

ಶಿವಮೊಗ್ಗ: ಭಾರತೀಯ ಮಜ್ದೂರ್ ಸಂಘ(ಬಿಎಂಎಸ್)ದ ಉಪಾಧ್ಯಕ್ಷ, ಬಿ.ಬಿ.ರಸ್ತೆ ನಿವಾಸಿ ಡಿ.ಕೆ.ಸದಾಶಿವ (83) ಭಾನುವಾರ ಬೆಳಗ್ಗೆ ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾದರು.
ಅವಿವಾಹಿತರಾಗಿದ್ದ ಅವರು ಸಹೋದರ ವಿಶ್ವನಾಥ ಅವರ ಮನೆಯಲ್ಲಿ ವಾಸವಾಗಿದ್ದರು. ರೋಟರಿ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು. ಮಾಜಿ ಡಿಸಿಎಂ ಕೆೆ.ಎಸ್.ಈಶ್ವರಪ್ಪ, ಶಾಸಕ ಎಸ್.ಎನ್.ಚನ್ನಬಸಪ್ಪ ಮತ್ತಿತರರು ಅಂತಿಮ ದರ್ಶನ ಪಡೆದರು.
ಶಿವಮೊಗ್ಗದ ತುಂಗಭದ್ರಾ ಸಕ್ಕರೆ ಕಾರ್ಖಾನೆಯಲ್ಲಿ ನೌಕರನಾಗಿ ಸೇರುವ ಮೂಲಕ ಕಾರ್ಮಿಕ ಜೀವನ ಆರಂಭಿಸಿದ್ದರು. ಆನಂದಪಲ್ಲಿ ವೆಂಕಟರಾವ್ ಅನಾರೋಗ್ಯ ಹಿನ್ನೆಲೆಯಲ್ಲಿ ಬಿಎಂಎಸ್ ಪೂರ್ಣಾವಧಿ ಕೆಲಸಕ್ಕೆ ನಿಯೋಜಿತರಾಗಿದರು. ಆಗ ಸಕ್ಕರೆ ಕಾರ್ಖಾನೆ ನೌಕರ ಹುದ್ದೆಗೆ ರಾಜೀನಾಮೆ ನೀಡಿ ರಾಜ್ಯದಲ್ಲಿ ಸುತ್ತಾಡಿ ಬಿಎಂಎಸ್ ಪ್ರಬಲವಾಗಿ ಕಟ್ಟಿ, ಕೊನೆಯವರೆಗೂ ಕಾರ್ಮಿಕ ಪರ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ಬಿಎಂಎಸ್ ಸ್ಥಾಪಕ ದತ್ತೋಪಂತ್ ತೇಗ್ಡಿ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಬಿಎಂಎಸ್ ಬ್ಯಾನರ್ ಅಡಿಯಲ್ಲಿ ಟ್ರೇಡ್ ಯೂನಿಯನ್ ಚಳುವಳಿಯಲ್ಲಿ ಕರ್ನಾಟಕದಲ್ಲಿ ಮಾತ್ರವಲ್ಲದೆ ಭಾರತದ ವಿವಿಧ ಕಡೆಗಳಲ್ಲಿ ಭಾಗವಹಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಸೇರಿ ಹಿರಿಯ ರಾಜಕಾರಣಿಗಳ ಒಡನಾಡಿಯೂ ಆಗಿದ್ದರು.