ಸ್ಫೋಟದ ಸಮಗ್ರ ತನಿಖೆ: ಶೋಭಾ ಕರಂದ್ಲಾಜೆ ಆಗ್ರಹ | Doubts and Fear must clear

Shobha Karandlaje
Published on

ಬೆಂಗಳೂರು: ಕೆ.ಆರ್.ಪುರ ವಿಧಾನಸಭಾ ಕ್ಷೇತ್ರದ ತ್ರಿವೇಣಿ ನಗರದಲ್ಲಿ ಸಂಭವಿಸಿದ ಪ್ರಬಲ ಸ್ಫೋಟದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ಕ್ಷೇತ್ರದ ಶಾಸಕ ಬೈರತಿ ಬಸವರಾಜ ಅವರೊಂದಿಗೆ ಘಟನಾ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಾಹುತದಲ್ಲಿ ಅಮೂಲ್ಯ ಜೀವ ಹಾನಿಯಾಗಿರುವುದು ತೀವ್ರ ನೋವಿನ ವಿಚಾರ. ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ನೀಡುವ ಜತೆಗೆ ಗಾಯಾಳುಗಳ ಚಿಕಿತ್ಸೆಗೆ ನೆರವಾಗಬೇಕು ಎಂದು ಕೋರಿದರು.

ಮನೆಯಲ್ಲಿದ್ದ ಅನಿಲ ಸಿಲಿಂಡರ್‌ನಿಂದ ಸ್ಫೋಟ ಆಗಿದೆಯಾ ? ಅಥವಾ ಬೇರೆ ಯಾವುದಾದರೂ ವಸ್ತುಗಳು ಕಾರಣವೋ ? ಎಂಬ ಸಂಶಯ ಮೂಡಿದೆ. ಬಲಿಷ್ಠ ಸ್ಫೋಟದಿಂದ ಆಸುಪಾಸಿನ ಜತೆಗೆ ಎತ್ತರದ ಮನೆಗಳಿಗೆ ಹಾನಿ, ಜನರು ಭಯ-ಭೀತರಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ತನಿಖೆ ಅಗತ್ಯತೆ

ಘಟನಾ ಸ್ಥಳವು ಸ್ಫೋಟದ ತೀವ್ರತೆಗೆ ಕೈಗನ್ನಡಿ ಹಿಡಿದಿದೆ. ಗ್ಯಾಸ್ ಸಿಲಿಂಡರ್ ಅಥವಾ ಸ್ಫೋಟಕ ವಸ್ತುಗಳು ಕಾರಣವೆ ? ಎಂಬ ಅನುಮಾನ ನಿವಾರಿಸಲು ವಿಧಿವಿಜ್ಞಾನ ತಜ್ಞರನ್ನು ಸೇರಿಸಿಕೊಂಡು ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿದೆ ಎಂದು ಪುನರುಚ್ಚರಿಸಿದರು.

ದುರ್ಘಟನೆಯ ಮೂಲ, ಕಾರಣಕರ್ತರನ್ನು ಪತ್ತೆ ಹಚ್ಚಬೇಕು. ಈ ಸ್ಫೋಟದಿಂದ ಅಕ್ಕಪಕ್ಕದ ಮನೆಗಳಿಗೂ ಹಾನಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಉಚಿತ ಚಿಕಿತ್ಸೆಗೆ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net