ಸಮಾಧಾನಪಡಿಸುವವರು ಧನ್ಯರು

Peace
Published on

ಶಾಂತಿ, ಸಮಾಧಾನ, ವಿಶ್ವಾಸ, ಪ್ರೀತಿ ಇವು ಒಂದಕ್ಕೊಂದು ಬಹುಗಟ್ಟಿಯಾಗಿ ಹೆಣೆದುಕೊಂಡಿರುವ ಜೀವದ್ರವ್ಯಗಳು. ಇವು ನಮ್ಮೊಳಗಿನ ಗೂಡುಗಳಿಗೆ ತೀರಾ ಬೇಕಾಗಿರುವ ಮನಸ್ಥಿತಿಗಳು.

ಒಬ್ಬಾತನಿಗೆ ತನ್ನಲ್ಲಿಯೇ ಸಮಾಧಾನವಿಲ್ಲದಿದ್ದಲ್ಲಿ, ಆತ ಇತರರೊಡನೆ ಹೇಗೆ ಸಮಾಧಾನದಿಂದ ಇರಲು ಸಾಧ್ಯ? ಶಾಂತಿ, ಸಮಾಧಾನಗಳೆಂಬ ಈ ಸುಂದರ ಅಲೆಗಳು ನಮ್ಮ ಕುಟುಂಬ, ನೆರೆಹೊರೆ, ಊರು, ದೇಶ, ಜಗತ್ತು ಹೀಗೆ ಎಲ್ಲೆಡೆಗಳಲ್ಲೂ ಅಗತ್ಯವಾದ ಒಂದು ಅಮೂಲ್ಯ ಮನಸ್ಥಿತಿ. ಅಸಮಾಧಾನ, ಘರ್ಷಣೆ, ಗಲಭೆ, ಮನಸ್ತಾಪ, ಯುಧ್ಧ, ಕಲಹ ಇಂತಹ ಆತಂಕದ ಸ್ಥಿತಿಗಳನ್ನು ತಿಳಿಗೊಳಿಸುವುದು ಸುಲಭದ ಕೆಲಸವಲ್ಲ. ಎಲ್ಲರಿಗೂ ಇದು ಸಾಧ್ಯವಿಲ್ಲ.

ಇಂದಿನ ದಿನಮಾನಗಳಲ್ಲಿ ಇಂತಹ ಶಾಂತಿ- ಸಮಾಧಾನ ನೆಲೆಗೊಳಿಸುವ ಪ್ರಯತ್ನಗಳನ್ನು ಕೈಗೊಳ್ಳುವವರ ಸಂಖ್ಯೆಯೂ ಕಡಿಮೆ. ಏಕೆಂದರೆ ಅದು ಅಷ್ಟು ನಿರಾತಂಕವಾದ ಕಾರ್ಯವಲ್ಲ. ಅದಕ್ಕಾಗಿಯೇ ಯೇಸು ಕ್ರಿಸ್ತ ಶಾಂತಿ ಪ್ರಿಯರನ್ನು, ಶಾಂತಿ ಸಮಾಧಾನಗಳನ್ನು ಸ್ಥಾಪಿಸುವವರನ್ನು ದೇವರ ಮಕ್ಕಳೆಂದು ಕರೆದಿರುವುದು ವಿಶಿಷ್ಟವಾಗಿದೆ. ಮನುಷ್ಯ ಸಂಬಂಧಗಳು ಉಳಿದಿರುವುದೇ ಈ ಶಾಂತಿ ಮತ್ತು ಸಮಾಧಾನಗಳು ನಮ್ಮಲ್ಲಿನ್ನೂ ಅಳಿಯದೇ ಉಳಿದಿರುವುದರಿಂದ.

ಶಾಂತಿ, ಪ್ರೀತಿ, ಸಮಾಧಾನಗಳು ನಮ್ಮ ನಡುವೆ ಇಲ್ಲವಾದಾಗ, ನಮ್ಮ ಬಾಳಿನ ಬವಣೆ ಹೇಳತೀರದಾಗುತ್ತದೆ. ಇಂತಹ ಭಣಗುಡುವ ಸಂದರ್ಭಗಳಲ್ಲಿ ಜಗತ್ತಿನ ಅಂಗಳದಲ್ಲಿ ದ್ವೇಷದ ದಳ್ಳುರಿಗಳು ಬೆಳೆಯುತ್ತವೆ. ಇವು ಭಯೋತ್ಪಾದನೆಗಳಿಗೆ ನೆಲೆಗಳೂ ಆಗಿ ಮಾರ್ಪಡಬಹುದು. ಇಂತಹ ಅಸಹನೀಯ ಹಾಗೂ ಭಯಂಕರ ಸಂದರ್ಭಗಳಲ್ಲಿ ಧೈರ್ಯದಿಂದ ಮುಂದೆ ಬಂದು ಶಾಂತಿಯ ಕನಸುಗಳನ್ನು ಕಟ್ಟಿ, ಅವನ್ನು ನನಸಾಗಿಸುವವರು ನಿಜವಾಗಿಯೂ ದೇವರ ಮಕ್ಕಳೇ ಸರಿ!

ನಾವು ರ್ದಜಿಗಳಂತೆ ತುಂಡು ತುಂಡಾದ ಬಟ್ಟೆಗಳನ್ನು ಹೊಲಿದು ಸುಂದರ ವಸ್ತ್ರಗಳನ್ನಾಗಿಸುವ ಸೂಜಿಗಳಾಗಬೇಕೇ ಹೊರತು, ಜಗತ್ತನ್ನು ತುಂಡು ತುಂಡಾಗಿಸಿ ಶಾಂತಿಯನ್ನು ಕದಡುವಂತಹ ಕತ್ತಿ, ಕತ್ತರಿ ಅಥವಾ ಯುಧ್ಧದ ಆಯುಧಗಳಾಗಬಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net