ರಕ್ತದಾನ ಜೀವದಾನ; ರಕ್ತದಾನಿಗಳಿಗೆ ಸನ್ಮಾನ

sdfaa
Published on

|ಪಂಕಜ ಕೆ.ಎಂ. ಬೆಂಗಳೂರು

ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಎದುರಾಗಿದ್ದ ರಕ್ತದ ಕೊರತೆ ಇದೀಗ (3ನೇ ಅಲೆ ನಂತರ) ಚೇತರಿಕೆ ಕಂಡಿದ್ದು, ಪ್ರಸ್ತುತ ಒಟ್ಟು ಬೇಡಿಕೆಯಲ್ಲಿ ಶೇ. 70-80 ರಕ್ತ ಪೂರೈಕೆಯಾಗುತ್ತಿದೆ. ಎರಡು ವರ್ಷಗಳ ನಂತರ ಶಿಕ್ಷಣ ಸಂಸ್ಥೆಗಳು ಹಾಗೂ ಉದ್ಯೋಗ ವಲಯದಲ್ಲಿ ಚಟುವಟಿಕೆ ಸಕ್ರಿಯಗೊಂಡಿರುವ ಹಿನ್ನೆಲೆಯಲ್ಲಿ ಹೆಚ್ಚು ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಬೇಡಿಕೆ ಪೂರೈಸಬೇಕು ಎಂದು ರಕ್ತನಿಧಿಗಳು ಮನವಿ ಮಾಡಿವೆ.

ಸಾಂಕ್ರಾಮಿಕ ಸಂದರ್ಭದಲ್ಲಿ ರಕ್ತದಾನಿಗಳ ಸಂಖ್ಯೆ ಶೇ. 50ಕ್ಕೂ ಹೆಚ್ಚು ಕುಸಿದಿದ್ದ ಪರಿಣಾಮ ರಕ್ತದ ತೀವ್ರ ಕೊರತೆ ಎದುರಾಗಿತ್ತು. ಇದರಿಂದಾಗಿ ತುರ್ತು ಸಂದರ್ಭ ಸೇರಿ ಚಿಕಿತ್ಸೆಗಾಗಿ ರೋಗಿಗಳು ಹಾಗೂ ಸಂಬಂಧಿಕರು ಪರದಾಡುವಂತಾಗಿತ್ತು. ಪ್ರಮುಖವಾಗಿ ಕ್ಯಾನ್ಸರ್ ರೋಗಿಗಳು, ತಲಸ್ಸೇಮಿಯಾ ಹಾಗೂ ಹಿಮೊಫೋಲಿಯಾ ರೋಗಿಗಳು, ಡೆಂಘಿ, ರಕ್ತಹೀನತೆ ಹೊಂದಿರುವವರು, ಗರ್ಭಿಣಿಯರು ಸಮಸ್ಯೆ ಎದುರಿಸಬೇಕಾಯಿತು.

ಕೋವಿಡ್ ಸಂದರ್ಭದಲ್ಲಿ ದಾನಿಗಳು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಬೇಕಾಗಿತ್ತು. ಇದರಿಂದ ಆತಂಕ ಗೊಂಡು ಬಹಳಷ್ಟು ಮಂದಿ ರಕ್ತದಾನದಿಂದ ಹಿಂದೆ ಸರಿದಿದ್ದರು. ಇನ್ನು ಶಿಕ್ಷಣ ಸಂಸ್ಥೆಗಳು ಮುಚ್ಚಿದ್ದರಿಂದ ಹಾಗೂ ಐಟಿ-ಬಿಟಿ ವಲಯದ ಕಂಪನಿಗಳು ವರ್ಕ್ ಫ್ರಂ ಹೋಂ ಘೋಷಿಸಿದ್ದರಿಂದ ರಕ್ತದಾನ ಶಿಬಿರಗಳು ನಡೆ ಯದೆ (2020-21ರಲ್ಲಿ ಕೇವಲ 5.59 ಲಕ್ಷ ಯೂನಿಟ್ ರಕ್ತ ಸಂಗ್ರಹ) ರಕ್ತದ ಕೊರತೆ ಎದುರಾಗಿತ್ತು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆಯು ಪ್ರತಿ ವರ್ಷ ಅತಿ ಹೆಚ್ಚು ರಕ್ತದಾನ ಮಾಡಿದವರನ್ನು ಗುರುತಿಸಿ ರಕ್ತದಾನಿಗಳ ದಿನದಂದು ಗೌರವಿಸುವ ಕಾರ್ಯ ಮಾಡುತ್ತಾ ಬಂದಿದೆ. ಬೆಂಗಳೂರಿನ ಆರ್. ಟಿ.ನಗರ ನಿವಾಸಿ 51 ವರ್ಷದ ಆಶಾ ಸೂರ್ಯನಾರಾಯಣ (106 ಬಾರಿ ರಕ್ತದಾನ ಮಾಡಿದ್ದಾರೆ), ಉಡುಪಿ ಜಿಲ್ಲೆಯ 39 ವರ್ಷದ ರಾಘವೇಂದ್ರ ಪ್ರಭು ಕಾರ್ವಾಲ್ (55 ಬಾರಿ), ದಕ್ಷಿಣ ಕನ್ನಡ ಜಿಲ್ಲೆಯ 33 ವರ್ಷದ ಕೆ. ರಾಕೇಶ್ ಕಾಮತ್ (45 ಬಾರಿ), ಬಳ್ಳಾರಿ ಜಿಲ್ಲೆಯ 55 ವರ್ಷದ ಹರಿಶಂಕರ್ ಅಗರ್​ವಾಲ್ (35 ಬಾರಿ), ಹಾಸನ ಜಿಲ್ಲೆಯ 41 ವರ್ಷದ ಜಿ.ಎಸ್. ಮೋಹನ (39 ಬಾರಿ), ಚಿಕ್ಕಬಳ್ಳಾಪುರ ಜಿಲ್ಲೆಯ 33 ವರ್ಷದ ಎನ್. ಮಹಾಂತೇಶ್ (36 ಬಾರಿ), ಕೊಪ್ಪಳ ಜಿಲ್ಲೆಯ 39 ವರ್ಷದ ರಮೇಶ್ ತುಪ್ಪದ (27 ಬಾರಿ) ಹಾಗೂ ಧಾರವಾಡ ಜಿಲ್ಲೆಯ 49 ವರ್ಷದ ಶ್ರೀ ಬಸವಾನಂದ ಸ್ವಾಮೀಜಿ (85 ಬಾರಿ) ರಕ್ತದಾನ ಮಾಡಿದ್ದಾರೆ. ಕೃಷಿ ವಿಶ್ವವಿದ್ಯಾಲಯ, ಜಿ.ಕೆ.ವಿ.ಕೆ. ಆವರಣದಲ್ಲಿ ಜೂ. 14ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ವಿಶ್ವ ರಕ್ತದಾನಿಗಳ ದಿನಾಚರಣೆ ಸಮಾರಂಭದಲ್ಲಿ ಹೆಚ್ಚು ಬಾರಿ ರಕ್ತದಾನ ಮಾಡಿದವರನ್ನು ಸನ್ಮಾನಿಸಲಾಗುವುದು ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಾಜ್ಯ ಶಾಖೆ ಅಧ್ಯಕ್ಷ ವಿಜಯ್ ಕುಮಾರ್ ಪಾಟೀಲ್ ತಿಳಿಸಿದ್ದಾರೆ.

8 ಲಕ್ಷ ಯೂನಿಟ್ ರಕ್ತ ಸಂಗ್ರಹದ ಗುರಿ: ರಾಜ್ಯದಲ್ಲಿ ಸುಮಾರು 7 ಕೋಟಿ ಜನಸಂಖ್ಯೆ ಇದ್ದು, ಇದರಲ್ಲಿ ಶೇ. 1 ಮಂದಿಗೆ ರಕ್ತದ ಅವಶ್ಯಕತೆ ಇದೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಸಕ್ತ ಸಾಲಿಗೆ 8 ಲಕ್ಷ ಯೂನಿಟ್ ರಕ್ತ ಸಂಗ್ರಹಿಸುವ ಗುರಿ ಹೊಂದಿದೆ. ರಾಜ್ಯದಲ್ಲಿ 248 ರಕ್ತನಿಧಿಗಳಿದ್ದು, ಜನರು ಸ್ವಯಂಪ್ರೇರಿತರಾಗಿ ತೆರಳಿ ರಕ್ತದಾನ ಮಾಡಬಹುದಾಗಿದೆ. ರಕ್ತದಾನಿಗಳನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಪ್ರತಿ ವರ್ಷ ಜ. 12ರಂದು ಯುವ ರಕ್ತದಾನಿಗಳ ದಿನ, ಜೂ. 14ರಂದು ವಿಶ್ವ ರಕ್ತದಾನಿಗಳ ದಿನ ಹಾಗೂ ಅ. 1ರಂದು ರಾಷ್ಟ್ರೀಯ ರಕ್ತದಾನ ದಿನ ಆಚರಿಸಲಾಗುತ್ತದೆ. ದಾನಿಗಳನ್ನು ಪ್ರೋತ್ಸಾಹಿಸಲು ಹೆಚ್ಚು ಬಾರಿ ರಕ್ತದಾನ ಮಾಡಿದವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸುವ ಕಾರ್ಯ ಸಹ ಮಾಡಲಾಗುತ್ತಿದೆ.

ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಹೆಚ್ಚಿನ ರಕ್ತದ ಅಗತ್ಯವಿದ್ದು, ಇಲ್ಲಿ ದಾಖಲಾಗುವ ರೋಗಿಗಳಲ್ಲಿ ಶೇ. 60 ಮಂದಿಗೆ ರಕ್ತ ಕೊಡಬೇಕಾಗುತ್ತದೆ. ಕಳೆದ ವರ್ಷ ಸಂಸ್ಥೆಯಲ್ಲಿ 7,697 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ. ಹಾಗಾಗಿ ದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಬೇಕು.’

| ಡಾ. ಸಿ. ರಾಮಚಂದ್ರ, ನಿರ್ದೇಶಕ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಾರು ರಕ್ತದಾನ ಮಾಡಬಹುದು?

18 ರಿಂದ 65 ವರ್ಷ ದೊಳಗಿನ ಆರೋಗ್ಯವಂತ ವ್ಯಕ್ತಿ, ಕನಿಷ್ಠ 45 ಕೆ.ಜಿ. ದೇಹದ ತೂಕ ಇರುವವರು 350 ಎಂಎಲ್ ಹಾಗೂ 55 ಕೆ.ಜಿ.ಗಿಂತ ಅಧಿಕ ತೂಕ ಇರುವವರು 450 ಎಂಎಲ್ ರಕ್ತದಾನ ಮಾಡಬಹುದಾಗಿದೆ. ದಾನಿಗಳ ಹಿಮೋಗ್ಲೋಬಿನ್ (ಎಚ್​ಬಿ) ಪ್ರಮಾಣ ಕನಿಷ್ಠ 12.5 ಇರಬೇಕು. ಒಂದು ಯೂನಿಟ್ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದಾಗಿದೆ.

ಸಂಸ್ಥೆಯಲ್ಲಿ ಪ್ರತಿನಿತ್ಯ ನೂರು ಯೂನಿಟ್ ರಕ್ತದ ಬೇಡಿಕೆ ಇದ್ದು, ಕೋವಿಡ್ ಸಂದರ್ಭದಲ್ಲಿ ರಕ್ತದ ಸಂಗ್ರಹಣೆ ಪ್ರಮಾಣ ಶೇ. 50ಕ್ಕಿಂತ ಕಡಿಮೆಯಾಗಿತ್ತು. 3ನೇ ಅಲೆ ನಂತರ ಚೇತರಿಕೆ ಕಂಡುಬಂದಿದ್ದು, ಈಗ ನಿತ್ಯ 70-80 ಯೂನಿಟ್ ರಕ್ತ ಸಂಗ್ರಹವಾಗುತ್ತಿದೆ. ಶಿಕ್ಷಣ ಸಂಸ್ಥೆಗಳು, ಐಟಿಬಿಟಿ ಕಂಪನಿಗಳು ಶಿಬಿರಗಳನ್ನು ಆಯೋಜಿಸುವ ಮೂಲಕ ಹೆಚ್ಚು ರಕ್ತ ಸಂಗ್ರಹಿಸಿ ಬೇಡಿಕೆ ಪೂರೈಸಬೇಕು.’| ವಿಜಯ್ ಕುಮಾರ್ ಪಾಟೀಲ್ ಅಧ್ಯಕ್ಷರು,ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ಶಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net