

ಬೆಂಗಳೂರು: ಕೊಟ್ಟಿಗೆಪಾಳ್ಯ ಜಂಕ್ಷನ್ ಬಳಿ ಬಿಎಂಟಿಸಿ ಬಸ್ ಬ್ರೇಕ್ ಫೇಲ್ ಆಗಿ ಇಬ್ಬರು ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಡಿಪೋ ಮ್ಯಾನೇಜರ್ ಶಿವಲಿಂಗಯ್ಯ ಹಾಗೂ ಅಸಿಸ್ಟೆಂಟ್ ವರ್ಕ್ ಸೂಪರಿಂಟೆಂಡೆಂಟ್ ರನ್ನು ಅಮಾನತು ಮಾಡಲಾಗಿದೆ ಎಂದು ಬಿಎಂಟಿಸಿ ಪಶ್ಚಿಮ ವಿಭಾಗ ನಿಯಂತ್ರಣಾಧಿಕಾರಿ ಶ್ರೀನಾಥ್ ತಿಳಿಸಿದ್ದಾರೆ.
ಮಾಗಡಿ ರಸ್ತೆ ಸೀಗೇಹಳ್ಳಿ ಡಿಪೋಗೆ ಸೇರಿದ ಬಿಎಂಟಿಸಿ ಬಸ್ ಇಂದು ಬೆಳಗ್ಗೆ ಬ್ರೇಕ್ ಫೇಲ್ ಆಗಿ ಅಪಘಾತಕ್ಕೀಡಾಗಿತ್ತು. ಇದರಿಂದ ಇಬ್ಬರು ಮೃತಪಟ್ಟಿದ್ದರು. ಈ ಬಸ್ಗೆ ಬ್ರೇಕ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಒಂದು ವಾರದಿಂದಲೂ ಚಾಲಕ ಡಿಪೋದಲ್ಲಿ ಹೇಳುತ್ತಲೇ ಇದ್ದರೂ ಅಲ್ಲಿನ ಅಧಿಕಾರಿಗಳು ಲಕ್ಷ್ಯ ವಹಿಸಿರಲಿಲ್ಲ ಎಂದು ಹೇಳಲಾಗಿತ್ತು.
ಗಾಯಗೊಂಡು ಆಸ್ಪತ್ರೆಗೆ ದಾಖಲಾದವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಶ್ರೀನಾಥ್ ಅವರು, ಮೃತರ ಕುಟುಂಬಕ್ಕೆ ಸದ್ಯ ತಲಾ 25 ಸಾವಿರ ರೂಪಾಯಿ ಘೋಷಣೆ ಮಾಡಿದ್ದು ಗಾಯಾಳುಗಳ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ.
ಬಿಎಂಟಿಸಿ ಎಂಡಿ ಸೂಚನೆ ಮೇರೆಗೆ ಇಬ್ಬರನ್ನು ಅಮಾನತು ಮಾಡಲಾಗಿದೆ. ಬಸ್ ಚಾಲಕರು ಪ್ರತಿದಿನ ತಾವು ಓಡಿಸುವ ಬಸ್ನಲ್ಲಿರುವ ಸಮಸ್ಯೆಗಳ ಬಗ್ಗೆ ಡಿಪೋದಲ್ಲಿ ಮಾಹಿತಿ ನೀಡುತ್ತಾರೆ. ಅದನ್ನು ಡಿಪೋ ಮ್ಯಾನೇಜರ್ಗಳು ನೋಡಬೇಕು. ಇವತ್ತಿನ ಅಪಘಾತದ ಬಗ್ಗೆ ಆಂತರಿಕ ತನಿಖೆ ನಡೆಸಲು ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.
ಒಂದು ಬಿಎಂಟಿಸಿ ಬಸ್ನ್ನು ಎಂಟು ಲಕ್ಷ ಕಿ.ಮೀ.ವರೆಗೆ ಸಂಚಾರ ಮಾಡಿಸುತ್ತೇವೆ. ಇವತ್ತು ಅಪಘಾತವಾದ ಬಸ್ 5 ಲಕ್ಷ ಕಿ.ಮೀ ಸಂಚರಿಸಿದೆ. ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದಿದ್ದಾರೆ.