ ರಾಜ್‌ಗೆ ದೊಡ್ಡ ಹುದ್ದೆ ಕೊಡುವುದು ಸರಿಯಲ್ಲ. ಇವರ ಕೈಕೆಳಗೆ ಹಿರಿಯ ಮುಖಂಡ ವಿ.ಎಸ್. ಆರಾಧ್ಯ ಕೆಲಸ ಮಾಡುವುದು ಶೋಭೆಯಲ್ಲ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡರು ಮತ್ತು ಸಚಿವರು ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿದ್ದಾರೆ.
ಈ ವಿಷಯ ದೆಹಲಿಯ ಎಐಸಿಸಿಗೂ ತಲುಪಿತ್ತು. ಈ ಎಲ್ಲವನ್ನು ಪರಿಗಣಿಸಿದ ಸಿದ್ದರಾಮಯ್ಯ, ಬಿಎಂಟಿಸಿ ಅಧ್ಯಕ್ಷರಾಗಿ ವಿ.ಎಸ್.ಆರಾಧ್ಯರನ್ನು ನೇಮಕ ಮಾಡಿ ಉಪಾಧ್ಯಕ್ಷರಾಗಿ ಎಂ. ನಿಕೇತ್ ರಾಜ್ ನೇಮಿಸಿದ್ದಾರೆ. ಇನ್ನೂ ಎಐಸಿಸಿ ಕಳುಹಿಸಿದ್ದ 39 ಹೆಸರಿನ ಪಟ್ಟಿಯಲ್ಲಿ 34 ಮಂದಿಗೆ ಮಾತ್ರ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಉಳಿದ ಐವರಿಗೂ ಅಧ್ಯಕ್ಷ ಸ್ಥಾನ ಕಲ್ಪಿಸಿ ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ.
ಸೈಯದ್ ಮೆಹಮೂದ್ ಚಿಸ್ಟಿ- ಅಧ್ಯಕ್ಷ, ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ
ಶರಣಪ್ಪ ಸಲಾದ್‌ಪುರ್-ಅಧ್ಯಕ್ಷ, ರಾಜ್ಯ ಮದ್ಯಪಾನ ಸಂಯಮ ಮಂಡಳಿ
ಬಿ.ಎಸ್. ಕವಲಗಿ-ಅಧ್ಯಕ್ಷ, ರಾಜ್ಯ ನಿಂಬೆ ಅಭಿವೃದ್ಧಿ ಮಂಡಳಿ
ಆಂಜನಪ್ಪ-ಅಧ್ಯಕ್ಷ,ರಾಜ್ಯ ಬೀಜ ನಿಗಮ
ನೀಲಕಂಠರಾವ್ ಎಸ್. ಮೂಲಗೆ-ಅಧ್ಯಕ್ಷ, ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ
ಅನಿಲ್‌ಕುಮಾರ್ ಜಮಾದಾರ್-ಉಪಾಧ್ಯಕ್ಷ, ಜವಾಹರ ಬಾಲಭವನ ಸೊಸೈಟಿ