ಸದನದಲ್ಲಿ ಬಿಎಂಎಸ್ ಅಕ್ರಮ ಪ್ರಲಾಪ, ನಡೆಯದ ಕಲಾಪ: ಗದ್ದಲ, ಗಲಾಟೆಯಿಂದ ಅಧಿವೇಶನ ಮೊಟಕು

BMS
Published on

ಬೆಂಗಳೂರು: ಬಿಎಂಎಸ್ ಟ್ರಸ್ಟ್​ನಲ್ಲಿ ಅಕ್ರಮಗಳು ನಡೆದಿದ್ದು ಉನ್ನತ ಮಟ್ಟದ ತನಿಖೆಯಾಗಬೇಕೆಂದು ಆಗ್ರಹಿಸಿ ವಿಧಾನಸಭೆಯಲ್ಲಿ ಗುರುವಾರ ಧರಣಿ ಆರಂಭಿಸಿದ್ದ ಜೆಡಿಎಸ್ ಶುಕ್ರವಾರವೂ ಮುಂದುವರೆಸಿತು. ಕಲಾಪ ಪ್ರಾರಂಭಗೊಂಡ ಕೂಡಲೆ ಜೆಡಿಎಸ್ ಸದಸ್ಯರು ಸ್ಪೀಕರ್ ಪೀಠದ ಎದುರು ಬಂದು ಪ್ಲೆಕಾರ್ಡ್ ಹಿಡಿದು ಅಶ್ವತ್ಥನಾರಾಯಣ ವಿರುದ್ಧ ಘೋಷಣೆ ಕೂಗಿದರು.

ಸದನದಲ್ಲಿ ಗದ್ದಲ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆಯಂತೆ ಸ್ಪೀಕರ್ ಕಲಾಪವನ್ನು 10 ನಿಮಿಷ ಮುಂದೂಡಿದರು. ತಮ್ಮ ಕೊಠಡಿಗೆ ಜೆಡಿಎಸ್ ನಾಯಕರನ್ನು ಕರೆಸಿಕೊಂಡು ಮುಖ್ಯಮಂತ್ರಿ ಮತ್ತಿತರ ಸಚಿವರ ಸಮ್ಮುಖದಲ್ಲಿ ರಾಜೀ ಸಂಧಾನದ ಪ್ರಯತ್ನ ನಡೆಸಿದರು. ಆದರೆ, ಸರ್ಕಾರ ಈ ಪ್ರಕರಣವನ್ನು ಯಾವುದೇ ಕಾರಣಕ್ಕೂ ತನಿಖೆಗೆ ಕೊಡುವುದಿಲ್ಲ ಎಂಬ ನಿಲುವಿಗೆ ಬದ್ಧವಾದ್ದರಿಂದ ಸಂಧಾನ ವಿಫಲವಾಯಿತು.

ಬಳಿಕ ಸದನ ಸಮಾವೇಶಗೊಂಡಾಗಲೂ ಜೆಡಿಎಸ್ ಸದಸ್ಯರು ಪ್ರತಿಭಟನೆ ತೀವ್ರಗೊಳಿಸಿದರು. ಈ ನಡುವೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಆಗ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಬಿಎಂಎಸ್ ಟ್ರಸ್ಟ್ ಬಗ್ಗೆ ಎತ್ತಿರುವ ಪ್ರಶ್ನೆಗಳಿಗೆ ಸರ್ಕಾರ ಉತ್ತರ ಕೊಟ್ಟಿಲ್ಲ. ಗಂಭೀರವಾದ ವಿಚಾರವನ್ನು ಪ್ರಸ್ತಾಪ ಮಾಡಿದ್ದೆವು. ಸರ್ಕಾರ ಟ್ರಸ್ಟ್ ವಿಚಾರದಲ್ಲಿ ಸಾಕಷ್ಟು ಲೋಪ ಎಸಗಿದೆ. ತನ್ನ ಜವಾಬ್ದಾರಿ ಸರಿಯಾಗಿ ನಿರ್ವಹಿಸಲಿಲ್ಲ ಎಂದು ಆಕ್ರೋಶ ಹೊರ ಹಾಕಿದರು. ನಾವು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸಿ, ಎತ್ತಿರುವ ಪ್ರಶ್ನೆಗಳಿಗೆ ಉನ್ನತ ಶಿಕ್ಷಣ ಸಚಿವರಿಂದ ಸಮರ್ಪಕ ಉತ್ತರ ಬಂದಿಲ್ಲ. ಈ ಟ್ರಸ್ಟ್ ಅಕ್ರಮದ ಬಗ್ಗೆ ಸಮರ್ಪಕ ಕ್ರಮ ಕೈಗೊಳ್ಳುವಲ್ಲಿ ಸರ್ಕಾರ ವಿಫಲವಾಗಿದೆ. ವಿಷಯವನ್ನು ಲಘುವಾಗಿ ಪರಿಗಣಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ನಡುವೆ ಮಧ್ಯ ಪ್ರವೇಶಿಸಿದ ಜೆಡಿಎಸ್​ನ ಎಚ್.ಡಿ. ರೇವಣ್ಣ, ಶಿಕ್ಷಣ ಇಲಾಖೆಯಲ್ಲಿ ಲೂಟಿಯಾಗಿರುವುದಕ್ಕೂ ದಾಖಲೆ ಒದಗಿಸುತ್ತೇನೆ. ತನಿಖೆ ಕೈಗೊಳ್ಳುತ್ತಾರಾ? ದಾಖಲೆ ಒದಗಿಸದೇ ಇದ್ದರೆ ನಾನು ಈ ಸ್ಥಾನ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.

ಕಲಾಪ ಮುಂದೂಡಿಕೆ: ಬಿಎಂಎಸ್ ಟ್ರಸ್ಟ್​ನಲ್ಲಿ ನಡೆದಿರುವ ಅವ್ಯವಹಾರ ಪ್ರಕರಣವನ್ನು ತನಿಖೆಗೆ ಒಪ್ಪಿಸಬೇಕು ಎಂದು ಜೆಡಿಎಸ್ ಪಟ್ಟು ಹಿಡಿದು ದಾಂಧಲೆ ನಡೆಸಿದ ಹಿನ್ನೆಲೆಯಲ್ಲಿ ವಿಧಾನಸಭೆಯಲ್ಲಿ ಯಾವುದೇ ಕಾರ್ಯಕಲಾಪ ನಡೆಯದೆ ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು. ಒಂದು ಕಡೆ ಜೆಡಿಎಸ್ ಕಲಾಪಕ್ಕೆ ಅಡ್ಡಿಪಡಿಸಿದರೆ, ಮತ್ತೊಂದು ಕಡೆ ಪ್ರತಿಪಕ್ಷ ಕಾಂಗ್ರೆಸ್ 40 ಪಸೆಂಟ್ ಚರ್ಚೆಗೆ ಅವಕಾಶ ನೀಡಬೇಕು. ಸೋಮವಾರ ಒಂದು ದಿನ ಕಲಾಪ ನಡೆಸಿ ಎಂದು ಆಗ್ರಹಿಸಿತು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಕೂಗಾಟ, ಆರೋಪ-ಪ್ರತ್ಯಾರೋಪ ಸಂದರ್ಭದಲ್ಲೇ ವಿಧೇಯಕ ವೊಂದನ್ನು ಮಂಡಿಸಲಾಯಿತು. ಬಳಿಕ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸದನವನ್ನು ಅನಿರ್ದಿಷ್ಟಾವಧಿ ಮುಂದೂಡಿದರು.

ಮೋದಿಗೆ ಪತ್ರ, ಲೋಕಾಯುಕ್ತಕ್ಕೆ ದೂರು ಚಿಂತನೆ

ಬಿಎಂಎಸ್ ಟ್ರಸ್ಟ್ ಪ್ರಕರಣ ಕುರಿತು ರಾಜ್ಯ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳದಿದ್ದರೆ ಕೆಲವೇ ದಿನಗಳಲ್ಲಿ ಪ್ರಧಾನಿ ಮೋದಿ ಅವರಿಗೆ ದಾಖಲೆ ಸಮೇತ ಪತ್ರ ಬರೆಯುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಮೋದಿ ಅವರು ಭ್ರಷ್ಟಾಚಾರ ನಿಮೂಲನೆ ಮಾಡುತ್ತೇನೆಂದು ಹೇಳುತ್ತಲೇ ಬಂದಿದ್ದಾರೆ. ಅವರದೇ ಪಕ್ಷದ ಸಚಿವರೊಬ್ಬರು ನಡೆಸಿರುವ ಅಕ್ರಮದ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೋ ನೋಡೋಣ. ಲೋಕಾಯುಕ್ತ ಸಂಸ್ಥೆಗೂ ದೂರು ನೀಡುವ ಕುರಿತು ಕಾನೂನು ತಜ್ಞರ ಸಲಹೆ ಪಡೆದು ತೀರ್ಮಾನ ಮಾಡುತ್ತೇನೆ. ಇದು ಕೇವಲ 40 ಪರ್ಸೆಂಟ್ ಅಲ್ಲ. ನಾನು ಪ್ರಸ್ತಾಪಿಸಿರುವುದು 100 ಪರ್ಸೆಂಟ್ ಕಮಿಷನ್ ಪ್ರಕರಣ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಪೀಕರ್ ಪೀಠದ ಮೆಟ್ಟಿಲು ಹತ್ತಿದ ಶಾಸಕ!: ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಜೆಡಿಎಸ್​ನ ಡಾ.ಅನ್ನದಾನಿ ವಿಧಾನಸಭಾಧ್ಯಕ್ಷರ ಪೀಠದ ಮೆಟ್ಟಿಲು ಮೇಲೆ ಹತ್ತಿನಿಂತು ಅಬ್ಬರದ ಘೋಷಣೆ ಕೂಗಿದ ಪ್ರಸಂಗ ನಡೆಯಿತು. ಇದರಿಂದ ರೇಗಿದ ಸ್ಪೀಕ್ ವಿಶ್ವೇಶ್ವರ ಹೆಗಡೆ ಕಾಗೇರಿ, ನೀವು ಲೆಕ್ಚರ್ ಆದವರು ಇದೇನಾ ನೀವು ಕಲಿತಿರುವುದು ಎಂದು ಗದರಿದರು. ಆಗ ಸಾ.ರಾ.ಮಹೇಶ್ ಅನ್ನದಾನಿಯನ್ನು ಕೆಳಕ್ಕೆ ಎಳೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net