

ಶ್ರೀ ವಸಿಷ್ಠರ ಯುದ್ಧವರ್ಣನೆಯನ್ನು ಮತ್ತು ಯುದ್ಧಾನಂತರದ ಸ್ಥಿತಿಯ ವರ್ಣನೆಯನ್ನು ಶ್ರೀರಾಮನು ಆಲಿಸುತ್ತಿದ್ದಾನೆ. ಅಷ್ಟೇ ಅಲ್ಲ, ದಶರಥನೇ ಮೊದಲಾದ ರಾಜರು ಕೇಳುತ್ತಿದ್ದಾರೆ. ವಿಶೇಷವಾಗಿ ಗಗನದಿಂದಿಳಿದುಬಂದ ನೂರಾರು ಸಿದ್ಧ ಮಹರ್ಷಿಗಳು ಕುಳಿತು ಕೇಳುತ್ತಿದ್ದಾರೆ. ಶ್ರೀ ವಸಿಷ್ಠರು ಎಲ್ಲ ಸಿದ್ಧ ಮಹರ್ಷಿಗಳಿಗೂ ಪೂಜ್ಯರು. ಆದ್ದರಿಂದಲೇ ವಿಶ್ವಾಮಿತ್ರರು ಅವರ ಮುಖಾರವಿಂದದಿಂದಲೇ ಶ್ರೀರಾಮನಿಗೆ ಉಪದೇಶವಾಗ ಲೆಂದು ಸೂಚಿಸಿದರು. ಶ್ರೀ ವಸಿಷ್ಠರು ತನಗೆ ತಂದೆಯಾದ ಬ್ರಹ್ಮದೇವನಿಂದ ಉಪದೇಶಿಸಲ್ಪಟ್ಟ ಯೋಗವಾಸಿಷ್ಠವನ್ನು ಉಪದೇಶಿಸುತ್ತಿದ್ದಾರೆ.
‘ಜಗತ್ತು ಪರಮಾರ್ಥ ಸತ್ಯವಲ್ಲ, ಪರಬ್ರಹ್ಮದ ತೋರಿಕೆ’ ಎಂಬುದನ್ನು ಅರ್ಥಮಾಡಿಸಲು ಶ್ರೀವಸಿಷ್ಠರು ಬೇರೆಯಾವ ಗ್ರಂಥದಲ್ಲೂ ಕಾಣಸಿಗದ ತಂತ್ರವನ್ನು ಇಲ್ಲಿ ಬಳಕೆ ಮಾಡಿದ್ದಾರೆ. ಮಂಡಪೋಪಾಖ್ಯಾನವೆಂಬ ಕಥೆಯನ್ನು ಹೇಳುತ್ತಾ, ಅದರಲ್ಲಿ ಲೀಲಾಮಹಾರಾಣಿಯೆಂಬ ಮಹಿಳೆಗೆ ಸಮಾಧಿಸ್ಥಿತಿಯನ್ನು ಉಂಟುಮಾಡುವ ಮೂಲಕ ಅವಳಿಗೆ ‘ಜಗತ್ತು ಪರಮಾರ್ಥ ಸತ್ಯವಲ್ಲ, ಪರಬ್ರಹ್ಮದ ತೋರಿಕೆ’ ಎಂಬುದು ಅನುಭವಕ್ಕೆ ಬರುವಂತೆ ಮಾಡಿದ್ದಾರೆ. ನಾವು ಕೂಡ ಆ ಸಮಾಧಿಸ್ಥಿತಿಗೆ ಏರಿದರೆ ಇದನ್ನು ಅನುಭವದಿಂದ ಕಾಣಲು ಸಾಧ್ಯವಿದೆ. ಆದ್ದರಿಂದ ಜಗತ್ತು ಪರಮಾರ್ಥ ಸತ್ಯವಲ್ಲ, ಪರಬ್ರಹ್ಮದ ತೋರಿಕೆ ಎಂಬುದು ಎತ್ತರದ ಅನುಭವಕ್ಕೆ ಗೋಚರವಾಗುವ ಸತ್ಯ.
ವಿದೂರಥನಿಗೂ ಸಿಂಧುರಾಜನ ಕಡೆಯವರಿಗೂ ನಡೆದ ಭೀಕರ ಯುದ್ಧ ನಿಲ್ಲಿಸಲ್ಪಟ್ಟಿದೆ. ಅಪಾರ ಸಾವುನೋವುಗಳು ಆಗಿವೆ. ರಾತ್ರಿ ಹೊತ್ತಿನಲ್ಲಿ ಇಂತಹ ಯುದ್ಧರಂಗ ಯಾವ ರೀತಿ ಇರಬಹುದು? ಇದರ ಭಯಾನಕ ಸ್ಥಿತಿಯನ್ನು ಶ್ರೀವಸಿಷ್ಠರು ಈಗ ಹೇಳುತ್ತಿದ್ದಾರೆ. ಈ ಎಲ್ಲ ದೃಶ್ಯಗಳನ್ನು ಲೀಲಾಮಹಾರಾಣಿಯು ಶ್ರೀದೆವಿಯೊಂದಿಗೆ ಸೂಕ್ಷ್ಮ ರೂಪದಿಂದ ಇದ್ದು ನೋಡುತ್ತಿದ್ದಾನೆಂಬುದನ್ನು ಮರೆಯಬಾರದು.
‘ಶ್ರೀರಾಮ! ಉರಿಯುತ್ತಿರುವ ಚಿತೆಗಳ ಮಧ್ಯ ಮಧ್ಯದಿಂದ ಆಗಾಗ ಬೆಂಕಿಯ ಬೆಳಕು ಹೊರಬರುತ್ತಿದ್ದು ಆ ಬೆಳಕಿನಲ್ಲಿ ಪಕ್ಕದಲ್ಲಿ ಬಿದ್ದಿರುವ ಶವಸಮೂಹವು ಕಾಣುತ್ತಿರುವುದನ್ನು ಪಿಶಾಚಗಳು ಗಮನಿಸುತ್ತಿದ್ದಾರೆ. ಅಲ್ಲದೇ ಆ ಶವಗಳ ಮೇಲೆ ಲೇಪಿಸಿಕೊಂಡಿರುವ ರಕ್ತಗಳು ಪಿಶಾಚಗಳಿಗೆ ಪ್ರಕಟವಾಗು ತ್ತಿವೆ. ಇನ್ನೊಂದೆಡೆ ಪೂತನಿಯರು (ರಾಕ್ಷಸಿಯರು)ತಮ್ಮ ಹೆಗಲ ಮೇಲೆ ದೊಡ್ಡ ದೊಡ್ಡ ಶವಗಳನ್ನು ಒಯ್ಯುತ್ತಿದ್ದಾರೆ. ನರಮಾಂಸ ಭಕ್ಷಕಿಯ ರಾದ್ದರಿಂದ ಕೊಂಡೊಯ್ಯುತ್ತಿದ್ದಾರೆ. ಕುಂಭಾಂಡವೆಂಬ ಒಂದು ಜಾತಿಯ ಉಗ್ರ ಪಿಶಾಚಗಳು ಕುಂಭದಂತಹ ಹೊಟ್ಟೆಯನ್ನು ತೋರಿ ಸುತ್ತಾ ತಾಂಡವ ನೃತ್ಯವಾಡುತ್ತಿದ್ದಾರೆ. ಸುಟ್ಟು ಹೋಗುತ್ತಿರುವ ಶವಗಳ ಮುಖದ ಹತ್ತಿರದಿಂದ ಜ್ವಾಲೆಗಳು ಮೇದಸ್ಸು ಮತ್ತು ರಕ್ತಗಳ ಆರ್ದ್ರಾದ ಹಬೆಗಳನ್ನು ಛಮಿ ಛಮಿಯೆಂದು ಶಬ್ದ ಮಾಡುತ್ತಾ ಹೊರಹಾಕುತ್ತಿವೆ. ಹರಿಯುತ್ತಿರುವ ರಕ್ತದ ನದಿಯಲ್ಲಿ ಕಾಲನ್ನಿಟ್ಟು ಕೊಂಡು ನಿಂತಿರುವ ಒಬ್ಬಳು ಪೂತನಿಯನ್ನು ನೋಡಿದರೆ ನೆಲದಲ್ಲಿಯೇ ಓಡಾಡುವ ಮನುಷ್ಯಾದಿಗಳಂತೆ ಅವಳು ಕಾಣಿಸುತ್ತಿದ್ದಾಳೆ. ಅವಳು ರಾಕ್ಷಸ ಜಾತಿಗೆ ಸೇರಿದವಳಾದ್ದರಿಂದ ಯಥೇಷ್ಟವಾಗಿ ಆಕಾಶದಲ್ಲಿ ಓಡಾಡಬಹುದಿತ್ತು. ಆದರೆ ರಕ್ತದ ಆಸೆಯಿಂದ ಅಲ್ಲಿಯೇ ನಿಂತುಬಿಟ್ಟಿದ್ದಾಳೆ. ಅನೇಕ ಬೇತಾಳಗಳು ಶವಗಳನ್ನು ಎಳೆಯುತ್ತಿರುವಾಗ ಅವರ ಕುಲಕ್ಕೆ ಸಹಜವಾಗಿರುವ ಹರ್ಷದ ಕೇಕೆಹಾಕುತ್ತಾ ಗಲಾಟೆ ಮಾಡುತ್ತಿವೆ.’
‘ಒಂದೆಡೆ ಸತ್ತಿರುವ ಆನೆಯ ಹೊಟ್ಟೆಯು ಬಿರಿದು ತೆರೆದುಕೊಂಡಿದೆ. ತೆರೆದುಕೊಂಡಿರುವ ಆ ಹೊಟ್ಟೆಯೆಂಬ ಪೆಟ್ಟಿಗೆಯಲ್ಲಿ ಬೇತಾಳ ಮಗುವೊಂದು ಮಲಗಿ ನಿದ್ರಿಸುತ್ತಿದೆ. ಯುದ್ಧರಂಗದ ಮೂಲೆಯಲ್ಲಿರುವ, ಯಾರ ಓಡಾಟವೂ ಇಲ್ಲದ ಸ್ಥಳದಲ್ಲಿ ಕೆಲವು ರಾಕ್ಷಸರು ರಕ್ತವನ್ನು ಕುಡಿ ಯುವ ಆಟದಲ್ಲಿ ಮಗ್ನರಾಗಿದ್ದಾರೆ. ಮತ್ತವಾಗಿರುವ ಬೇತಾಳಗಳು ಚಿತೆಯ ಉರಿಯುತ್ತಿರುವ ಕೊಳ್ಳಿಗಳನ್ನೇ ಎತ್ತಿಕೊಂಡು ಯುದ್ಧದಂತೆ ಪರಸ್ಪರ ಕಲಹಮಾಡಿಕೊಳ್ಳುತ್ತಿದ್ದಾರೆ. ಅದರಿಂದ ಒಂದು ರೀತಿಯ ಉಜ್ವಲ ಬೆಳಕು ಆ ಸ್ಥಳದಲ್ಲಿ ಕಂಡುಬರುತ್ತಿದೆ. ಹರಿಯುತ್ತಿರುವ ರಕ್ತ ಮತ್ತು ಕೊಬ್ಬುಗಳ ದುರ್ವಾಸನೆಯಿಂದ ಕೂಡಿದ ಗಾಳಿಯು ವಕ್ರಾಕಾರವಾಗಿ ಬೀಸುತ್ತಿದೆ.’
‘ರೂಪಿಕಾ ಎಂಬ ಒಂದು ಜಾತಿಯ ಪೂತನಿಯರು(ರಾಕ್ಷಸಿಯರು)ರಕ್ತವನ್ನು ಕುಡಿಯಲು ಹಿಡಿದುಕೊಂಡಿರುವ ಕರಂಡಗಳಲ್ಲಿಯೇ, ಕುಡಿದಿದ್ದು ಜಾಸ್ತಿಯಾಗಿ, ರಟರಟನೆ ಶಬ್ದಮಾಡುತ್ತಾ ವಾಂತಿ ಮಾಡುತ್ತಿವೆ. ಇನ್ನೊಂದೆಡೆ ಅರ್ಧ ಬಿದ್ದಿರುವ ಶವಗಳನ್ನೇ ಆಸ್ವಾದಿಸುತ್ತಿರುವ ಮತ್ತು ತಿನ್ನಬೇಕೆಂಬ ತರಾತುರಿಯಲ್ಲಿರುವ ಯಕ್ಷಗಳು ಗಲಾಟೆಮಾಡುತ್ತಿವೆ.’
‘ವಿಸ್ತಾರವಾದ ಯುದ್ಧಭೂಮಿಯಲ್ಲಿ ಬೇರೆ ಬೇರೆ ದೇಶದ ಸೈನಿಕರು ಬೇರೆ ಬೇರೆ ಸ್ಥಳಗಳಲ್ಲಿ ನಿಂತಿದ್ದರಿಂದ ಆಯಾ ಸ್ಥಳಗಳಲ್ಲಿಯೇ ಅವಲೋಕಿಸಿದರೆ ಅಲ್ಲಿ ಮುಂಚೆ ನಿಂತಿದ್ದ ಸೈನಿಕರ ಶವಗಳೇ ಕಾಣಸಿಗುತ್ತವೆ. ವಂಗ, ಕಲಿಂಗ, ಅಂಗ ಮತ್ತು ತಂಗಣ ದೇಶಗಳ ಸೈನಿಕರ ಎತ್ತರವಾದ ಅಂಗಗಳ ಮೇಲೆ ನಿಶಾಚರ ಪಕ್ಷಿಗಳು ಕುಳಿತುಕೊಂಡು ಕೊಕ್ಕಿನಿಂದ ಕುಕ್ಕುತ್ತಿವೆ. ಇನ್ನೊಂದೆಡೆ ನಕ್ಷತ್ರಗಳು ಬೀಳುತ್ತಿವೆಯೋ ಎಂಬಹಾಗೆ ಕಾಣುವಂತೆ ಹಲ್ಲುಗಳನ್ನು ತೋರಿಸುತ್ತಾ ಜೋರಾಗಿ ನಗುತ್ತಾ ಬೆಂಕಿಯ ಜ್ವಾಲೆಗೆ ಸಮ್ಮುಖವಾಗಿ ಕುಳಿತಿರುವ ಪೂತನಿಯೊಬ್ಬಳು ಭಯಂಕರವಾಗಿ ಕಾಣುತ್ತಿದ್ದಾಳೆ. ಬೇತಾಳಗಳು ರಕ್ತದ ಕೆಸರಿನಲ್ಲಿ ಬೀಳುತ್ತಿರುವಾಗ ಅವರ ಮಧ್ಯದಲ್ಲಿ ರಕ್ತವನ್ನೇ ಕುಡಿಯಲು ಬಂದಿರುವ ಒಬ್ಬಳು ಪೂತನಿ. ಮತ್ತೊಂದೆಡೆ ಪಿಶಾಚಿಗಳ ನಡುವೆ ಆಗಮಿಸಿರುವ ಯೋಗಿನಿ ಗಣಗಳ ನಾಯಕಿಯನ್ನು ಪಿಶಾಚಿಗಳು ಶಬ್ದದ ಮೂಲಕ ಗಮನಿಸಿದರು. ಇದರಿಂದ ಪಿಶಾಚಿಗಳ ಗಲಾಟೆ ಸ್ವಲ್ಪ ಕಡಿಮೆಯಾದಂತೆ ತೋರಿತು.
(ಪ್ರತಿಕ್ರಿಯಿಸಿ; vvsudina@gmail.com, info.swarnavalli@gmail.com)