ಕಣ್ಣಿನ ದೋಷ ನಿವಾರಣೆಗಾಗಿ ಅಂಧತ್ವ ಮುಕ್ತ ಶಿವಮೊಗ್ಗ

dc
ಅಂಧತ್ವ ಮುಕ್ತ ಶಿವಮೊಗ್ಗ-2024 ಕಾರ್ಯಕ್ರಮ ಕುರಿತು ಗುರುದತ್ತ ಹೆಗಡೆ ಸಭೆ ನಡೆಸಿದರು. ಎನ್.ಹೇಮಂತ್, ಡಾ.ನಟರಾಜ್, ಡಾ.ಕಿರಣ್ ಮುಂತಾದವರಿದ್ದರು.
Published on

ಶಿವಮೊಗ್ಗ: ಮಕ್ಕಳು ಮತ್ತು ದೊಡ್ಡವರಲ್ಲಿ ವಿವಿಧ ರೀತಿಯ ಕಣ್ಣಿನ ದೋಷಗಳನ್ನು ಸರಿಪಡಿಸುವಲ್ಲಿ ಜಿಲ್ಲಾಡಳಿತ ಅಂಧತ್ವ ಮುಕ್ತ ಶಿವಮೊಗ್ಗ-2024 ಕಾರ್ಯಕ್ರಮ ರೂಪಿಸಿದೆ. ಇದರ ಸಮರ್ಪಕ ಅನುಷ್ಟಾನಕ್ಕೆ ವಿವಿಧ ಆಸ್ಪತ್ರೆ ಹಾಗೂ ಸಂಘ ಸಂಸ್ಥೆಗಳ ಸಹಕಾರ ಕೋರಲಾಗಿದೆ.

ಅಂಧತ್ವಮುಕ್ತ ಶಿವಮೊಗ್ಗ-2024 ಕಾರ್ಯಕ್ರಮ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಯೋಜನೆಗೆ ಸಂಬಂಧಿಸಿದಂತೆ ಕ್ರಿಯಾ ಯೋಜನೆ ರೂಪಿಸಬೇಕು. ಜಿಪಂ ಸಿಇಒ ಎನ್.ಹೇಮಂತ್ ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.
ಅಂಧತ್ವಕ್ಕೆ ಕಾರಣವಾಗುವ ಅಂಶಗಳು, ಅದರ ನಿವಾರಣೆಗೆ ಅಗತ್ಯವಾದ ಚಿಕಿತ್ಸೆ, ಮಾನವ ಸಂಪನ್ಮೂಲ, ಮೂಲ ಸೌಕರ್ಯಗಳು, ಹಣಕಾಸು ಮುಂತಾದ ಸಂಗತಿಗಳ ಬಗ್ಗೆ ಸ್ಪಷ್ಟವಾದ ರೂಪುರೇಷೆ ಸಿದ್ದಪಡಿಸಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಜಿಪಂ ಸಿಇಒ ಎನ್.ಹೇಮಂತ್ ಮಾತನಾಡಿ, ಕೆಲವು ಜಿಲ್ಲೆಗಳಲ್ಲಿ ಆಶಾಕಿರಣ ಎಂಬ ಕಾರ್ಯಕ್ರಮದಡಿ ಅಂಧತ್ವ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಅಂಧತ್ವ ಮುಕ್ತ ಶಿವಮೊಗ್ಗ ಎಂಬ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಶಾಲಾ ಮಕ್ಕಳಲ್ಲಿ ಕಂಡು ಬರುವ ಕಣ್ಣಿನ ದೋಷಗಳು, ಕಣ್ಣಿನ ಪೊರೆ, ಒಡಚುಗಣ್ಣು, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪಥಿ ಮತ್ತು ಇತರ ಕಣ್ಣಿನ ದೋಷಗಳನ್ನು ಗುರುತಿಸಿ ಕನ್ನಡಕ ನೀಡಲಾಗುವುದು. ಕಣ್ಣಿನ ಪೊರೆ ಶಸ್ತಚಿಕಿತ್ಸೆ ಹಾಗೂ ಹೆಚ್ಚಿನ ತೊಂದರೆ ಇದ್ದರೆ ಉನ್ನತ ಆರೋಗ್ಯ ಕೇಂದ್ರಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಪ್ರಾಥಮಿಕ ತಪಾಸಣೆ, ಮಾಧ್ಯಮಿಕ ತಪಾಸಣೆ, ಉನ್ನತ ಆರೋಗ್ಯ ಕೇಂದ್ರಕ್ಕೆ ರೆಫರ್ ಮಾಡುವ ಮೂರು ಹಂತಗಳಿವೆ. ಮೊದಲ ಹಂತದಲ್ಲಿ ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಕಣ್ಣಿನ ತೊಂದರೆ ಬಗ್ಗೆ ಪರಿಶೀಲಿಸಿ ವರದಿ ನೀಡುವರು. ನಂತರ ವೈದ್ಯರು ತಪಾಸಣೆ ನಡೆಸಿ, ಕನ್ನಡಕ ಅಗತ್ಯವಿರುವವರಿಗೆ ಕನ್ನಡಕ ವಿತರಣೆ ಮಾಡುವರು. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವವರಿಗೆ ಉನ್ನತ ಆರೋಗ್ಯ ಕೇಂದ್ರಕ್ಕೆ ರೆಫರ್ ಮಾಡಲಿದ್ದಾರೆ ಎಂದರು.
ಡಿಎಚ್‌ಒ ಡಾ.ನಟರಾಜ್, ಜಿಲ್ಲಾ ಸರ್ಜನ್ ಡಾ.ಸಿದ್ದನಗೌಡ ಪಾಟೀಲ್, ಐಎಂಎ ಅಧ್ಯಕ್ಷ ಡಾ.ಶ್ರೀಧರ್, ಜಿಲ್ಲಾ ಅಂಧತ್ವ ನಿವಾರಣಾಧಿಕಾರಿ ಡಾ.ಕಿರಣ್, ವಿವಿಧ ಆಸ್ಪತ್ರೆಗಳ ಪ್ರಮುಖರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net