ಆಗ ಫೇಲ್ ಈಗ ಪಾಸ್; ಪಿಯು ಮರು ಮೌಲ್ಯಮಾಪನ ಅವಾಂತರ

evaluation
Published on

ಬೆಂಗಳೂರು: ದ್ವಿತೀಯ ಪಿಯು ಮರುಮೌಲ್ಯಮಾಪನದಲ್ಲಿ ಎರಡು ಸಾವಿರ ವಿದ್ಯಾರ್ಥಿಗಳ ಅಂಕಗಳು ವ್ಯತ್ಯಾಸಗೊಂಡಿದ್ದು, ಫೇಲ್ ಆಗಿದ್ದ ಸಾಕಷ್ಟು ವಿದ್ಯಾರ್ಥಿಗಳು ಈಗ ಪಾಸ್ ಆಗಿದ್ದಾರೆ. ದ್ವಿತೀಯ ಪಿಯು ಮರುಮೌಲ್ಯಮಾಪನದ ಫಲಿತಾಂಶವನ್ನು ಇಲಾಖೆಯು ಶುಕ್ರವಾರ ಪ್ರಕಟಿಸಿದೆ.

ಈ ವರ್ಷ ಸ್ಕಾ್ನ್ ಪ್ರತಿ ಪಡೆಯಲು 71 ಸಾವಿರ ಅರ್ಜಿ ಸಲ್ಲಿಸಿಕೆಯಾಗಿದ್ದವು. ಪ್ರತಿ ಪಡೆದ ನಂತರ 12,041 ವಿದ್ಯಾರ್ಥಿಗಳು ಮರುಮೌಲ್ಯಮಾಪನ ಮತ್ತು ಮರು ಎಣಿಕೆಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 2,144 ವಿದ್ಯಾರ್ಥಿಗಳ ಅಂಕಗಳು ಬದಲಾವಣೆಯಾಗಿದ್ದು, ಈ ಮೊದಲು ಪಡೆದಿದ್ದ ಅಂಕಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ. ಪಿಯು ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಈ ಬಾರಿ ಆಂಗ್ಲಭಾಷೆಯಲ್ಲಿ ಅತಿ ಹೆಚ್ಚು ಅಂದರೆ 38 ಅಂಕಗಳನ್ನು ನೀಡಲಾಗಿದೆ. ದ್ವಿತೀಯ ಸ್ಥಾನದಲ್ಲಿ 35 ಅಂಕಗಳನ್ನು ಕನ್ನಡಕ್ಕೆ ನೀಡಲಾಗಿದೆ. 542 ಉತ್ತರ ಪತ್ರಿಕೆಗಳಲ್ಲಿ ಅಂಕಗಳನ್ನು ಒಟ್ಟುಗೂಡಿಸುವಾಗ ತಪ್ಪುಗಳು ಸಂಭವಿಸಿದ್ದವು ಮತ್ತು ಮೌಲ್ಯಮಾಪನವನ್ನೇ ಮಾಡಿರಲಿಲ್ಲ ಎಂಬ ಆತಂಕಕಾರಿ ವಿಷಯ ತಿಳಿದುಬಂದಿದೆ.

ನೋಟಿಸ್ ಇಲ್ಲ!: ಪ್ರತಿ ವರ್ಷ ಅಂಕಗಳು ಬದಲಾವಣೆಯಾದಾಗ ಮೊದಲಿಗೆ ಆ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡಿದ ಮೌಲ್ಯಮಾಪಕರಿಗೆ ನೋಟಿಸ್ ನೀಡಲಾಗುತ್ತದೆ. ಆನಂತರ ಅಂಕಗಳ ಆಧಾರದ ಮೇಲೆ ದಂಡ ವಿಧಿಸಲಾಗುತ್ತದೆ. ಆದರೆ, ಈ ವರ್ಷ ಕರೊನಾದಿಂದ ಮೌಲ್ಯಮಾಪನ ಕಾರ್ಯಕ್ಕೆ ಮೌಲ್ಯಮಾಪಕರು ಹಾಜರಾಗಿದ್ದೇ ದೊಡ್ಡ ವಿಷಯವಾಗಿರುವುದರಿಂದ ಅವರ ಕರ್ತವ್ಯಕ್ಕೆ ಬೆಲೆ ನೀಡಿ ನೋಟಿಸ್ ನೀಡುವುದು ಮತ್ತು ದಂಡ ಶುಲ್ಕ ವಿಧಿಸುವುದನ್ನು ಕೈಬಿಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಆಲೋಚಿಸಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net