

ಇಂದೋರ್ : ದೆಹಲಿಯಿಂದ ಹೊರಟು ಬೆಂಗಳೂರಿಗೆ ಬರ್ತಾ ಇದ್ದ ಇಂಡಿಗೋ ವಿಮಾನ ಇಂದೋರ್ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಗುವಿನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಕಾರಣ, ಪೈಲಟ್ ಈ ನಿರ್ಧಾರ ತೆಗೆದುಕೊಂಡಿದ್ದರು.
ಇಂದೋರ್ನ ಏರ್ಪೋರ್ಟ್ ನಿರ್ದೇಶಕ ಆರ್ಯಾಮಾ ಸನ್ಯಾಲ್ ಸುದ್ದಿಮಾಧ್ಯಮಗಳಿಗೆ ತಿಳಿಸಿರುವ ಮಾಹಿತಿ ಪ್ರಕಾರ, ಬುಧವಾರ ಸಂಜೆ 5.35ಕ್ಕೆ ದೆಹಲಿಯಿಂದ ಬೆಂಗಳೂರಿಗೆ ತೆರಳುತ್ತಿದ್ದ 6ಇ 2248 ಇಂಡಿಗೋ ವಿಮಾನದಲ್ಲಿ ವೈದ್ಯಕೀಯ ತುರ್ತು ಇದೆ. ಇಳಿಯೋದಕ್ಕೆ ಅವಕಾಶ ಮಾಡಿಕೊಡಿ ಎಂಬ ಸಂದೇಶ ಬಂತು. ಸಂಜೆ 5.55ಕ್ಕೆ ವಿಮಾನ ಇಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಆ್ಯಂಬುಲೆನ್ಸ್ ಅನ್ನು ಸಿದ್ಧಪಡಿಸಿಡಲಾಗಿತ್ತು. ಗೋರಖಪುರದ ದುರ್ಗೇಶ್ ಜೈಸ್ವಾಲ್ ಮತ್ತು ಅನು ಜೈಸ್ವಾಲ್ ದಂಪತಿ ತಮ್ಮ ಮಗು ದೇವ್ ಜೈಸ್ವಾಲ್ನನ್ನು ಆಸ್ಪತ್ರೆಗೆ ದಾಖಲಿಸಲು ಓಡೋಡಿ ಬಂದರು. ಅರೆವೈದ್ಯಕೀಯ ಸಿಬ್ಬಂದಿಯ ನೆರವಿನೊಂದಿಗೆ ಅವರನ್ನು ಸಮೀಪದ ಭಾಟಿಯಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಆರೋಗ್ಯ ಸ್ಥಿತಿ ತೀರಾ ಹದಗೆಟ್ಟ ಕಾರಣ ಅವರನ್ನು ಅಲ್ಲಿಂದ ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ಗೆ ಸ್ಥಳಾಂತರಿಸಲಾಗಿತ್ತು.
ಅಲ್ಲಿ ಮಗುವನ್ನು ತಪಾಸಣೆಗೆ ಒಳಪಡಿಸಿದ ವೈದ್ಯರು, ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮಗುವಿನ ಪ್ರಾಣ ಹೋಗಿದೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಶ್ರೀ ಅರಬಿಂದೋ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ನ ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಗುಂಜನ್ ಕೇಲಾ, ಏಳು ತಿಂಗಳ ಗಂಡು ಮಗು ಹೈಡ್ರೋಸೆಫಾಲಸ್ನಿಂದ ಬಳಲುತ್ತಿದ್ದ. ಪಾಲಕರು ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯುತ್ತಿದ್ದರು. ತುರ್ತುಪರಿಸ್ಥಿತಿ ಉಂಟಾದ ಕಾರಣ ಇಲ್ಲಿ ಮಗುವನ್ನು ಕರೆತಂದಿದ್ದರು. ದುರದೃಷ್ಟವಶಾತ್ ಮಗು ದಾರಿ ಮಧ್ಯೆ ಪ್ರಾಣ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..