ನೀತಿಗಾಗಿ ಹಸಿದವರು ಧನ್ಯರು

3-vij-4a-yesu prathime teravu
Published on

ಹಸಿವು ಮತ್ತು ಬಾಯಾರಿಕೆಗಳು ಎಲ್ಲಾ ಕಾಲದಲ್ಲಿ ಮತ್ತು ಎಲ್ಲಾ ಸ್ಥಳಗಳಲ್ಲಿ ಒಂದೇ ರೀತಿಯಲ್ಲಿ ಇರುವುದಿಲ್ಲ. ಇವು ಸಂದರ್ಭ ಮತ್ತು ಸನ್ನಿವೇಶಗಳಿಗೆ ಸಂಬಂಧಿಸಿದ ಪದಗಳಾಗಿವೆ. ಯೇಸು ಕ್ರಿಸ್ತನ ಸಂದರ್ಭದಲ್ಲಿ ಹಸಿವು ಮತ್ತು ಬಾಯಾರಿಕೆಗಳಿಗೆ ಅತಿ ಗಾಢವಾದ ಅರ್ಥಗಳಿದ್ದವು. ಆದರೆ, ಈಗಿನ ದಿನಮಾನಗಳಲ್ಲಿ ಇವುಗಳಿಗೆ ಬೇರೆಯೇ ಅರ್ಥವಿದೆ. ಆಗಿನ ಪ್ಯಾಲೆಸ್ತೀನ್ ಹಾಗೂ ಇಸ್ರಯೇಲ್ ಜನರಲ್ಲಿ ಬಹುತೇಕರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ಅವರಲ್ಲಿ ಮನೆ ಮಾಡಿದ್ದ ಕಿತ್ತು ತಿನ್ನುವ ಹಸಿವು ಮತ್ತು ಒಣಗಿದ ಗಂಟಲು. ಹಸಿವು ಆಹಾರಕ್ಕಾಗಿ ಹಾಗೂ ಒಣಗಿದ ಗಂಟಲು ಬಾಯಾರಿಕೆಯಿಂದ ಗಂಟಲು ಒದ್ದೆ ಮಾಡುವಷ್ಟು ನೀರಿಗಾಗಿಯೂ ಹಂಬಲಿಸಬೇಕಾಗಿತ್ತು. ವಾಸ್ತವವಾಗಿ ಆ ಸ್ಥಿತಿಯನ್ನು ಊಹಿಸುವುದೇ ಕಷ್ಟವಾಗಿತ್ತು. ಕಾರಣ: ಅಲ್ಲಿಯ ಮರುಭೂಮಿ ಆವರಿಸಿದ ಬಿರು ಬಿಸಿಲಿನ ಪ್ರದೇಶಗಳು. ತೀವ್ರ ಬಿಸಿಲು ಮಾತ್ರವಲ್ಲ, ಬೀಸುವ ಗಾಳಿಯೂ ಬಿಸಿಯಾಗಿಯೇ ಬೀಸುತ್ತಿತ್ತು. ಪರಿನಾಮವಾಗಿ ಒಣಗುವ ಗಂಟಲು! ಇಂತಹ ಅನೇಕ ಕಠಿಣ ಸನ್ನಿವೇಶಗಳನ್ನು ಆ ಜನ ಎದುರಿಸಬೇಕಾಗಿತ್ತು. ಈ ಸನ್ನಿವೇಶವನ್ನು ಉದಾಹರಣೆಯಾಗಿ ಇಟ್ಟುಕೊಂಡು ಕ್ರಿಸ್ತನು ಹೇಳುವ ನೀತಿ ಇದು:

ಹೇಗೆ ಹಸಿವು, ಬಾಯಾರಿಕೆಗಳಿಗೆ ಜನ ತಲ್ಲಣಗೊಳ್ಳುತ್ತಾರೋ ಅದೇ ರೀತಿಯಲ್ಲಿ ನೀತಿ, ನ್ಯಾಯಕ್ಕಾಗಿ ಹಸಿವಾಗಬೇಕು, ಬಾಯಾರಿಕೆಯಾಗಬೇಕು. ಅದನ್ನು ನೆರವೇರಿಸಲು ಯಾರು ಶ್ರಮಿಸುತ್ತಾರೋ ಅವರು ಧನ್ಯರಾಗುತ್ತಾರೆ ಎಂದು ಯೇಸುಕ್ರಿಸ್ತ ಹೇಳುತ್ತಾನೆ. ಆದರೆ, ದೈಹಿಕ ಹಸಿವು ಮತ್ತು ಬಾಯಾರಿಕೆಗಳನ್ನು ನೀಗಿಸಿಕೊಳ್ಳುವ ರೀತಿಯಲ್ಲಿ ನೀತಿ, ನ್ಯಾಯಗಳ ಹಸಿವನ್ನು ಪೂರೈಸಿಕೊಳ್ಳಲಾಗುವುದೇ? ಇಲ್ಲ. ಇವುಗಳ ಈಡೇರಿಕೆಗಾಗಿ ಮನುಷ್ಯ ಹೋರಾಟವನ್ನೇ ಕೈಗೊಳ್ಳ ಬೇಕಾಗುತ್ತದೆ. ಅಂತಹ ಹೋರಾಟದಲ್ಲಿ ಯಶಸ್ವಿಯಾಗಿ ನೀತಿ, ನ್ಯಾಯಗಳನ್ನು ಎತ್ತಿ ಹಿಡಿಯುವವರು ನಿಜಕ್ಕೂ ಧನ್ಯರೆನಿಸಿಕೊಂಡು ತೃಪ್ತಿ ಹೊಂದುತ್ತಾರೆ. ಇದನ್ನೇ ಕ್ರಿಸ್ತ ಪ್ರತಿ ಪಾದಿಸುತ್ತ ಇಂತಹ ಮಾರ್ಗ ತುಳಿದು ಗೆಲ್ಲುವವರು ಜನರಿಂದ ಮಾತ್ರವಲ್ಲದೆ ದೈವದಿಂದಲೂ ಧನ್ಯತೆ ಪಡೆದು ಸಾರ್ಥಕತೆ ಹೊಂದುತ್ತಾರೆ ಎನ್ನುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net