

1) ನನ್ನ ಮಗಳು ಎಸ್ಟಿಮಾದಿಂದ ಬಳಲುತ್ತಾಳೆ. ಔಷಧ ತಪ್ಪಿಸಲು ಆಕೆಗೆ ಆಸನ ಹಾಗೂ ಪ್ರಾಣಾಯಾಮದ ಪರಿಹಾರ ತಿಳಿಸಿ.
| ಸುಲೋಚನಾ ಶಿರಸಿ
ಎಸ್ಟಿಮಾ ಎಂಬುದು ಚರ್ಮದ ತುರಿಕೆ, ಕೆಂಪು ಬಿರುಕು ಮತ್ತು ಒರಟಾಗಿ ಪರಿಣಮಿಸುವ ಸ್ಥಿತಿಯಾಗಿದೆ. ಎಸ್ಟಿಮಾ ಇರುವ ಅನೇಕ ಜನರಿಗೆ ರೋಗಲಕ್ಷಣಗಳನ್ನು ನಿರ್ವಹಿಸುವುದು ದೈನಂದಿನ ಸವಾಲಾಗಿದೆ. ಇದರಿಂದಾಗಿ ಉಂಟಾಗುವ ಒತ್ತಡವನ್ನು ಕಡಿಮೆ ಮಾಡಲು ಯೋಗ ಸಹಕಾರಿ. ಯೋಗವು ಮನಸ್ಸು-ದೇಹದ ಅಭ್ಯಾಸವಾಗಿದ್ದು, ದೈಹಿಕ, ಭಾವನಾತ್ಮಕ, ಮಾನಸಿಕ ಮತ್ತು ಅಧ್ಯಾತ್ಮಿಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯವಾಗುತ್ತದೆ. ಒತ್ತಡದ ಜೀವನವು ಚರ್ಮದ ಕಾಯಿಲೆಗಳ ಮೇಲೆ ಪ್ರಭಾವ ಬೀರುತ್ತದೆ. ಚರ್ಮದಲ್ಲಿನ ಪ್ರತಿರಕ್ಷಣಾ ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಎಸ್ಟಿಮಾ ಇರುವವರು ಚರ್ಮದ ದುರ್ಬಲ ತಡೆಗೋಡೆ ಹೊಂದಿರುವುದರಿಂದ ಚರ್ಮದ ಪ್ರತಿರಕ್ಷಣಾ ಕೋಶಗಳ ಮೇಲೆ ಒತ್ತಡದ ಪರಿಣಾಮಗಳಿಗೆ ಅವರು ಹೆಚ್ಚು ಒಳಗಾಗುತ್ತದೆ. ಉತ್ತಮ ರಕ್ತಸಂಚಾರಕ್ಕೆ ಆಸನಗಳಲ್ಲಿ ಪಾದಹಸ್ತಾಸನ, ಪ್ರಸಾರಿತ ಪಾದೋತ್ಥಾನಾಸನ, ಶಶಾಂಕಾಸನ, ಮಂಡೂಕಾಸನ, ಸರ್ವಾಂಗಾಸನ, ಹಲಾಸನ, ಅಧೋಮುಖ ಶ್ವಾನಾಸನ, ಶವಾಸನ ಮಾಡುವುದು ಒಳಿತು.
ಆರಂಭದಲ್ಲಿ ಸರಳ ವ್ಯಾಯಾಮಗಳೊಂದಿಗೆ ಸೂರ್ಯನಮಸ್ಕಾರಗಳನ್ನು ಅಭ್ಯಾಸ ಮಾಡಿ ಹಾಗೂ ರಕ್ತಶುದ್ಧಿಗೆ ಸಹಕರಿಸುವ ಪ್ರಾಣಾಯಾಮಗಳನ್ನು ಅಭ್ಯಾಸ ಮಾಡಿ. ಯೋಗದಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮಗೊಳ್ಳುತ್ತದೆ. ನಾಡಿಶುದ್ಧೀ ಪ್ರಾಣಾಯಾಮವನ್ನು ನಿತ್ಯ ಮುಂಜಾನೆ (21 ಬಾರಿ) ಅಭ್ಯಾಸ ಮಾಡಿ. ಉಜ್ಜಾಯಿ ಪ್ರಾಣಾಯಾಮ 16 ಬಾರಿ ಅಭ್ಯಾಸ ನಡೆಸಿ. ಒಮ್ಮೆ ತಜ್ಞ ವೈದ್ಯರಲ್ಲಿ ಸಮಾಲೋಚಿಸಿ. ಎಸ್ಟಿಮಾ ಇರುವವರು ಚರ್ಮದ ಆರೋಗ್ಯ ಕಾಪಾಡಲು ಮತ್ತು ರೋಗಲಕ್ಷಣಗಳನ್ನು ನಿವಾರಿಸಲು ವೈದ್ಯರು ತಿಳಿಸುವ ಸೂಚನೆ ಮಾರ್ಗದರ್ಶನಗಳನ್ನು ಪಾಲಿಸಿದಾಗ ಸಾಕಷ್ಟು ಹತೋಟಿಯಲ್ಲಿಡಬಹುದು.
2) ನಿಂತುಕೊಂಡು ತಿರುಚಿ ಮಾಡುವ ಕಟಿ ಚಕ್ರಾಸನದ ಬಗ್ಗೆ ತಿಳಿಸಿ.
| ಸಾಂಬಶಿವ (54 ವರ್ಷ)
ಸೊಂಟದ ತಿರುಗುವಿಕೆ ಭಂಗಿ ಎಂದು ಅರ್ಥೈಸುವ ಕಟಿ ಚಕ್ರಾಸನದ ಅಭ್ಯಾಸದಿಂದ ಸೊಂಟದ ಭಾಗ ಮತ್ತು ಹೊಟ್ಟೆಯ ಕೆಳಭಾಗದ ಅನಗತ್ಯ ಕೊಬ್ಬನ್ನು ಕರಗಿಸಬಹುದು.
ವಿಧಾನ: ಜಮಖಾನ ಹಾಸಿದ ನೆಲದ ಮೇಲೆ ತಾಡಾಸನದಲ್ಲಿ ನಿಲ್ಲಿ. ಅನಂತರ ಕಾಲುಗಳಲ್ಲಿ ಸ್ವಲ್ಪ ಅಂತರವಿರಿಸಿ. ಆಮೇಲೆ ಬಲಗೈಯನ್ನು ಸೊಂಟಕ್ಕೆ ಸುತ್ತಿ ಬಳಸಿ. ಎಡಗೈಯನ್ನು ಭುಜದ ಮೇಲೆ ಇಡಬೇಕು. ಎಡಗೈಯನ್ನು ಭುಜದ ಮೇಲೆ ಇಡಿ. ಅನಂತರ ಉಸಿರನ್ನು ಬಿಡುತ್ತಾ ಎಡಬದಿಗೆ ದೇಹವನ್ನು ತಿರುಗಿಸಿ. ಈ ಸ್ಥಿತಿಯಲ್ಲಿ 5ರಿಂದ 10 ಸಲ ಸಾಮಾನ್ಯ ಉಸಿರಾಟ ನಡೆಸಿ. ಇಲ್ಲಿ ಭುಜಗಳು ಸಮಾನಾಂತರವಾಗಿರಲಿ. ಹಾಗೆಯೇ ಈ ಆಸನವನ್ನು ಇನ್ನೊಂದು ಬದಿಯೂ 3ರಿಂದ 4 ಬಾರಿ ಅಭ್ಯಾಸ ಮಾಡಿ.
ಪ್ರಯೋಜನ: ಬೆನ್ನುಹುರಿಯ ಆರೋಗ್ಯಕರ ನಿರ್ವಹಣೆ. ಸಪೂರ ಸೊಂಟವನ್ನು ಹೊಂದಬಹುದು. ಭುಜ, ಬೆನ್ನು, ಕುತ್ತಿಗೆ, ಸೊಂಟ ಮತ್ತು ಕಿಬ್ಬೊಟ್ಟೆಯ ಪ್ರದೇಶದ ಸ್ನಾಯುಗಳಿಗೆ ಮಸಾಜ್ ದೊರಕುತ್ತದೆ. ಕರುಳಿನ ಚಲನೆ ಸುಧಾರಣೆ ಅಜೀರ್ಣ ಮತ್ತು ಮಲಬದ್ಧತೆ ನಿಯಂತ್ರಣ, ಬೆನ್ನು, ಸೊಂಟದ ಬಿಗಿತ ನೋವು ನಿವಾರಣೆ. ಕಾಲಿನ ಸ್ನಾಯುಗಳು ಬಲಗೊಂಡು ಸೆಳೆತ ನಿಯಂತ್ರಣ.
ಸೂಚನೆ: ತೀವ್ರ ಬೆನ್ನು, ಸೊಂಟನೋವು ಇದ್ದವರು ಅಭ್ಯಾಸ ಮಾಡುವುದು ಬೇಡ.