

ಬೆಂಗಳೂರು: ಚಲಿಸುತ್ತಿದ್ದ ಬಸ್‌ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ಚಾಲಕ ಮತ್ತು ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಬಿಎಂಟಿಸಿ ಬಸ್ ಮಂಗಳವಾರ ಬೆಳಗ್ಗೆ ರೋಸ್ ಗಾರ್ಡನ್‌ನಿಂದ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಸುಮಾರು ೯ ಗಂಟೆಯ ಸಮಯದಲ್ಲಿ ಎಂ.ಜಿ ರಸ್ತೆಯ ಅನಿಲ್ ಕುಂಬ್ಳೆ ಸಿಗ್ನಲ್‌ನಲ್ಲಿ ಬಸ್ ನಿಲ್ಲಿಸಿದ್ದಾರೆ. ಸಿಗ್ನಲ್ ಬಿಟ್ಟಾಗ ಬಸ್ ಸ್ಟಾರ್ಟ್ ಮಾಡಲು ಚಾಲಕ ಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಎರಡ್ಮೂರು ಸಲ ಸ್ಟಾರ್ಟ್ ಮಾಡಲು ಪ್ರಯತ್ನಿಸಿದ್ದಾಗ ಇಂಜಿನ್‌ನಲ್ಲಿ ಏಕಾಏಕಿ ದಟ್ಟವಾದ ಹೊಗೆ ಬಂದು ಬಸ್‌ನ ಕೆಳ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿದ್ದೆ. ಕೂಡಲೇ ಚಾಲಕ ಹಾಗೂ ನಿರ್ವಾಹಕ ಸುಮಾರು ೩೦ ಪ್ರಯಾಣಿಕರನ್ನು ಬಸ್‌ನಿಂದ ಇಳಿಸಿದ್ದರಿಂದ ಭಾರೀ ಅನಾಹುತ ತಪ್ಪಿದೆ. ಬೆಂಕಿ ಕೆನ್ನಾಲಿಗೆ ಪೂರ್ತಿ ಬಸ್ ಆವರಿಸಿದ್ದರಿಂದ ಸಂಪೂರ್ಣ ಸುಟ್ಟು ಹಾನಿಯಾಗಿದೆ. ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಸಂಚಾರದಟ್ಟಣೆ:
ಜನನಿಬಿಡ ಪ್ರದೇಶವಾದ ಎಂ.ಜಿ ರಸ್ತೆಯಲ್ಲಿ ಬಿಎಂಟಿಸಿ ಬಸ್‌ಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು ಅರ್ಧ ಗಂಟೆಗಳ ಕಾಲ ಸಂಚಾರ ದಟ್ಟಣೆ ಉಂಟಾಗಿ ಪ್ರಯಾಣಿಕರು ಪರದಾಡಿದರು. ಸ್ಥಳಕ್ಕೆ ಬಿಎಂಟಿಸಿ ಅಧಿಕಾರಿಗಳು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.