ನಿರ್ಮಲ ಚಿತ್ತರು ಧನ್ಯರು

esu
Published on
ನಿರ್ಮಲ ಮನಸ್ಸಿನವರಿಗೆ ದೊರೆಯುವ ಫಲ ಅತ್ಯಮೂಲ್ಯವಾದುದು. ಏಕೆಂದರೆ, ಅವರು ದೇವರನ್ನು ನೋಡುವ ಭಾಗ್ಯ ಅತಿ ಶ್ರೇಷ್ಠವಾದುದು. ನಿರ್ಮಲ ಚಿತ್ತರಿಗೆ ಇದು ಸಾಧ್ಯವೆಂದಾಗ ಬೇರೆಯವರಿಗೆ ಅದು ಅಸಾಧ್ಯವೆನ್ನುವುದೂ ಸ್ಪಷ್ಟ. ಕ್ರಿಸ್ತನ ಈ ಮಾತಿನ ಅಗ್ನಿಪರೀಕ್ಷೆ ಇರುವುದೇ ಇದರ ಆಚರಣೆಯಲ್ಲಿ. ಈ ಮಾತು ಹೆಜ್ಜೆ ಹೆಜ್ಜೆಗೂ ನಮ್ಮನ್ನು ತಟ್ಟಿ ಎಚ್ಚರಿಸುವಂತಾಗಬೇಕು. ಆ ಎಚ್ಚರಿಕೆಯಲ್ಲಿ ನಮ್ಮನ್ನು ನಾವು ಪ್ರಶ್ನಿಸು ವಂತೆ ಮಾಡಬೇಕು. ಇವುಗಳನ್ನೆಲ್ಲ ನಾವು ಒಳಪಡಿಸಿಕೊಂಡು ಗೆದ್ದಾಗ ಮಾತ್ರ ಕ್ರಿಸ್ತನ ಈ ಆಶಯ ಸಾಧ್ಯವೆನಿಸುವುದು. ಬಹಿರಂಗ ಶುಧಿ್ಧಂತ ಅಂತರಂಗ ಶುಧಿ್ಧುೕ ಬಹು ಶ್ರೇಷ್ಠ. ಬಹಿರಂಗದ ಶುದ್ದಿಯಿಂದ ದೇವರನ್ನು ತಲುಪಲು ಆಗದು. ದೇವರು ಮೆಚ್ಚುವುದು ಅಂತರಂಗದ ಶುಧಿ್ಧುನ್ನು ಮಾತ್ರ. ಪ್ರಚಾರ ಪ್ರಿಯ ಮನಸ್ಸಿನಿಂದ ನಾವು ಕೈಗೊಳ್ಳುವ ಭಜನೆ, ಹಾಡು, ಸಂಗೀತ, ಆಚರಿಸುವ ಪೂಜಾ ವಿಧಿ ವಿಧಾನಗಳು, ಆರಾಧನೆಗಳು, ಅರ್ಪಿಸುವ ಕಾಣೆಕೆಗಳು, ಹರಕೆಗಳು, ಇವು ಯಾವುವೂ ನಿಜವಾದ ಫಲ ನೀಡಲಾರವು.

ನಮ್ಮ ದೈನಂದಿನ ಬದುಕು ಮತ್ತು ನಂಬಿಕೆ ನಿಷ್ಠೆಗಳಲ್ಲಿ ನಿರ್ಮಲ ಚಿತ್ತ ಇರಬೇಕಾದ್ದು ಬಹು ಮುಖ್ಯ. ಅದು ದೇವರನ್ನು ದರ್ಶಿಸಲು ನಮಗೆ ನೆರವಾಗುತ್ತದೆ ಎಂಬುದು ಬಹು ಅನನ್ಯ. ಅರುಣೋದಯದ ಬಳಿಕ ಸೂರ್ಯೋದಯವಾಗುವಂತೆ, ಮನಸ್ಸಿನಲ್ಲಿ ನಿರ್ಮಲತೆ ಮೂಡಿದ ನಂತರವೇ ಬದುಕಿನಲ್ಲಿ ಬೆಳಕನ್ನು ಕಾಣುವುದು. ವಿಕಾರಗಳಿಲ್ಲದ ನಿರ್ಮಲಾಕಾರದ ತಿಳಿ ಮನಸ್ಸು ನಮಗೆ ನೀಡುವ ಸಂಭ್ರಮ ಅಷ್ಟಿಷ್ಟಲ್ಲ. ಯೇಸುವಿನ ಕಾಲದಲ್ಲಿ, ದೇವಾಲಯದ ಹುಂಡಿಯೊಳಗೆ ಶ್ರೀಮಂತರು, ಎಲ್ಲರೂ ನೋಡಲೆಂದೇ ರಾಶಿ ರಾಶಿ ಕಾಣಿಕೆಗಳನ್ನು ನೀಡುವಾಗ, ಒಬ್ಬ ಬಡ ವಿಧವೆ ಯಾರಿಗೂ ಕಾಣಿಸದಂತೆ ತನ್ನಲ್ಲಿದ್ದ ಹಳೆ ದುಗ್ಗಾಣಿಯನ್ನು ದೇವರಿಗೆ ಅರ್ಪಿಸಿದ್ದು ಸರ್ವಶ್ರೇಷ್ಠವಾದ ದಾನ. ನಿರ್ಮಲ ಚಿತ್ತದ ಶಕ್ತಿಗೆ ಕಾಲ, ದೇಶಗಳ ಪರಿವೆ ಇರುವುದಿಲ್ಲ. ಇಂತಹ ಮನಸ್ಸುಗಳು ಮತ್ತು ಅಂತಹ ಮನಸ್ಸುಳ್ಳ ಬದುಕುಗಳಿಗೆ ಎಂತಹ ಕಾಲವೂ ಸಮನಾದುದೇ. ಅಂತಹ ನಿರ್ಮಲ ಚಿತ್ತದ ಕಾಯಕಗಳು ಎಲ್ಲೆಲ್ಲೂ ಪ್ರಶ್ನಾತೀತವಾಗಿಯೇ ಇರುತ್ತವೆ. ಅಂಥವರೇ ದೇವರನ್ನು ಕಾಣುವ ಸುಯೋಗ ಪಡೆಯುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net