ರಕ್ತದಾನ ಜೀವ ಉಳಿಸುವ ಶ್ರೇಷ್ಠ ಕಾರ್ಯ

punith
ಡಿವಿಎಸ್ ಕಾಲೇಜಿನಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಎಸ್.ರಾಜಶೇಖರ್ ಉದ್ಘಾಟಿಸಿದರು. ಎಸ್.ಪಿ.ದಿನೇಶ್, ರುದ್ರಪ್ಪ ಕೊಳಲೆ, ಡಾ. ದಿನೇಶ್, ಧರಣೇಂದ್ರ ದಿನಕರ್, ಡಾ. ಯು.ಗೀತಾಲಕ್ಷ್ಮೀ ಇತರರಿದ್ದರು.
Published on

ಶಿವಮೊಗ್ಗ: ರಕ್ತದಾನ ಜೀವ ಉಳಿಸುವ ಅತ್ಯಂತ ಮಹತ್ತರ ಕಾರ್ಯವಾಗಿದ್ದು, ಆರೋಗ್ಯವಂತ ಯುವಜನರು ರಕ್ತದಾನಕ್ಕೆ ಮುಂದಾಗಬೇಕು ಎಂದು ಡಿವಿಎಸ್ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಅಭಿಪ್ರಾಯಪಟ್ಟರು.

ನಟ ಪುನೀತ್ ರಾಜ್‌ಕುಮಾರ್ ಜನ್ಮದಿನದ ಅಂಗವಾಗಿ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದಿಂದ ಸೋಮವಾರ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗಲು ಸಹಕಾರಿಯಾಗುತ್ತದೆ. ಹೊಸ ರಕ್ತ ಚಲನೆಯಿಂದ ಉತ್ತಮ ಆರೋಗ್ಯ ನಮ್ಮದಾಗುತ್ತದೆ. ರಕ್ತದ ಕೊಬ್ಬಿನಾಂಶ ಕಡಿಮೆಯಾಗಲು ಸಹಾಯವಾಗುತ್ತದೆ ಎಂದು ತಿಳಿಸಿದರು.

ಡಿವಿಎಸ್ ಉಪಾಧ್ಯಕ್ಷ ಎಸ್.ಪಿ.ದಿನೇಶ್ ಮಾತನಾಡಿ, ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ರಕ್ತವನ್ನು ಮನುಷ್ಯನ ದಾನದಿಂದ ಮಾತ್ರ ಪಡೆಯಬಹುದು. ದಾನಿಗಳು ರಕ್ತದಾನ ಮಾಡಲು ಮುಂದಾಗಬೇಕು. ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡುವುದರಿಂದ ತುರ್ತು ಸಂದರ್ಭದಲ್ಲಿ ಇರುವವರಿಗೆ ನೆರವಾಗುತ್ತದೆ ಎಂದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ, ಮೆಗ್ಗಾನ್ ಬೋಧನಾ ಆಸ್ಪತ್ರೆ ರಕ್ತ ನಿಧಿ ಕೇಂದ್ರ, ರೆಡ್‌ಕ್ರಾಸ್ ಸಂಜೀವಿನಿ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ರಕ್ತದಾನ ಮಾಡಿ ಪುನೀತರಾಗಿ ಘೋಷವಾಕ್ಯದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಡಿವಿಎಸ್ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಗೌರವ ಕಾರ್ಯದರ್ಶಿ ಡಾ. ದಿನೇಶ್, ಡಿವಿಎಸ್ ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ ಶೆಟ್ಟಿ, ಖಜಾಂಚಿ ಬಿ.ಗೋಪಿನಾಥ್, ಪ್ರಾಚಾರ್ಯ ಡಾ. ಎಂ.ವೆಂಕಟೇಶ್, ಮೆಗ್ಗಾನ್ ಬೋಧನಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಯು.ಗೀತಾಲಕ್ಷ್ಮೀ, ಸಂಜೀವಿನಿ ರಕ್ತನಿಧಿ ಕೇಂದ್ರದ ಡಾ. ಕಂಟೀಕರ್, ಧರಣೇಂದ್ರ ದಿನಕರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net