ರಕ್ತದಾನದಿಂದ ಜೀವ ಉಳಿಯಲು ಸಾಧ್ಯ

SRP_16-02jpj
ಶ್ರೀರಂಗಪಟ್ಟಣ ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ರಕ್ತದಾನ ಮಹತ್ವ ಕುರಿತು ಜನರಿಗೆ ಜಾಗೃತಿ ಮೂಡಿಸಲಾಯಿತು.
Published on

ಶ್ರೀರಂಗಪಟ್ಟಣ: ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದ್ದು, ತುರ್ತು ಸಂದರ್ಭದಲ್ಲಿ ಅನೇಕರ ಜೀವ ಉಳಿಸಲು ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.

ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಹತ್ವ ಕುರಿತು ಉಪನ್ಯಾಸ ನೀಡಿದರು.

ರಕ್ತದಾನ ಪ್ರತಿಯೊಬ್ಬ ಜವಾಬ್ದಾರಿಯುತ ನಾಗರಿಕರ ಕರ್ತವ್ಯವಾಗಬೇಕಾಗಿದೆ. ರಕ್ತವನ್ನು ಕೃತಕವಾಗಿ ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ ಮನುಷ್ಯ ಮನುಷ್ಯರಿಗೆ ಮಾತ್ರ ರಕ್ತದಾನ ಮಾಡಲು ಸಾಧ್ಯವಾಗಿರುವುದರಿಂದ ರಕ್ತದಾನದಂತಹ ಮಹತ್ಕಾರ್ಯಕ್ಕೆ ಮುಂದಾಗುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಬಹುದಾಗಿದೆ. ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜೀವಗಳನ್ನು ಉಳಿಸಬಹುದು. ರಕ್ತ ಹೀನತೆಯಿಂದ ಬಳಲುತ್ತಿರುವ ಗರ್ಭಿಣಿ, ಬಾಣಂತಿಯರಿಗೆ, ಅಪಘಾತವಾಗಿ ತೀವ್ರ ರಕ್ತಸ್ರಾವವಾದಾಗ ಕ್ಯಾನ್ಸರ್, ಡೆಂೆ ಜ್ವರದಿಂದ ಬಳಲುತ್ತಿರುವ ರೋಗಿಗೆ, ವೈರಲ್ ಫೀವರ್ ಹಾಗೂ ರಕ್ತಹೀನತೆ ಮಾಡುವಂತಹ ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ನೆರವಾಗಲಿದೆ. ರಕ್ತದಾನದಿಂದ ದೇಹದ ತೂಕ ಕಡಿಮೆ ಮಾಡಬಹುದು, ದೇಹದ ಸೌಂದರ್ಯ ಕೂಡ ಚೆನ್ನಾಗಿರುತ್ತದೆ ಎಂದರು.

ಕ್ಯಾನ್ಸರ್, ಹೃದಯಾಘಾತ, ಅಧಿಕ ರಕ್ತದೊತ್ತಡ ಆಗುವುದನ್ನು ತಡೆಗಟ್ಟುವುದು ಅಲ್ಲದೆ ಲೀವರ್ ಹಾಗೂ ಹೃದಯ ಆರೋಗ್ಯವಾಗಿರುತ್ತದೆ ಹೀಗಾಗಿ 18 ವರ್ಷ ತುಂಬಿದ ಆರೋಗ್ಯವಂತರು ರಕ್ತದಾನ ಮಾಡುವ ಸಂಕಲ್ಪ ಮಾಡಬೇಕೆಂದು ತಿಳಿಸಿದರು.

ಇತಿಹಾಸ ಪ್ರಾಧ್ಯಾಪಕಿ ಡಾ.ಮಂಜುಳಾ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕಬಡ್ಡಿ ಆಟಗಾರ ನಂದೀಶ್‌ಕುಮಾರ್, ರಾ.ಸೇ ಯೋಜನೆಯ ಶಿಬಿರಾಧಿಕಾರಿ ಮೂರ್ತಿ, ಸಹ ಪ್ರಾಧ್ಯಾಪಕಿ ವಿನಯಾ, ಸಿಬ್ಬಂದಿ ಮಹಮ್ಮದ್ ನಿಸಾರ್, ಶಿವಪ್ರಸಾದ್, ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಪಿ.ಪಣಿಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಮತಾ, ಆಶಾ ಕಾರ್ಯಕರ್ತೆ ಸುಧಾಮಣಿ, ಗೌರಮ್ಮ ಹಾಗೂ ಶಿಬಿರಾರ್ಥಿಗಳು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net