ಭೀಕರ ಸ್ಫೋಟಕ್ಕೆ 25 ಬಲಿ, 110ಕ್ಕೂ ಹೆಚ್ಚು ಜನರಿಗೆ ಗಾಯ: ವಿಮಾನ ನಿಲ್ದಾಣದಲ್ಲಿದ್ದ ಪ್ರಧಾನಿ ಟಾರ್ಗೆಟ್​ ಆಗಿದ್ರಾ?!

Blast at Aden airport kills 25, wounds 110 Yemeni officials
Published on

ಸನಾ: ಹೊಸ ವರ್ಷದ ಮುನ್ನಾದಿನ ಯೆಮೆನ್​ನ ಆಡೆನ್ ವಿಮಾನ ನಿಲ್ದಾಣದಲ್ಲಿ ಭಾರಿ ಸ್ಪೋಟ ಸಂಭವಿಸಿದ್ದು, ಕನಿಷ್ಠ 25 ಜನ ಮೃತಪಟ್ಟು 110ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯವಾಗಿ ಮಾನ್ಯವಾಗಿರುವ ಯೆಮೆನ್​ ಸರ್ಕಾರ ತಿಳಿಸಿದೆ.  ಇರಾನ್ ಪ್ರಾಯೋಜಿತ ಹೌತಿ ಬಂಡುಕೋರರು ವಿಮಾನ ನಿಲ್ದಾಣದ ಮೇಲೆ ನಾಲ್ಕು ಕ್ಷಿಪಣಿಗಳನ್ನು ಪ್ರಯೋಗಿಸಿ ಈ ದಾಳಿ ನಡೆಸಿದ್ದಾರೆ ಎಂದು ಯೆಮೆನ್ ಸರ್ಕಾರ ಆರೋಪಿಸಿದೆ. ಆದಾಗ್ಯೂ, ಹೌತಿ ಬಂಡುಕೋರರು ಈ ಕೃತ್ಯದ ಹೊಣೆಗಾರಿಕೆಯನ್ನು ಇನ್ನೂ ಹೊತ್ತುಕೊಂಡಿಲ್ಲ.

ವಿಮಾನದಲ್ಲಿ ಆಗಮಿಸಿದ ಸಂವಹನ ಸಚಿವ ನಗ್ಯುಬ ಅಲ್ -ಅವ್ಗ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಎರಡು ಸ್ಫೋಟಗಳ ಶಬ್ದಗಳನ್ನು ಕೇಳಿದೆ. ಡ್ರೋಣ್ ದಾಳಿ ಇರಬೇಕು ಎಂದುಕೊಂಡಿದ್ದೆವು. ಪ್ರಧಾನ ಮಂತ್ರಿ ಮಯೀನ್ ಅಬ್ದುಲ್​ ಮಲಿಕ್ ಸಯೀದ್ ಮತ್ತು ಇತರರು ಕೂಡಲೇ ವಿಮಾನ ನಿಲ್ದಾಣದಿಂದ ಮಶಿಕ್ ಪ್ಯಾಲೇಸ್​ಗೆ ತೆರಳಿದರು. ಸ್ವಲ್ಪ ಮುಂಚೆ ವಿಮಾನ ಲ್ಯಾಂಡ್ ಆಗಿದ್ದರೂ ಆ ಬಾಂಬ್ ದಾಳಿಗೆ ಈಡಾಗುತ್ತಿತ್ತೇನೋ ಹಾಗಾಗಿದ್ದರೆ ದೊಡ್ಡ ಅನಾಹುತವೇ ಸಂಭವಿಸಿಬಿಡುತ್ತಿತ್ತು ಎಂದು ಅಸೋಸಿಯೇಟೆಡ್ ಪ್ರೆಸ್​ಗೆ ತಿಳಿಸಿದ್ದಾರೆ.

ಪ್ರಧಾನ ಮಂತ್ರಿ ಸಯೀದ್ ಬಳಿಕ ಟ್ವೀಟ್ ಮಾಡಿದ್ದು,ನಾನು ಮತ್ತು ನನ್ನ ಸಂಪುಟ ಸಹೋದ್ಯೋಗಿಗಳು ಯಾವುದೇ ಗಾಯಗಳಾಗದೇ ಸೇಫ್ ಆಗಿದ್ದೇವೆ. ಈ ಉಗ್ರ ಕೃತ್ಯ ಪೈಶಾಚಿಕವಾಗಿದ್ದು, ಖಂಡನೀಯ. ನಮ್ಮ ಯೆಮೆನ್​ಗೆ ಮತ್ತು ಯೆಮೆನ್​ ಜನರಿಗೆ ಇವೆಲ್ಲವೂ ಯುದ್ಧದ ಭಾಗವಾಗಿ ಬಿಟ್ಟಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಈ ನಡುವೆ, ಸಂಪುಟ ಸಚಿವಾಲಯ ಪ್ರತಿಕ್ರಿಯಿಸಿದ್ದು, ಬಂಡುಕೋರರು ನಾಲ್ಕು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ವಿಮಾನ ನಿಲ್ದಾಣದ ಮೇಲೆ ಉಡಾಯಿಸಿದ್ದರು. ಸರ್ಕಾರದ ಶಕ್ತಿ ಕೇಂದ್ರವಾಗಿರುವ ಅರಮನೆ ಮೇಲೂ ಡ್ರೋಣ್ ದಾಳಿಯನ್ನು ಮಾಡಿದ್ದರು ಎಂದು ತಿಳಿಸಿದೆ (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net