ಬಿಎಂಆರ್‌ಸಿಎಲ್‌ಗೂ ಬೇಕು ಪೂರ್ಣಾವಧಿ ಎಂಡಿ

metro
Published on

ಆರ್​​.ತುಳಸಿಕುಮಾರ್​​

ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಂಚಾರ ಸಿಕ್ಕು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಲ್ಲಿ ಪ್ರಮುಖ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಎಂದೇ ಪರಿಗಣಿಸಲ್ಪಟ್ಟಿರುವ ನಮ್ಮ ಮೆಟ್ರೋಗೆ (ಬಿಎಂಆರ್‌ಸಿಎಲ್) ಪೂರ್ಣಾವಧಿ ವ್ಯವಸ್ಥಾಪಕ ನಿರ್ದೇಶಕರ ಅಗತ್ಯವಿದೆ ಎಂದು ಸಾರ್ವಜನಿಕರು ದನಿಯೇರಿಸತೊಡಗಿದ್ದಾರೆ.

ಇತ್ತೀಚಿಗೆ ಬಿಎಂಆರ್‌ಸಿಎಲ್ ಎಂಡಿ ಆಗಿದ್ದ ಎಂ.ಮಹೇಶ್ವರ್ ರಾವ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ವರ್ಗಾಯಿಸಿದ ಬಳಿಕ, ನಮ್ಮ ಮೆಟ್ರೋ ಎಂಡಿ ಹುದ್ದೆಯನ್ನು ಪ್ರಭಾರವಾಗಿ ನಿರ್ವಹಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದಾಗಿ ಮಹೇಶ್ವರ್ ರಾವ್ ಅವರು ಎರಡೂ ಸಂಸ್ಥೆಗಳನ್ನು ಮುನ್ನಡೆಸುವಲ್ಲಿ ದ್ವಿಪಾತ್ರ ವಹಿಸುವಂತಾಗಿದೆ. ಇದರಿಂದಾಗಿ ಎರಡೂ ಕಡೆಯ ಆಡಳಿತದ ಮೇಲೆ ಪೂರ್ಣ ಪ್ರಮಾಣದಲ್ಲಿ ನಿಗಾ ಇಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಸಮಯದ ಅಭಾವದಿಂದಾಗಿ ಅವರಿಗೂ ಎರಡೂ ಸಂಸ್ಥೆಯ ಆಡಳಿತದ ಮೇಲೆ ಹಿಡಿತ ಸಾಧ್ಯವಾಗದೆ ಯೋಜನೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಳೆದ ಮೇ 1ರಂದು ರಾಜ್ಯ ಸರ್ಕಾರ ಮಹೇಶ್ವರ್ ರಾವ್ ಅವರನ್ನು ಬಿಬಿಎಂಪಿ ಮುಖ್ಯ ಆಯುಕ್ತರ ಹುದ್ದೆಗೆ ಪ್ರಭಾರವಾಗಿ ವರ್ಗಾಯಿಸಿ, ಬಿಎಂಆರ್‌ಸಿಎಲ್ ಎಂಡಿ ಆಗಿಯೇ ಮುಂದುವರಿಯಸಲು ಅವಕಾಶ ಮಾಡಿಕೊಟ್ಟಿತು. ಬಿಬಿಎಂಪಿಯಂತಹ ಪ್ರಮುಖ ಸಂಸ್ಥೆಗೆ ಪ್ರಭಾರ ಮುಖ್ಯ ಆಯುಕ್ತರನ್ನು ನೇಮಿಸಿದ್ದಕ್ಕೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೇ 5ರಂದು ಕಾಯಂ ಹುದ್ದೆ ವಹಿಸಿತು. ಜತೆಗೆ ಬಿಎಂಆರ್‌ಸಿಎಲ್ ಎಂಡಿ ಹೊಣೆಯನ್ನು ಹೆಚ್ಚುವರಿಯಾಗಿ ವಹಿಸಿತು. ಆ ಬಳಿಕ ಮಹೇಶ್ವರ್ ರಾವ್ ವಿಧಾನಸೌಧ-ವಿಕಾಸಸೌಧದಲ್ಲಿ ಹಲವು ಸಭೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮೇ 6ರಂದು ಮೆಜೆಸ್ಟಿಕ್ ಪ್ರದೇಶಕ್ಕೆ ಮೊದಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೇ 7ರಂದು ಡಿಸಿಎಂ ಜತೆ ದಿಲ್ಲಿಗೆ ತೆರಳಿ ಕೇಂದ್ರದ ಸಚಿವರ ಸಭೆಯಲ್ಲಿ ಪಾಲ್ಗೊಂಡರು. ಈ ಮಧ್ಯೆ ಪಾಲಿಕೆಯ ಎಲ್ಲ ವಿಭಾಗಗಳ ಮುಖ್ಯಸ್ಥರೊಂದಿಗೆ ಮೊದಲ ಸಭೆ ಇನ್ನೂ ನಡೆದಿಲ್ಲ. ಗುರುವಾರ (ಮೇ 8) ಸಭೆ ನಿಗದಿಯಾಗಿದ್ದರೂ, ಈ ಅವಧಿಯಲ್ಲಿ ಬಿಎಂಆರ್‌ಸಿಎಲ್ ಕಚೇರಿಗೆ ತೆರಳಿ ಅಲ್ಲಿನ ಆಡಳಿತವನ್ನು ನಿಭಾಯಿಸಲು ಸಾಧ್ಯವಾಗಿಲ್ಲ.

ಮೆಟ್ರೋ ಯೋಜನೆಗಳ ಮೇಲೆ ಪರಿಣಾಮ:

ಮಹಾನಗರದ ಸಂಚಾರ ಸಮಸ್ಯೆಗೆ ಮೆಟ್ರೋ ಸಹಕಾರಿಯಾಗಿದೆ. ನಿತ್ಯ 9 ಲಕ್ಷ ಮಂದಿ ಪ್ರಯಾಣಿಸುತ್ತಿದ್ದು, 2030ರ ವೇಳೆ ದುಪ್ಪಟ್ಟುಗೊಳಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಪೂರಕವಾಗಿ ವಿವಿಧೆಡೆ ಕಾಮಗಾರಿಗಳು ನಡೆಯುತ್ತಿವೆ. ಜತೆಗೆ ಹೊಸ ಮಾರ್ಗಗಳಲ್ಲಿ ರೈಲು ಓಡಿಸಲು ಡಿಪಿಆರ್ ಸಿದ್ಧಪಡಿಸುವುದು, ಹಣಕಾಸು ಹೊಂದಿಸುವುದು, ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸುವ ಕೆಲಸವೂ ಪ್ರಗತಿಯಲ್ಲಿದೆ. ಆದರೆ, ಮೇಲ್ವಿಚಾರಣೆ ಇಲ್ಲದಿದ್ದಲ್ಲಿ ಆರಂಭಿಕ ಹಂತದಲ್ಲೇ ನಿಧಾನಗೊಂಡು ಕಾರ್ಯಯೋಜನೆ ಟೇಕ್‌ಆ್ ಆಗದೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಬಹುತೇಕ ತಂತ್ರಜ್ಞಾನ ಹಾಗೂ ತಾಂತ್ರಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುವ ನಮ್ಮ ಮೆಟ್ರೋದ ಎಲ್ಲ ಕಾರ್ಯವನ್ನು ನುರಿತ ಅಧಿಕಾರಿ ಮೇಲ್ಚಿಚಾರಣೆ ಕೈಗೊಳ್ಳದಿದ್ದಲ್ಲಿ ಸಕಾಲದಲ್ಲಿ ಯೋಜನೆ ಪೂರ್ಣಗೊಳಿಸಲಾಗದು ಎಂಬುದು ಈಗಾಗಲೇ ಸರ್ಕಾರದ ಅರಿವಿಗೆ ಬಂದಿದೆ. ಕೆಂಪೇಗೌಡ ವಿಮಾನನಿಲ್ದಾಣಕ್ಕೆ ನೇರ ಮೆಟ್ರೋ ಸಂಪರ್ಕ ಸಹಿತ ಹೊಸ ಯೋಜನೆಗಳು ಗಡುವು ಮೀರುತ್ತಿವೆ. ಇದನ್ನು ಮನಗಂಡು ಎಂಡಿ ಹುದ್ದೆಗೆ ಕಾಯಂ ಅಧಿಕಾರಿಯನ್ನು ನಿಯೋಜಿಸದಿರುವ ಸರ್ಕಾರದ ನಡೆ ಅಚ್ಚರಿ ಮೂಡಿಸಿದೆ.

ಕೇಂದ್ರದ ನಿಯಮ ಜಾರಿಗೆ ಹಿಂದೇಟು?:

ನಮ್ಮ ಮೆಟ್ರೋಗೆ ಕಾಯಂ ಎಂಡಿಯನ್ನೇ ನೇಮಿಸಬೇಕೆಂಬ ನಿಯಮ ಇದೆ. ಇದನ್ನು ಕೇಂದ್ರ ವಸತಿ ಹಾಗೂ ನಗರಾಭಿವೃದ್ಧಿ ವ್ಯವಹಾರಗಳ ಸಚಿವಾಲಯ ಹಲವು ಬಾರಿ ಸ್ಪಷ್ಟಪಡಿಸಿದೆ. ಆದರೆ, ರಾಜ್ಯ ಸರ್ಕಾರ ಮಾತ್ರ ಅಧಿಕಾರಿಗಳನ್ನು ವರ್ಗಾಯಿಸುವ ವೇಳೆ ಪ್ರಭಾರ ಹೊಣೆ ನೀಡುತ್ತಿದೆ. ಕಾಯಂ ಅಧಿಕಾರಿ ನೇಮಕ ಸಾಧ್ಯವಾಗದಿದ್ದಲ್ಲಿ ಆ ಬಗ್ಗೆ ಕೇಂದ್ರದ ಗಮನಕ್ಕೆ ತರಬೇಕಿದೆ. ಪ್ರಸ್ತುತ ಮಹೇಶ್ವರ್ ರಾವ್ ಅವರಿಗೆ ಎಂಡಿ ಹುದ್ದೆಯನ್ನು ಪ್ರಭಾರ ವಹಿಸಿರುವುದಕ್ಕೆ ಕೇಂದ್ರದ ಸಹಮತ ಪಡೆಯಲಾಗಿದೆಯೆ ಅಥವಾ ಇಲ್ಲವೇ ಎಂಬುದು ದೃಢಪಟ್ಟಿಲ್ಲ.

ಹಿರಿಯ ಅಧಿಕಾರಿಗಳ ಅಭಾವ?:

ಸದ್ಯ ರಾಜ್ಯದಲ್ಲಿ ಹಿರಿಯ ಐಎಎಸ್ ಅಧಿಕಾರಿಗಳ ಕೊರತೆ ಎದುರಾಗಿದೆ. ಹೊಸ ಅಧಿಕಾರಿಗಳು ಬಂದಿದ್ದರೂ, ಅವರ ಸೇವಾವಧಿ ಕಡಿಮೆ ಇದೆ. ಹೀಗಾಗಿ ಕೆಲವೊಂದು ಹುದ್ದೆಗೆ ಹಿರಿಯ ಅಧಿಕಾರಿಗಳ್ನು ನೇಮಿಸಲು ಸಾಧ್ಯವಾಗುತ್ತಿಲ್ಲ ಎಂಬ ಮಾತು ವಿಧಾನಸೌಧದ ಮೊಗಸಾಲೆಯಲ್ಲಿ ಕೇಳಿಬಂದಿದೆ. ಆದರೂ, ಬೆಂಗಳೂರಿನ ಸಂಚಾರ ಸೇರಿ ಉತ್ತಮ ಆಡಳಿತ ಅನುಭವ ಇರುವ ಅಧಿಕಾರಿಯನ್ನು ನೇಮಿಸುವುದು ಸರ್ಕಾರದ ಕರ್ತವ್ಯವಾಗಿದೆ. ಈ ಮಧ್ಯೆ ಹಿರಿಯ ಐಎಎಸ್ ಅಧಿಕಾರಿ ಪಿ.ಮಣಿವಣ್ಣನ್ ಅವರನ್ನು ಬಿಎಂಆರ್‌ಸಿಎಲ್ ಎಂಡಿ ಹುದ್ದೆಗೆ ಪರಿಗಣಿಸಬಹುದೆಂಬ ಸಲಹೆಯನ್ನು ಸರ್ಕಾರ ಇನ್ನೂ ಒಪ್ಪಿಲ್ಲ ಎನ್ನಲಾಗಿದೆ.

ಸಂಸದರ ಸಲಹೆಗಿಲ್ಲ ಮಣೆ?:

ಬಿಎಂಆರ್‌ಸಿಎಲ್‌ಗೆ ಪೂರ್ಣಾವಧಿ ಎಂಡಿ ನೇಮಿಸುವಂತೆ ಬೆಂಗಳೂರಿನ ಸಂಸದರಾದ ಪಿ.ಸಿ.ಮೋಹನ್ ಹಾಗೂ ತೇಜಸ್ವಿ ಸೂರ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದೆ. ಈ ಇಬ್ಬರೂ ಪ್ರತಿನಿಧಿಸುವ ಕ್ಷೇತ್ರದಲ್ಲೇ ಮೆಟ್ರೋ ಕಾಮಗಾರಿ ನಡೆಯುತ್ತಿರುವ ಕಾರಣ ಆಗಾಗ್ಗೆ ದನಿಯೇರಿಸುತ್ತಿದ್ದಾರೆ. ಈ ಬಗ್ಗೆ ಕೇಂದ್ರದ ಗಮನಕ್ಕೆ ತಂದು ಎಂಡಿ ಹುದ್ದೆಗೆ ಕಾರ್ಯ ಅಧಿಕಾರಿ ನಿಯೋಜಿಸುವಂತೆ ರಾಜ್ಯಕ್ಕೆ ಸೂಚಿಸಬೇಕೆಂದು ಒತ್ತಾಯಿಸಿದ್ದರೂ, ಕರ್ನಾಟಕ ಸರ್ಕಾರ ಮಾತ್ರ ವಿವಿಧ ಕಾರಣವೊಡ್ಡಿ ನೇಮಕಕ್ಕೆ ಹಿಂದೇಟು ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ಬೆಂಗಳೂರು ವೇಗವಾಗಿ ಬೆಳವಣಿಗೆ ಕಾಣುತ್ತಿದ್ದು, ಇದಕ್ಕೆ ತಕ್ಕಂತೆ ಬಿಬಿಎಂಪಿ ಹಾಗೂ ಬಿಎಂಆರ್‌ಸಿಎಲ್ ಸಂಸ್ಥೆಗಳಿಗೆ ಪೂರ್ಣಾವಧಿ ಅಧಿಕಾರಿ ನೇಮಕ ಅತ್ಯಗತ್ಯ. ಸದ್ಯ ಮೆಟ್ರೋಗೆ ಪ್ರಭಾರ ವಹಿಸಿರುವುದರಿಂದ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು. ಈ ಸಂಬಂಧ ಕೇಂದ್ರ ಸಚಿವರನ್ನು ಭೇಟಿ ಮಾಡಿ ವಿಷಯ ಚರ್ಚಿಸುವೆ. ಜತೆಗ ಸಿಎಂಗೂ ಪತ್ರ ಬರೆದು ಮನವಿ ಮಾಡಿಕೊಳ್ಳುವೆ.

- ಪಿ.ಸಿ.ಮೋಹನ್, ಬೆಂಗಳೂರು ಸೆಂಟ್ರಲ್ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net