ಮೆಟ್ರೋ ಅನುದಾನದ ಲೆಕ್ಕದಲ್ಲಿ ರಾಜ್ಯ ಸರ್ಕಾರದಿಂದ ಹಸಿ ಸುಳ್ಳು: ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ! | Tejasvi Surya on Metro

Tejasvi Surya
ಬಿಜೆಪಿ ಸಂಸದ ತೇಜಸ್ವಿ ಸೂರ್ಯ
Published on: 

Bengaluru Metro: ಬೆಂಗಳೂರು ಮೆಟ್ರೋ ಅನುದಾನದ ವಿಚಾರದಲ್ಲಿ ರಾಜ್ಯ ಸರ್ಕಾರ ಜನರ ದಾರಿತಪ್ಪಿಸುತ್ತಿದ್ದು, ಕೇಂದ್ರದ ಗ್ಯಾರಂಟಿ ಮೇಲೆ ಪಡೆದ ವಿದೇಶಿ ಸಾಲವನ್ನು ತನ್ನದೇ ಕೊಡುಗೆ ಎಂದು ಬಿಂಬಿಸಿಕೊಳ್ಳುತ್ತಿದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಗಂಭೀರ ಆರೋಪ ಮಾಡಿದ್ದಾರೆ.

ಬಿಎಂಆರ್‌ಸಿಎಲ್ ಕೇಂದ್ರ ಹಾಗೂ ರಾಜ್ಯದ ಸಮಪಾಲು ಯೋಜನೆಯಾಗಿದ್ದು, ಕೇಂದ್ರದ ಗ್ಯಾರಂಟಿ ಮೇಲೆ ವಿದೇಶಿ ಸಾಲ ಪಡೆಯಲಾಗುತ್ತದೆ. ಹೀಗಿದ್ದೂ ಮೆಟ್ರೋ ವೆಚ್ಚದ ಶೇ. 84 ರಷ್ಟು ರಾಜ್ಯ ಸರ್ಕಾರವೇ ಭರಿಸಿದೆ ಎಂಬ ಬೆಂಗಳೂರು ಅಭಿವೃದ್ಧಿ ಸಚಿವರ ಹೇಳಿಕೆ ಹಾಸ್ಯಾಸ್ಪದ ಎಂದು ಸಂಸದ ತೇಜಸ್ವಿ ಸೂರ್ಯ ಆಕ್ಷೇಪಿಸಿದರು.

ಲೆಕ್ಕಾಚಾರದ ಕುತಂತ್ರ

ಕೇಂದ್ರ ಸರ್ಕಾರದ ಗ್ಯಾರಂಟಿ ಮೂಲಕ ಪಡೆದ 28,000 ಕೋಟಿ ರೂ. ಸಾಲವನ್ನು ರಾಜ್ಯ ಸರ್ಕಾರ ತನ್ನ ಖಾತೆಗೆ ಸೇರಿಸಿಕೊಂಡು 'ಲೆಕ್ಕಾಚಾರದ ಕುತಂತ್ರ' ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋ ಉದ್ಘಾಟನೆಗೆ ಆಗಮಿಸುವ ಒಂದು ದಿನ ಮುಂಚಿತವಾಗಿ ಇಂತಹ ಸುಳ್ಳು ನಿರೂಪಣೆ ಮಾಡಲಾಗುತ್ತಿದೆ ಎಂದು ಸೂರ್ಯ ಆರೋಪಿಸಿದರು.

ಪಿಂಕ್ ಲೈನ್ ಕಾಮಗಾರಿ ವಿಳಂಬಕ್ಕೆ ಕಿಡಿ

ಉದ್ಘಾಟನೆಗೆ ಸಿದ್ಧವಾಗಿರುವ 7.5 ಕಿ.ಮೀ. ಪಿಂಕ್ ಲೈನ್ ಮೆಟ್ರೋ ಕಾಮಗಾರಿಗೆ 12 ವರ್ಷ ತಗುಲಿರುವುದನ್ನು ತೇಜಸ್ವಿ ಸೂರ್ಯ ಟೀಕಿಸಿದ್ದಾರೆ. ಕಾಂಗ್ರೆಸ್ ಆಡಳಿತದ 9.5 ವರ್ಷಗಳಲ್ಲಿ ವರ್ಷಕ್ಕೆ ಕೇವಲ 700 ಮೀಟರ್ ಕೆಲಸ ನಡೆದಿದೆ. ಆದರೆ, ಕೋವಿಡ್ ಸಂಕಷ್ಟದ ನಡುವೆಯೂ ಬಿಜೆಪಿ ಅಧಿಕಾರದಲ್ಲಿದ್ದ ಅಲ್ಪ ಅವಧಿಯಲ್ಲೇ ಶೇ. 72 ರಷ್ಟು ಸುರಂಗ ಮಾರ್ಗ ಪೂರ್ಣಗೊಂಡಿದೆ ಎಂದು ಅವರು ಸ್ಪಷ್ಟಪಡಿಸಿದರು.

ಇದನ್ನೂ ಓದಿ: 6 ಜನರಿದ್ದ ಲಿಫ್ಟ್ ದಿಢೀರ್ ಕೈಕೊಟ್ಟಾಗ ಆಗಿದ್ದೇನು? ನಾಸಿಕ್ ಅಪಾರ್ಟ್‌ಮೆಂಟ್‌ನ ಎದೆ ಝಲ್ಲೆನಿಸುವ ಸಿಸಿಟಿವಿ ದೃಶ್ಯ | Lift Accident

ಪ್ರಧಾನಿ ಮೋದಿ ಅವರ ಪ್ರಯತ್ನದಿಂದ ಬೆಂಗಳೂರು ಮೆಟ್ರೋ ಜಾಲ 2014ರಲ್ಲಿದ್ದ 7 ಕಿ.ಮೀ.ನಿಂದ 103 ಕಿ.ಮೀ.ಗೆ ವಿಸ್ತರಣೆಯಾಗಿದೆ ಎಂದು ತೇಜಸ್ವಿ ಸೂರ್ಯ ತಿಳಿಸಿದರು. ರಾಜಕೀಯ ಸಂಘರ್ಷ ಬಿಟ್ಟು ಸಾರ್ವಜನಿಕ ಸಾರಿಗೆಗೆ ಆದ್ಯತೆ ನೀಡುವಂತೆ ಸಿಎಂ ಹಾಗೂ ಸಚಿವರಿಗೆ ಮನವಿ ಮಾಡಿದರು. ಇದೇ ವೇಳೆ, ಸ್ಯಾಮ್ ಪಿತ್ರೋಡಾ ಅವರನ್ನು ಪ್ರಧಾನಿ 'ಸ್ಯಾಮ್ ಭಾಯ್' ಎಂದು ಕರೆದಿದ್ದನ್ನು ಉಲ್ಲೇಖಿಸಿ, ಮೋದಿ ಅವರು ವೈಯಕ್ತಿಕ ಸಂಬಂಧಗಳಿಗೆ ಗೌರವ ನೀಡುತ್ತಾರೆ ಎಂದು ಶ್ಲಾಘಿಸಿದರು.