ಬಾಬಾ ವಂಗಾ ನುಡಿದ ಯಾವ ಭವಿಷ್ಯವಾಣಿಗಳು ಈ ವರ್ಷ ನಿಜವಾಗಿವೆ? ಯಾವುದು ಸುಳ್ಳಾಗಿವೆ? ಇಲ್ಲಿದೆ ಅಚ್ಚರಿ ಸಂಗತಿ! Baba Vanga

Baba Vanga
Published on

Baba Vanga : 2024ನೇ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆ. ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಹೀಗಾಗಿ ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರು ನುಡಿದಿರುವ ಹಲವು ಭವಿಷ್ಯಗಳಲ್ಲಿ ಎಷ್ಟು ಭವಿಷ್ಯವಾಣಿಗಳು ನಿಜವಾಗಿವೆ ಎಂಬುದನ್ನು ನಾವೀಗ ತಿಳಿಯೋಣ.

ಭವಿಷ್ಯವಾಣಿಗಳ ಬಗ್ಗೆ ತಿಳಿಯುವ ಮೊದಲು ಬಾಬಾ ವಂಗಾ ಯಾರೆಂಬುದನ್ನು ಪರಿಚಯ ಮಾಡಿಕೊಳ್ಳೋಣ.

ಬಲ್ಗೇರಿಯನ್​ನ ನಿಗೂಢ ಮಹಿಳೆ, ಅತೀಂದ್ರಿಯ ಭವಿಷ್ಯಗಾರ್ತಿ ಎಂದೇ ಖ್ಯಾತಿ ಪಡೆದಿರುವ ಬಾಬಾ ವಂಗಾ ಅವರ ಭವಿಷ್ಯವಾಣಿ ಇದಾಗಲೇ ಜಗದ್ವಿಖ್ಯಾತಿ ಪಡೆದಿದೆ. ವರದಿಗಳ ಪ್ರಕಾರ, ಅವರು 1911ರಲ್ಲಿ ಉತ್ತರ ಮ್ಯಾಸಿಡೋನಿಯಾದ ಸ್ಟ್ರುಮಿಕಾದಲ್ಲಿ ಜನಿಸಿದರು. ಅವರ ಮೂಲ ಹೆಸರು ವಾಂಜೆಲಿಯಾ ಪಾಂಡೆವಾ ಡಿಮಿಟ್ರೋವಾ ಎಂದು. ತಮ್ಮ 12ನೇ ವಯಸ್ಸಿನಲ್ಲಿ ಭಾರೀ ಚಂಡಮಾರುತದ ಸಮಯದಲ್ಲಿ ನಿಗೂಢವಾಗಿ ದೃಷ್ಟಿ ಕಳೆದುಕೊಂಡರಂತೆ. 1996ರಲ್ಲಿ ಮೃತಪಟ್ಟಿರುವ ಬಾಬಾ ವಂಗಾ 5079ನೇ ಇಸವಿಯವರೆಗೂ ಏನೇನಾಗಲಿದೆ ಎನ್ನುವುದನ್ನು ಕಂಡು ಕೊಂಡಿದ್ದಾಗಿ ಹೇಳಿದ್ದು, ಅದನ್ನು ಸಮಾಜಕ್ಕೆ ತಿಳಿಸಿಯೇ ಕೊನೆಯುಸಿರೆಳೆದಿದ್ದರು ಎಂದು ಹೇಳಲಾಗಿದೆ.

ಉಗ್ರರು ಅಮೆರಿಕದ ಮೇಲೆ ನಡೆಸಿದ ದಾಳಿ (9/11), ಚೆರ್ನೋಬಿಲ್‌ ದುರಂತ, ಪ್ರಿನ್ಸೆಸ್ ಡಯಾನಾ ಸಾವು, 2004ರ ಥಾಯ್ಲೆಂಡ್‌ ಸುನಾಮಿ, ಬರಾಕ್‌ ಒಬಾಮಾ ಅಧ್ಯಕ್ಷ ಪಟ್ಟಕ್ಕೇರುವುದು…ಇಂಥ ನೂರಾರು ಘಟನೆಗಳ ಕುರಿತು ಹಲವು ದಶಕಗಳ ಮುಂಚೆಯೇ ನುಡಿದಿದ್ದರು ಇವರು. ಅಷ್ಟೇ ಏಕೆ ಮಹಾಮಾರಿ ಕರೊನಾ ವೈರಸ್​ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದೆ. 15ನೇ ಶತಮಾನದ ಜ್ಯೋತಿಷಿ ನಾಸ್ಟ್ರಾಡಮಸ್‌ಗೆ ಬಾಬಾ ವಂಗಾ ಅವರನ್ನು ಹೋಲಿಕೆ ಮಾಡಲಾಗುತ್ತದೆ. ಅವರ ಭವಿಷ್ಯವಾಣಿಗಳು ಶೇಕಡ 85ರಷ್ಟು ನಿಖರ ಎನ್ನಲಾಗುತ್ತಿದೆ. 2024ನೇ ವರ್ಷಕ್ಕೆ ಕೆಲವು ಭವಿಷ್ಯವಾಣಿಗಳನ್ನು ಹೇಳಿದ್ದರು. ಅವುಗಳಲ್ಲಿ ಎಷ್ಟು ನಿಜವಾಗಿವೆ ಮತ್ತು ಮತ್ತು ಸುಳ್ಳಾಗಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟು

2024ರಲ್ಲಿ ಜಾಗತಿಕ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ದೊಡ್ಡ ಆರ್ಥಿಕ ಬಿಕ್ಕಟ್ಟು ಉಂಟಾಗಲಿದೆ ಮತ್ತು ಹೆಚ್ಚುತ್ತಿರುವ ಸಾಲದ ಮಟ್ಟಗಳು ಮತ್ತು ಹೆಚ್ಚುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆಯಂತಹ ಅಂಶಗಳು ಇದಕ್ಕೆ ಕಾರಣಗಳಾಗಲಿವೆ ಎಂದಿದ್ದರು. ಅದರಂತೆ ಜಪಾನ್​ ಮತ್ತು ಯುನೈಟೆಡ್​ ಕಿಂಗ್​ಡಮ್​ನಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಯಿತು. ಯುಕೆಯಲ್ಲಿ ಕಳೆದ ವರ್ಷದ ಕೊನೆಯಲ್ಲಿ ಹೆಚ್ಚಿನ ಹಣದುಬ್ಬರ ಮತ್ತು ಜೀವನ ವೆಚ್ಚದ ಬಿಕ್ಕಟ್ಟಿನಿಂದ ಆರ್ಥಿಕ ಹಿಂಜರಿತ ಉಂಟಾಯಿತು. 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಒಟ್ಟು ದೇಶೀಯ ಉತ್ಪನ್ನವು ಶೇ. 0.3 ರಷ್ಟು ಕಡಿಮೆಯಾಗಿ, ದೇಶದ ಆರ್ಥಿಕತೆಯನ್ನು ಹಿಂಜರಿತದಲ್ಲಿ ಇರಿಸಿತು. ಜಪಾನ್‌ನ ಆರ್ಥಿಕತೆಯು ಸಹ ಸತತವಾಗಿ ಎರಡು ತ್ರೈಮಾಸಿಕಗಳವರೆಗೆ ಕುಗ್ಗಿತು. 2023ರ ಕೊನೆಯ ಮೂರು ತಿಂಗಳಲ್ಲಿ ದೇಶದ GDP ಶೇಕಡಾ 0.4 ರಷ್ಟು ಕುಗ್ಗಿತು. ವಿಶ್ವದ ಅತಿದೊಡ್ಡ ಆರ್ಥಿಕತೆಗಳ ಪಟ್ಟಿಯಲ್ಲಿ ಜರ್ಮನಿ ನಾಲ್ಕನೇ ಸ್ಥಾನಕ್ಕೆ ಕುಸಿಯಿತು. ಈ ಎರಡು ರಾಷ್ಟ್ರಗಳು ಜಾಗತಿಕವಾಗಿ ಆರ್ಥಿಕ ಶಕ್ತಿ ಎನಿಸಿಕೊಂಡಿವೆ. ಆದರೆ, ಇದೀಗ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿವೆ.

ಹವಾಮಾನ ಬದಲಾವಣೆ

ಅತಿಯಾದ ಮಾಲಿನ್ಯ ಮತ್ತು ನೈಸರ್ಗಿಕ ಸಂಪನ್ಮೂಲಗಳ ದುರ್ಬಳಕೆಯಿಂದಾಗಿ ಹವಾಮಾನ ಬದಲಾವಣೆಗಳು ಮತ್ತು ಪಾದರಸದ ಮಟ್ಟವು ಹೆಚ್ಚಾಗುತ್ತದೆ ಎಂದು ವಂಗಾ ಜಗತ್ತಿಗೆ ಎಚ್ಚರಿಕೆ ನೀಡಿದರು. ಸೈನ್ಸ್ ಅಡ್ವಾನ್ಸ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಜಾಗತಿಕವಾಗಿ ಬಿಸಿಗಾಳಿ (ಹೀಟ್​ ವೇವ್ಸ್​) ಶೇ. 67 ರಷ್ಟು ಹೆಚ್ಚಾಗಿದೆ. 40 ವರ್ಷಗಳ ಹಿಂದೆ ದಾಖಲಾದ ತಾಪಮಾನಕ್ಕೆ ಹೋಲಿಸಿದರೆ ಈ ಬಿಸಿಗಾಳಿ ತುಂಬಾ ಹೆಚ್ಚಾಗಿದೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ. ಹವಾಮಾನ ಬದಲಾವಣೆಯಿಂದಾಗಿ ನೈಸರ್ಗಿಕ ವಿಕೋಪಗಳು ಸಂಭವಿಸಲಿವೆ ಎಂದು ಭವಿಷ್ಯ ನುಡಿದಿದ್ದರು. ಅವರು ಹೇಳಿದಂತೆ ಹೊಸ ವರ್ಷದ ಆರಂಭದಲ್ಲೇ ಸೂರ್ಯೋದಯದ ನಾಡು ಜಪಾನ್​ 7.6 ತೀವ್ರತೆಯ ಪ್ರಬಲ ಭೂಕಂಪಕ್ಕೆ ನಲುಗಿತು. ಸರಣಿ ಭೂಕಂಪನಗಳಿಂದ ಸುನಾಮಿ ಭೀತಿ ಆವರಿಸಿದ್ದಲ್ಲದೆ, ಭೂಕಂಪನಕ್ಕೆ ನೂರಾರು ಮಂದಿ ಬಲಿಯಾದರು. ಸುಮಾರು 200ಕ್ಕೂ ಅಧಿಕ ಮಂದಿ ಕಣ್ಮರೆ ಸಹ ಆದರು. ಇದಿಷ್ಟೇ ಅಲ್ಲದೆ, ತೈವಾನ್​ನಲ್ಲಿಯೂ ಪ್ರಬಲ ಭೂಕಂಪನ ಸಂಭವಿಸಿತು. 25 ವರ್ಷಗಳ ಬಳಿಕ ತೈವಾನ್​ನಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕೆಲ ಮಂದಿ ಪ್ರಾಣ ಕಳೆದುಕೊಂಡಿದ್ದು, ಕಟ್ಟಡಗಳು ನೆಲಕ್ಕುರುಳಿದವು. ಟೈಫೂನ್ ಪೂರ್ವ ಏಷ್ಯಾದ ದೇಶವನ್ನು ಧ್ವಂಸಗೊಳಿಸಿದ್ದರಿಂದ ವಿಯೆಟ್ನಾಂ ಪ್ರಬಲವಾದ ಗಾಳಿ ಮತ್ತು ಮಳೆಗೆ ನಲುಗಿತು. ಅಲ್ಲದೆ, ಫ್ರಾನ್ಸ್​ನಲ್ಲಿ ಇಂದೆಂದು ಕಾಣದ ಮಳೆಯನ್ನು ಸ್ವೀಕರಿಸಿತು. ವೇಲೆನ್ಸಿಯಾ, ಸ್ಪೇನ್‌ನಲ್ಲಿ ಅಭೂತಪೂರ್ವ ಪ್ರವಾಹಗಳು ಮತ್ತು ಯುರೋಪ್ ಮತ್ತು ಅಮೆರಿಕಗಳಲ್ಲಿ ವಿನಾಶಕಾರಿ ಬಿರುಗಾಳಿಗಳು ಸೇರಿದಂತೆ ಹವಾಮಾನ ವೈಪರೀತ್ಯಗಳು ಭೂಗೋಳವನ್ನು ಧ್ವಂಸಗೊಳಿಸಿವೆ.

ವೈದ್ಯಲೋಕದಲ್ಲಿ ಮಹತ್ವದ ಆವಿಷ್ಕಾರ

ಕ್ಯಾನ್ಸರ್ ಸೇರಿದಂತೆ ಗುಣಪಡಿಸಲಾಗದ ಕಾಯಿಲೆಗಳಿಗೆ ಹೊಸ ಮದ್ದು ಸಿಗಲಿದೆ ಎಂದು ಬಾಬಾ ವಂಗಾ ಅವರು ಹೇಳಿದ್ದರು. ಅದರಂತೆ ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ ರಷ್ಯಾ ದೇಶ ಕ್ಯಾನ್ಸರ್​ಗೆ ಲಸಿಕೆ ಕಂಡುಹಿಡಿದಿದೆ. ಈ ಸಂಗತಿಯನ್ನು ರಷ್ಯಾದ ಸುದ್ದಿ ಸಂಸ್ಥೆ ಟಾಸ್ ಹೇಳಿಕೊಂಡಿದೆ. ಲಸಿಕೆಯು 2025 ರ ಆರಂಭದಲ್ಲಿ ಸಾರ್ವಜನಿಕರಿಗೆ ಲಭ್ಯವಿರುತ್ತದೆ ಎಂದು ತಿಳಿಸಿದೆ. ರಷ್ಯಾದ ಆರೋಗ್ಯ ಸಚಿವಾಲಯದ ವಿಕಿರಣಶಾಸ್ತ್ರ ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ದೇಶಕ ಆಂಡ್ರೆ ಕಪ್ರಿನ್, ರಷ್ಯಾ ತನ್ನದೇ ಆದ ಎಂಆರ್​ಎನ್​ಎ ಲಸಿಕೆಯನ್ನು ಕ್ಯಾನ್ಸರ್ ವಿರುದ್ಧ ಅಭಿವೃದ್ಧಿಪಡಿಸಿದೆ ಎಂದು ಮಾಹಿತಿ ನೀಡಿದರು. ಹೀಗಾಗಿ ವೈದ್ಯಕೀಯ ಲೋಕದಲ್ಲಿ ಇದೊಂದು ಮಹತ್ವದ ಆವಿಷ್ಕಾರ ಆಗಿದೆ. ಆಲ್ಜೈಮರ್​ ಅಥವಾ ಮರೆವಿನ ಕಾಯಿಲೆಗೂ ಚಿಕಿತ್ಸೆ ಲಭ್ಯವಿರಲಿದೆ ಎಂದು ಬಾಬಾ ವಂಗಾ ಹೇಳಿದ್ದರು. ಅದರಂತೆ ನಿಜವಾದ ಪ್ರಗತಿ ಕಂಡುಬಂದಿದೆ. ಯುಕೆಯಲ್ಲಿ ನಡೆದ ಕ್ಲಿನಿಕಲ್ ಪ್ರಯೋಗಗಳು ರೋಗ ಗುಣಪಡಿಸುವ ಚಿಕಿತ್ಸೆಗಳ ಭರವಸೆಯ ಫಲಿತಾಂಶಗಳನ್ನು ತೋರಿಸಿವೆ.

ಸೈಬರ್​ ದಾಳಿ

ಡಿಜಿಟಲ್ ಕ್ರಾಂತಿ ಮತ್ತು ಕೃತಕ ಬುದ್ಧಿಮತ್ತೆ ಯುಗವು ದಶಕಗಳಷ್ಟು ದೂರದಲ್ಲಿರುವಾಗಲೇ ಮತ್ತು ಆ ಸಮಯದಲ್ಲಿ ಶೈಶವಾವಸ್ಥೆಯಲ್ಲಿದ್ದ ಇಂಟರ್ನೆಟ್ ಮುಂದೊಂದು ದಿನ ಜಗತ್ತನೇ ಆಳುತ್ತದೆ ಮತ್ತು ಜನರ ಅಸ್ತ್ರವಾಗಿ ಹೇಗೆ ರೂಪಾಂತರಗೊಳ್ಳುತ್ತದೆ ಎಂಬುದರ ಕುರಿತು ವಂಗಾ ಮೊದಲೇ ಗ್ರಹಿಸಿದ್ದರು. ಇದೇ ಡಿಜಿಟಲ್,​ ಕಿಡಿಗೇಡಿಗಳ ಪ್ರಮುಖ ಅಸ್ತ್ರವಾಗಿ ಸೈಬರ್ ದಾಳಿಗಳನ್ನು ನಡೆಸಲು ಮತ್ತು ಭದ್ರತಾ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ಬಾಬಾ ವಂಗಾ ಅತೀಂದ್ರಿಯ ಭವಿಷ್ಯ ನುಡಿದಿದ್ದರು. ಅದು ಕೂಡ ನಿಜವಾಗಿದೆ. ಈ ವರ್ಷ ಟೆಕ್​ ದೈತ್ಯ ಕಂಪನಿಗಳಾದ ಆ್ಯಪಲ್​ ಹಾಗೂ ಮೆಟಾ ಸೇರಿದಂತೆ ಅನೇಕ ಕಂಪನಿಗಳು ಭದ್ರತಾ ಉಲ್ಲಂಘನೆಯನ್ನು ವರದಿ ಮಾಡಿವೆ. ಟೆಲಿ ಮ್ಯೂನಿಕೇಷನ್​ ದೈತ್ಯ AT&T ಹಂಚಿಕೊಂಡ ವರದಿಯ ಪ್ರಕಾರ ವೆಬ್‌ನಲ್ಲಿ ಪತ್ತೆಯಾದ ಡೇಟಾ ಸೆಟ್ 7.6 ಮಿಲಿಯನ್ ಪ್ರಸ್ತುತ ಮತ್ತು 65.4 ಮಿಲಿಯನ್ ಮಾಜಿ ಖಾತೆದಾರರ ಸೂಕ್ಷ್ಮ ಮಾಹಿತಿ ಮತ್ತು ಸಾಮಾಜಿಕ ಭದ್ರತೆ ಸಂಖ್ಯೆಗಳನ್ನು ಬಹಿರಂಗಪಡಿಸಿದೆ ಎಂದು ಹೇಳಿಕೊಂಡಿದೆ.

ಬಾಬಾ ವಂಗಾರ ಯಾವ ಭವಿಷ್ಯ ಸುಳ್ಳಾಯಿತು?

ಅಂದಹಾಗೆ ಈ ವರ್ಷಕ್ಕೆ ಬಾಬಾ ವಂಗಾ ಅವರು ಹಲವಾರು ಭವಿಷ್ಯವಾಣಿಗಳು ನಿಜವಾಗಿದ್ದರೂ ಒಂದು ಭವಿಷ್ಯ ನಿಜವಾಗಿಲ್ಲ. ಅದೇನೆಂದರೆ, ಒಂದು ಶಕ್ತಿಶಾಲಿ ದೇಶವು ಜೈವಿಕ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತದೆ ಎಂದಿದ್ದರು. ಜಾಗತಿಕ ಉದ್ವಿಗ್ನತೆಗಳು ಹೆಚ್ಚಿರುವಾಗ, ವಿಶೇಷವಾಗಿ ಯೂಕ್ರೇನ್‌ನ ಮೇಲೆ ರಷ್ಯಾದ ಯುದ್ಧ ನಡೆಯುತ್ತಿರುವ ಸಂದರ್ಭದಲ್ಲೂ ಯಾವ ದೇಶವೂ ಜೈವಿಕ ಶಸ್ತ್ರಾಸ್ತ್ರವನ್ನು ಬಳಸಿಲ್ಲ.

5079ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ

ಇಡೀ ಜಗತ್ತಿನ ನೂರಾರು ವರ್ಷಗಳ ಹಾಗುಹೋಗುಗಳ ಬಗೆಗೆ ಭವಿಷ್ಯ ನುಡಿದಿರುವ ಬಾಗಾ ವಂಗಾ ಪ್ರಕಾರ, 5079ಕ್ಕೆ ಜಗತ್ತು ಕೊನೆಯಾಗುತ್ತದೆ. 2028ರಲ್ಲಿ ಮಾನವರು ಶುಕ್ರವನ್ನು ಭೇಟಿ ಮಾಡುತ್ತಾರೆ, 2033ರಲ್ಲಿ ಧ್ರುವೀಯ ಮಂಜುಗಡ್ಡೆಗಳು ಕರಗಿ, ಜಾಗತಿಕವಾಗಿ ಸಮುದ್ರ ಮಟ್ಟವು ವೇಗವಾಗಿ ಏರುತ್ತೆ, ಮುಸ್ಲಿಮರು 2043 ರಲ್ಲಿ ಯುರೋಪ್ ಅನ್ನು ಆಳುತ್ತಾರೆ, 2076ರಲ್ಲಿ ಕಮ್ಯುನಿಸಂ ಪ್ರಪಂಚದಾದ್ಯಂತ ಹರಡುತ್ತದೆ, 2130ರಲ್ಲಿ ಮಾನವರು ಅನ್ಯಗ್ರಹ ಜೀವಿಗಳೊಂದಿಗೆ ಸಂಪರ್ಕ ಹೊಂದುತ್ತಾರೆ, 2170ರಲ್ಲಿ ಭೂಮಿಯ ಬಹುತೇಕ ಭಾಗಗಳಲ್ಲಿ ಬರ ಉಂಟಾಗುತ್ತದೆ, 3005ರಲ್ಲಿ ಭೂಮಿಯು ಮಂಗಳದ ನಾಗರಿಕತೆಯೊಂದಿಗೆ ಯುದ್ಧದಲ್ಲಿ ತೊಡಗುತ್ತದೆ, 3797ರಲ್ಲಿ ವಾಸಯೋಗ್ಯವಲ್ಲದ ಕಾರಣ ಮಾನವರು ಭೂಮಿಯಿಂದ ಸ್ಥಳಾಂತರವಾಗುತ್ತಾರೆ ಮತ್ತು 5079 ರಲ್ಲಿ ಬ್ರಹ್ಮಾಂಡವು ಕೊನೆಗೊಳ್ಳುತ್ತದೆ ಎಂದು ಬಾಂಬಾ ವಂಗಾರ ಭವಿಷ್ಯದ ಭವಿಷ್ಯವಾಣಿಗಳಾಗಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net