

ವಿಜಯವಾಣಿ ಸುದ್ದಿಜಾಲ ಬೆಂಗಳೂರು: ಬೆಂಗಳೂರಿನ ಬಿಎಂಎಸ್ ಕಾಲೇಜಿನ ಇಂಜಿನಿಯರಿಂಗ್ ಪದವೀಧರೆ ನಿಧಿ ಜಗದೀಶ್ ಅವರು ಅಮೆರಿಕದ ಪ್ರತಿಷ್ಠಿತ ವಾರ್ಟನ್ ವಿಶ್ವವಿದ್ಯಾಲಯದಲ್ಲಿ 2 ವರ್ಷದ ಎಂಬಿಎ ಪದವಿ ವ್ಯಾಸಂಗಕ್ಕಾಗಿ ಮೆರಿಟ್ ಸ್ಕಾಲರ್‌ಶಿಪ್ ಪಡೆದು ಅಯ್ಕೆಯಾಗಿದ್ದಾರೆ.
2018ರಲ್ಲಿ ಇಂಜಿನಿಯರಿಂಗ್ ಮುಗಿಸಿದ ಬಳಿಕ ಪ್ರಸ್ತುತ ಬೆಂಗಳೂರಿನ ಮೆಕಿತ್ಸೆ ಆ್ಯಂಡ್ ಕಂಪನಿಯಲ್ಲಿ ಪ್ರಾಡಕ್ಟ್ ಓನರ್ ಆಗಿ ಕಾರ್ಯನಿರ್ವಹಿಸುತ್ತಿರುವ ನಿಧಿ, ಇದೀಗ 2 ವರ್ಷಗಳ ಎಂಬಿಎ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಸಾಮಾನ್ಯವಾಗಿ ವಾರ್ಟನ್, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿವಿಗಳಲ್ಲಿ ಪ್ರವೇಶ ಪಡೆಯುವ ಬಹುತೇಕ ವಿದ್ಯಾರ್ಥಿಗಳು ದೇಶದ ಪರ್ವ ಮತ್ತು ಎನ್‌ಐಟಿ ಪದವೀಧರರೇ ಆಗಿರುತ್ತಾರೆ. ಸಾಮಾನ್ಯ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪದವಿ ಪೂರ್ಣಗೊಳಿಸಿರುವ ಈ ಅವಕಾಶ ಪಡೆಯುವುದು ವಿರಳ. ಪ್ರತಿ ವರ್ಷ ಈ ವಿಶ್ವವಿದ್ಯಾಲಯದಲ್ಲಿ ವಿಶ್ವದಾದ್ಯಂತ 800 ಮಂದಿಗೆ ಅವಕಾಶ ಕಲ್ಪಿಸಲಿದೆ. ಭಾರತದಿಂದ ಗರಿಷ್ಠ 45 ರಿಂದ 50 ಮಂದಿ ಅವಕಾಶ ಪಡೆಯುತ್ತಾರೆ.
ಆದ್ರೆ, ಬಿಎಂಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪಡೆದು ಇದೀಗ ವಾರ್ಟಿನ್ ವಿವಿಯಲ್ಲಿ ಪ್ರವೇಶ ಪಡೆಯುತ್ತಿರುವುದು ಕರ್ನಾಟಕದ ಮಟ್ಟಿಗೆ ಖುಷಿಯ ವಿಚಾರವಾಗಿದೆ. 1999 ರಲ್ಲಿ ಬಿಎಂಎಸ್ ಕಾಲೇಜಿನ ವಿದ್ಯಾರ್ಥಿನಿಯೊಬ್ಬರು ವಾರ್ಟನ್‌ನಲ್ಲಿ ಪ್ರವೇಶ ಪಡೆದಿದ್ದರು. 24 ವರ್ಷಗಳ ಬಳಿಕ ಮತ್ತೊಬ್ಬರು ಪ್ರವೇಶ ಪಡೆಯುತ್ತಿರುವುದು ಗಮನಾರ್ಹ.
ಪ್ರವೇಶ ಪ್ರಕ್ರಿಯೆ ಹೇಗೆ?: ಇಂಜಿನಿಯರಿಂಗ್ ಬಳಿಕ ಕನಿಷ್ಠ 2 ವರ್ಷ ಕಂಪನಿಯೊಂದರಲ್ಲಿ ಕೆಲಸ ಮಾಡಿರುವಂತಹ ವರು ಮಾತ್ರ ಎಂಬಿಎ ಪದವಿ ಪ್ರವೇಶ ಪಡೆಯಲು ಅರ್ಹತೆ ಹೊಂದಿರುತ್ತಾರೆ. ಪ್ರವೇಶ ಪರೀಕ್ಷೆ ಜತೆಗೆ ಅಭ್ಯರ್ಥಿಗಳ ಚಿಂತನೆಗಳು ಕೂಡ ಬಹಳ ಮುಖ್ಯವಾಗಿ ಪರಿಗಣಿಸಲಾಗುತ್ತದೆ. ಸಮಾಜಕ್ಕಾಗಿ ನೀಡುವ ಕೊಡುಗೆಗಳನ್ನು ಕುರಿತ ವಿಸ್ತ್ರತ ಪ್ರಬಂಧಗಳು, ವಿವಿಧ ತಂಡಗಳೊಂದಿಗೆ ನಾಯಕತ್ವದ ಅನುಭವ, ಸಾಮಾಜಿಕ ಸೇವೆ, ಇಲ್ಲಿಯವರೆಗೂ ಮಾಡಿರುವ ಕೆಲಸಗಳಲ್ಲಿ ಪರಿಣಾಮ ಬೀರಿರುವ ಕೆಲಸಗಳು, ಅಲ್ಪಾವಧಿ ಮತ್ತು ದೀರ್ಘಾವಧಿ ಕೆಲಸಗಳನ್ನು ಮಾಡಲು ಹೊಂದಿರುವ ಗುರಿ, ಪತ್ಯೇತರ ಸಾಧನೆಗಳು, ಶೈಕ್ಷಣಿಕ ಉತ್ಕೃಷ್ಟತೆ, ವೃತ್ತಿಪರತೆಯಲ್ಲಿನ ಬೆಳವಣಿಗೆಯನ್ನು ಬ್ಯಾಂಕ್ ನೀಡಲು ಪರಿಗಣಿಸಲಾಗುತ್ತದೆ.
ಮಾರ್ಗದರ್ಶನ ನೀಡಿ ಜಾಗೃತಿ ಮೂಡಿಸಬೇಕು: ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪದವಿ ಮಾಡಿದ್ದು, ಉತ್ತಮ ಪ್ಲೇಸ್ ಮೆಂಟ್ ಹೊಂದಿದ್ದರೂ ವಾರ್ಟನ್, ಹಾರ್ವರ್ಡ್ ಮತ್ತು ಸ್ಟ್ಯಾನ್‌ಫೋರ್ಡ್ ವಿವಿಗಳಲ್ಲಿ ಪ್ರವೇಶ ಪಡೆಯುವುದು ಸುಲಭದ ವಿಚಾರವಲ್ಲ. ಇಲ್ಲಿ 2 ವಿಚಾರಗಳನ್ನು ಪರಿಗಣಿಸಬೇಕು, ಐಐಟಿ ಮತ್ತು ಎನ್‌ಐಟಿ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರವೇಶ ಪಡೆಯುತ್ತಾರೆ. ಎರಡನೆಯದಾಗಿ, ನಮ್ಮಂತಹ ವಿದ್ಯಾರ್ಥಿಗಳಿಗೆ ಅಲ್ಲಿ ಸೀಟು ಸಿಗುತ್ತದೆಯೇ ಎಂಬ ಕೀಳರಿಮೆ ಇರುತ್ತದೆ. ಈ ವಿಚಾರದಲ್ಲಿ ರಾಜ್ಯದ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮತ್ತು ಜಾಗೃತಿ ಮೂಡಿಸುವ ಅಗತ್ಯವಿದೆ. ಪ್ರವೇಶ ಪರೀಕ್ಷೆಗಳ ಬಗ್ಗೆ ನಿರಂತರವಾಗಿ ಸಿದ್ಧತೆ. ನಡೆಸಿದಾಗ ಪ್ರವೇಶ ಸಾಧ್ಯವಾಗಲಿದೆ ಎನ್ನುತ್ತಾರೆ ನಿಧಿ ಜಗದೀಶ್. ನಿಧಿ ಅವರು ಬೆಂಗಳೂರಿನ ಶಾಸಕರ ಭವನದಲ್ಲಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾ. ವೀಣಾ ಕೃಷ್ಣಮೂರ್ತಿ ಅವರ ಪುತ್ರಿ.
ಸುಂದರ್ ಪಿಚೈ, ಅಂಬಾನಿ ಕಲಿತಿದ್ದು ಇಲ್ಲೇ: ವಾರ್ಟನ್ ವಿವಿಯಲ್ಲಿ ವ್ಯಾಸಂಗ ಮಾಡಿರುವ ಅನೇಕರು ಜಾಗತಿಕವಾಗಿ ಪ್ರಖ್ಯಾತಿ ಪಡೆದಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಖ್ಯಾತ ಉದ್ಯಮಿಗಳಾದ ಎಲನ್ ಮಸ್ಕ್, ಅನಿಲ್ ಅಂಬಾನಿ, ವಾರನ್ ಬಫೆಟ್, ಆದಿತ್ಯ ಮಿತ್ತಲ್ ಮತ್ತು ಸುಂದರ್ ಪಿಚೈ ಸೇರಿ ಘಟಾನುಘಟಿ ಖ್ಯಾತನಾಮರು ಇಲ್ಲಿ ವ್ಯಾಸಂಗ ಮಾಡಿದ್ದಾರೆ.